Advertisement

ನೋಟು ನಿಷೇಧಕ್ಕೆ ವರ್ಷ; ಜನರಿಗಿಲ್ಲ ಹರ್ಷ

05:47 PM Nov 08, 2017 | |

ಚಿತ್ರದುರ್ಗ: ದೇಶದಲ್ಲಿ ಕಪ್ಪು ಹಣದ ಹಾವಳಿ ಹಾಗೂ ಭ್ರಷ್ಟಾಚಾರ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ
500 ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿ ನ. 8ಕ್ಕೆ ಒಂದು ವರ್ಷ. ಈ ಅವಧಿಯಲ್ಲಿ
ಕಪ್ಪು ಹಣ, ಭ್ರಷ್ಟಾಚಾರಕ್ಕೆ ಸಂಪೂರ್ಣ ನಿರ್ಮೂಲನೆ, ಜನಸಾಮಾನ್ಯರಿಗೆ ಕಿಂಚಿತ್ತಾದರೂ ಪ್ರಯೋಜನವಾಗಿದೆಯೇ ಎಂದು
ಪ್ರಶ್ನಿಸಿಕೊಂಡರೆ ಅಲ್ಲಿ ಕಾಣುವುದು ಬರೀ ನಿರಾಸೆ.

Advertisement

ನೋಟು ಚಲಾವಣೆ ರದ್ದತಿ ಮಾಡಿದ ಮೇಲೆ ಆರ್ಥಿಕ ಕ್ಷೇತ್ರ ಹಾಗೂ ಜನಸಾಮಾನ್ಯರ ಬದುಕಿನಲ್ಲಿ ಸುಧಾರಣೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಬಡವರು, ಮಧ್ಯಮ ವರ್ಗದವರು, ವ್ಯಾಪಾರಸ್ಥರು ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೆ 
ಪರಿಣಾಮ ಬೀರಿದೆ. ನೋಟು ಚಲಾವಣೆ ನಿಷೇಧಿಸಿದ ಮೂರ್‍ನಾಲ್ಕು ತಿಂಗಳುಗಳ ಕಾಲ ಹಣದ ಹರಿವು ಗಣನೀಯ
ಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದ ಜನರು ಪರದಾಡಬೇಕಾಯಿತು. ಪ್ರಧಾನಿ ನೀಡಿದ ದಿಢೀರ್‌ ಶಾಕ್‌ನಿಂದ ಹೊರಬರಲು ಇನ್ನೂ ಸಾಧ್ಯವಾಗುತ್ತಿಲ್ಲ.

ಬ್ಯಾಂಕ್‌ಗಳಿಗಷ್ಟೇ ಅನುಕೂಲ:
ನೋಟು ಅಮಾನ್ಯಗೊಳಿಸಿದ್ದರಿಂದ ಅನುಕೂಲವಾಗುತ್ತಿದೆ ಎಂದು ವಾದಿಸಲಾಗುತ್ತಿದೆ. ಬ್ಯಾಂಕ್‌ಗಳಲ್ಲಿ ನಗದು ರಹಿತ ವಹಿವಾಟು ಹೆಚ್ಚಾಗಿದ್ದು, ಹಣ ಬಳಕೆ ಪ್ರಮಾಣ ಶೇ. 15ರಷ್ಟು  ಕಡಿಮೆಯಾಗಿದೆ. ಬ್ಯಾಂಕುಗಳಿಗೆ ಬರುವ ಗ್ರಾಹಕರ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಎಟಿಎಂಗಳಲ್ಲಿ ಹಣ ವಹಿವಾಟು ಎಂದಿನಂತಿದೆ. ಇದನ್ನು ಹೊರತುಪಡಿಸಿದರೆ ಬೇರಾವುದೇ ಪ್ರಯೋಜನ ಆದಂತೆ ಸದ್ಯಕ್ಕೆ ಕಾಣುತ್ತಿಲ್ಲ. ನೋಟು ಚಲಾವಣೆ ರದ್ದತಿಗೆ ಮುನ್ನ ಜೂನ್‌ ತಿಂಗಳ ಅಂತ್ಯಕ್ಕೆ ವಾರ್ಷಿಕ ನಗದು ವಹಿವಾಟು ಚಿತ್ರದುರ್ಗ ಜಿಲ್ಲೆಯಲ್ಲಿ 17.97 ಲಕ್ಷ ಕೋಟಿ ರೂ. ಇತ್ತು. ನೋಟು ಚಲಾವಣೆ ರದ್ದತಿ ನಂತರ 15.287 ಲಕ್ಷ ಕೋಟಿ ರೂ. ವಹಿವಾಟು ನಡೆದಿದೆ.
ಇದರಿಂದ ಶೇ. 15ರಷ್ಟು ಹಣ ಬಳಕೆ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹಣದ ವಹಿವಾಟು ಎಂದಿನಂತಿದ್ದು ಅಲ್ಲಿ ನಗದು ರಹಿತ ವಹಿವಾಟು ಪರಿಣಾಮ ಬೀರಿಲ್ಲ.

ನಗದು ರಹಿತ ವಹಿವಾಟು ಅಷ್ಟಕ್ಕಷ್ಟೇ ವಸ್ತ್ರ ಹಾಗೂ ಹೋಟೆಲ್‌ ಉದ್ಯಮಕ್ಕೆ ತೀವ್ರ ಹಿನ್ನಡೆಯಾಗಿದ್ದರೆ, ರಿಯಲ್‌ ಎಸ್ಟೇಟ್‌ ಉದ್ಯಮದ ಪಾಡು ಹೇಳುವಂತಿಲ್ಲ. ಎಪಿಎಂಸಿ ಮಾರುಕಟ್ಟೆಗೆ ರೈತರು ಆವಕ ತರುತ್ತಿಲ್ಲ. ಕೂಲಿ ಕಾರ್ಮಿಕರ ಕೈಯಲ್ಲೂ ಹಣ ಓಡಾಡುತ್ತಿಲ್ಲ. ನಗದು ರಹಿತ ಆರ್ಥಿಕತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನೋಟು ರದ್ದತಿ ಮಾಡಲಾಗಿದ್ದರೂ ನಾಗರಿಕರು ದೈನಂದಿನ ವಹಿವಾಟನ್ನು ನಗದು ರಹಿತವಾಗಿ (ಕ್ಯಾಷ್‌ ಲೆಸ್‌) ನಡೆಸುವ ಮಟ್ಟಕ್ಕೆ ಹೋಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್‌ ಮತ್ತು ಸ್ಮಾರ್ಟ್‌ಫೋನ್‌ ಬಳಕೆ ಪ್ರಮಾಣ ಕಡಿಮೆ. ಆನ್‌ಲೈನ್‌ ವ್ಯವಹಾರ ನಡೆಯುತ್ತಿಲ್ಲ.  ನೋಟು ರದ್ದತಿ ನಂತರ ನಡೆದ ಎಪಿಎಂಸಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಎಗ್ಗಿಲ್ಲದೆ ಹಣ ಖರ್ಚು ಮಾಡಿದರು. ಇದಕ್ಕೂ ತಡೆ ಅಸಾಧ್ಯವಾಯಿತು. ಜನಸಾಮಾನ್ಯರು ಹಲವು ಬಗೆಯ ಸಮಸ್ಯೆ ಎದುರಿಸುವಂತಾಯಿತು. 

ರಿಯಲ್‌ ಎಸ್ಟೇಟ್‌ಗೆ ಭಾರೀ ಹೊಡೆತ:
ರಿಯಲ್‌ ಎಸ್ಟೇಟ್‌ ಮೇಲೆ ಅಗಾಧ ಪರಿಣಾಮ ಬೀರಿದೆ. ವ್ಯವಹಾರದಲ್ಲಿ ತೀವ್ರ ಕುಸಿತ ಉಂಟಾಗಿದ್ದು ಹೊಸದಾಗಿ ಖರೀದಿ ಮಾಡುವುದಿರಲಿ, ನೋಟು ರದ್ದತಿಗಿಂತ ಹಿಂದೆ ಆಸ್ತಿ ಖರೀದಿಗೆ ಮುಂಗಡ ಹಣ ನೀಡಿ ಛಾಪಾ ಕಾಗದದ ಮೇಲೆ ಒಪ್ಪಂದ ಮಾಡಿಕೊಂಡವರು ಆಸ್ತಿ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ. ನಿವೇಶನ, ಮನೆ ಇತರೆ ಸ್ಥಿರಾಸ್ತಿ ಖರೀದಿದಾರರ ಸಂಖ್ಯೆಯಲ್ಲೂ ಕಡಿಮೆಯಾಗಿದೆ. ಕಡಿಮೆ ಬೆಲೆಗೆ ಖರೀದಿ ಮಾಡಿ ಮರು ಮಾರಾಟ ಮಾಡುತ್ತಿದ್ದವರು ಕಾಣುತ್ತಿಲ್ಲ. ಹಾಗಾಗಿ ಮುದ್ರಾಂಕ ಶುಲ್ಕವೂ ಸಂಗ್ರಹವಾಗದೇ ಇರುವುದರಿಂದ ಸರ್ಕಾರದ ಆದಾಯಕ್ಕೂ ಕತ್ತರಿ ಬಿದ್ದಿದೆ.

Advertisement

ಎಟಿಎಂ ಸಮಸ್ಯೆಯೂ ಬಗೆಹರಿದಿಲ್ಲ:
ನೋಟು ರದ್ದತಿಯಿಂದ ಆರಂಭವಾದ ಎಟಿಎಂಗಳ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ನಗದು ರಹಿತ ವಹಿವಾಟು ನಡೆಸುವ ಭರದಲ್ಲಿ ಎಷ್ಟೋ ಎಟಿಎಂಗಳನ್ನು ಮುಚ್ಚಲಾಗಿದೆ. ಇದರಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರ ಸಮಸ್ಯೆ ಮತ್ತಷ್ಟು ಜಾಸ್ತಿಯಾಗಿದೆ. ಐತಿಹಾಸಿಕ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಅಗತ್ಯ ಮತ್ತು ಅನಿವಾರ್ಯ ಇದ್ದರೆ ಮಾತ್ರ ಸಣ್ಣ ಪುಟ್ಟ ಖರೀದಿಗಳು ನಡೆಯುತ್ತಿವೆ. ಒಟ್ಟಾರೆ ನೋಟು ಚಲಾವಣೆ ರದ್ದತಿ ಅನುಕೂಲಕ್ಕಿಂತ ಅನಾನುಕೂಲವನ್ನೇ ಉಂಟು ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನೋಟು ಚಲಾವಣೆ ರದ್ದತಿಯಿಂದ ಸ್ಪಲ್ಪ ಸುಧಾರಿಸಿಕೊಳ್ಳುವಷ್ಟರಲ್ಲಿ ಜಿಎಸ್‌ಟಿ ಜಾರಿಗೊಳಿಸಲಾಯಿತು. ನೋಟು ರದ್ದತಿ, ಜಿಎಸ್‌ಟಿ ಜಾರಿಯಿಂದ ಜನಸಾಮಾನ್ಯರು ಹೈರಾಣಾಗಿದ್ದಂತೂ ದಿಟ. ಈ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತಾವ ಅಸ್ತ್ರ ಪ್ರಯೋಗ ಮಾಡುತ್ತಾರೋ ಎಂಬ ಭೀತಿ ಕಾಡುತ್ತಿದೆ.

ಜನರಿಗೆ ಐಟಿ ನೋಟಿಸ್‌ ಭಯ
ನೋಟು ರದ್ದತಿ ಸಾಕಷ್ಟು ಪರಿಣಾಮ ಬೀರಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದರೂ ಆರು ತಿಂಗಳ ಹಿಂದಕ್ಕೆ
ಹೋಗಿದ್ದೇವೆ. ಕೇಂದ್ರ ಸರ್ಕಾರ ನಿರೀಕ್ಷೆ ಮಾಡಿದಷ್ಟು ಪ್ರಮಾಣದಲ್ಲಿ ಆನ್‌ಲೈನ್‌ ವಹಿವಾಟು ನಡೆಯುತ್ತಿಲ್ಲ. ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ದಿನ 2 ಲಕ್ಷ ರೂ.ಗಳನ್ನು ರೈತರಿಗೆ ನೀಡಲು ಇದ್ದ ನಿರ್ಬಂಧ ರದ್ದು ಮಾಡಿದ್ದರೂ ವ್ಯವಸ್ಥೆ ಸುಧಾರಿಸಿಲ್ಲ. ನೋಟು ರದ್ದತಿಯಿಂದ ಈಚೇಗೆ ಯಾರ ಖಾತೆಯಲ್ಲಿ 2 ಲಕ್ಷಕ್ಕಿಂತ ಅ ಧಿಕ ಮೊತ್ತದ ವಹಿವಾಟು ನಡೆದಿದ್ದರೆ ಅಂತಹ ಲಕ್ಷಾಂತರ ಖಾತೆಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡುತ್ತಿದೆ. ಚಿತ್ರದುರ್ಗದಲ್ಲೂ ಐದು ಸಾವಿರಕ್ಕಿಂತ ಹೆಚ್ಚಿನ ಖಾತೆದಾರರಿಗೆ ಐಟಿ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಜನತೆ ಕೈಯಲ್ಲಿ ಹಣ ಇದ್ದರೂ ಆದಾಯ ತೆರಿಗೆ ಇಲಾಖೆ ಭಯದಿಂದಾಗಿ ಬ್ಯಾಂಕ್‌ ಖಾತೆಗೆ ತುಂಬಲು ಹೆದರುತ್ತಿದ್ದಾರೆ. 
ಹಿರೇಗುಂಟನೂರು ಇ. ಚಂದ್ರಣ್ಣ, ಲೆಕ್ಕ ಪರಿಶೋಧಕರು, ಚಿತ್ರದುರ್ಗ.

ಆನ್‌ಲೈನ್‌ ವಹಿವಾಟು ತೀರಾ ಕಡಿಮೆ. ಪೇಟಿಎಂ ಇದ್ದರೂ ಗ್ರಾಹಕರೂ ಆನ್‌ಲೈನ್‌ ವ್ಯವಹಾರ ಮಾಡುತ್ತಿಲ್ಲ. ಶೇ. 1 ರಷ್ಟು ಜನ ಖರೀದಿ ಮಾಡಿದ ಔಷಧಿಗಳಿಗೆ ಪೇಟಿಎಂ ಬಳಸಿದ್ದಾರೆ. ನಾವು ಕೂಡ ಆನ್‌ಲೈನ್‌ ವ್ಯವಹಾರ ಮಾಡುತ್ತಿಲ್ಲ. ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಸ್ಪಂದಿಸಿ ಕೆಲಸ ಮಾಡದಿರುವುದು ಸೇರಿದಂತೆ ಹಲವಾರು ಸಮಸ್ಯೆಗಳಿಂದಾಗಿ ನಗದು ವಹಿವಾಟು ಮಾಡುತ್ತಿದ್ದೇವೆ.  
ಎಚ್‌.ಸಿ. ತಿಪ್ಪೇಸ್ವಾಮಿ, ಮಾಲೀಕರು, ಎಸ್‌.ಆರ್‌. ಮೆಡಿಕಲ್ಸ್‌, ಚಿತ್ರದುರ್ಗ

ಶೇ. 15ರಷ್ಟು ಹಣದ ವಹಿವಾಟು ಕಡಿಮೆಯಾಗಿದೆ. ಬ್ಯಾಂಕುಗಳಿಗೆ ಬರುವ ಗ್ರಾಹಕರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಹಳ್ಳಿಗಳಲ್ಲಿ ನಗದು ರಹಿತ ವಹಿವಾಟು ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ. ನಿಧಾನವಾಗಿ ವ್ಯವಸ್ಥೆ ಸುಧಾರಿಸುತ್ತಿದೆ.
 ನಿಂಗೇಗೌಡ, ವ್ಯವಸ್ಥಾಪಕ, ಲೀಡ್‌ ಬ್ಯಾಂಕ್‌.

ನೋಟು ರದ್ದು ಮಾಡುವ ಮುನ್ನ ಪ್ರತಿ ದಿನ 2-3 ಸಾವಿರ ರೂ. ಗಳ ವಹಿವಾಟು ನಡೆಯುತ್ತಿತ್ತು. ನೋಟು ರದ್ದು ಮಾಡಿದ
ದಿನದಿಂದ ಇಲ್ಲಿಯ ತನಕ ಪ್ರತಿ ದಿನ ಸಾವಿರ ರೂ. ವ್ಯಾಪಾರ ದಾಟಿಲ್ಲ. ಕಸುಬು ಬಿಡಬಾರದು ಎನ್ನುವ ಕಾರಣಕ್ಕೆ ಹೋಟೆಲ್‌
ನಡೆಸುತ್ತಿದ್ದೇನೆ. ಇರುವ ಹಣವನ್ನು ಬಡ್ಡಿಗೆ ಕೊಟ್ಟು ಜೀವನ ಮಾಡುವಂತಾಗಿದೆ.
ನಾಗಮಣಿ, ಹೋಟೆಲ್‌ ಉದ್ಯಮಿ.

ನೋಟು ರದ್ದತಿ ಸಂದರ್ಭದಲ್ಲಿ ವ್ಯಾಪಾರಕ್ಕೆ ಅವಕಾಶವೇ ಇರಲಿಲ್ಲ. ನಂತರ 2 ಸಾವಿರ ರೂ.ವರೆಗ ವ್ಯಾಪಾರ ಆಗುತ್ತಿದೆ.
ವ್ಯಾಪಾರ ಮಾಡಲು ಮನಸ್ಸಿದ್ದರೂ ಚಿಲ್ಲರೆ ಸಮಸ್ಯೆಯಿಂದ ವ್ಯಾಪಾರ ಇಲ್ಲದೆ ಬರಿಗೈಯಲ್ಲಿ ಬಂದಿದ್ದೇ ಹೆಚ್ಚು. ಈಗ
ಚಿಲ್ಲರೆ ಸಮಸ್ಯೆ ಇಲ್ಲದಿದ್ದರೂ ಮೊದಲಿನಷ್ಟು ವ್ಯಾಪಾರ ಆಗುತ್ತಿಲ್ಲ.
 ಚಂದ್ರಶೇಖರ್‌, ಹಳ್ಳಿಗಳಿಗೆ ಹೋಗಿ ಬಟ್ಟೆ ಮಾರಾಟ ಮಾಡುವ ವ್ಯಾಪಾರಿ.

ರಿಯಲ್‌ ಎಸ್ಟೇಟ್‌ ಉದ್ಯಮ ಮಕಾಡೆ ಮಲಗಿದೆ. ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವೇ ಇಲ್ಲದಂತ ಭಯದ
ವಾತಾವಣ ನಿರ್ಮಾಣವಾಗಿದೆ. ಅಭಿಪ್ರಾಯ ವ್ಯಕ್ತಪಡಿಸಿದರೆ ಅದಕ್ಕೂ ಒಂದು ಕಾಯ್ದೆ ತಂದರೆ ಏನು ಗತಿ ಎನ್ನುವ ಭೀತಿ ಕಾಡುತ್ತಿದೆ.  ಹೆಸರು ಹೇಳಲು ಇಚ್ಛಿಸದ ರಿಯಲ್‌ ಎಸ್ಟೇಟ್‌ ಉದ್ಯಮಿ, ಚಿತ್ರದುರ್ಗ

Advertisement

Udayavani is now on Telegram. Click here to join our channel and stay updated with the latest news.

Next