Advertisement

ವರ್ಷ ಕಳೆದರೂ ಅಭಿವೃದ್ಧಿ ಯೋಜನೆಗಳ ಸಾಕಾರವಿಲ್ಲ

05:54 PM Feb 11, 2022 | Team Udayavani |

ಬೈಂದೂರು: ಸದ್ಯದ ಪರಿಸ್ಥಿತಿಯಲ್ಲಿ ಬೈಂದೂರು ಪರಿಸ್ಥಿತಿ ಕಣ್ಣಿದ್ದು ಕುರುಡಾದಂತಿದೆ. ಬಹುನಿರೀಕ್ಷಿತ ಚಿಂತನೆಗಳು ರಾಜಕೀಯ ಹಿನ್ನೆಲೆ ಉದ್ದೇಶದಿಂದ ಘೋಷಣೆಯಾದ ಪರಿಣಾಮ ಬೈಂದೂರಿನ ಭವಿಷ್ಯದ ಪರಿಕಲ್ಪನೆಯಲ್ಲಿ ಯಾವ ಯೋಜನೆ ಕೂಡ ಆಗದೆ ಇರುವುದು ಹಿನ್ನಡೆಯಾಗಿದೆ.

Advertisement

ವಾರ್ಡ್‌ ಗೊಂದಲ,ಅಭಿವೃದ್ದಿ ಕುಂಠಿತ
ತಾ| ಕೇಂದ್ರವಾದ ಬೈಂದೂರು ಅಭಿವೃದ್ಧಿಯ ಪಥದಲ್ಲಿದೆ. ಹೀಗಾಗಿ ಮೇಲ್ದರ್ಜೆಗೇರಿದರೆ ಪ್ರಗತಿಯ ವೇಗ ಇನ್ನಷ್ಟು ಹೆಚ್ಚುತ್ತದೆ ಎಂದು ಪಡುವರಿ, ಬೈಂದೂರು, ಯಡ್ತರೆ ಗ್ರಾ.ಪಂ.ಗಳನ್ನು ಒಗ್ಗೂಡಿಸಿ ಪ.ಪಂ. ಆಗಿ ಮಾರ್ಪಡಿಸಲಾಯಿತು. ತಾ| ಕೇಂದ್ರ ದಿಂದ ಹತ್ತರಿಂದ ಇಪ್ಪತ್ತು ಕಿ.ಮೀ ದೂರವಿರುವ ಗ್ರಾಮೀಣ ಭಾಗಗಳು ಕೂಡ ಸೇರಲ್ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗ್ರಾ.ಪಂ. ಇದ್ದಾಗ ವಾರ್ಡ್‌ ಆಧಾರದಲ್ಲಿ ಮನೆಗಳನ್ನು ಹಂಚಲಾಗುತ್ತಿತ್ತು. ಆದರೆ ಇದುವರೆಗೆ ನೂತನ ಪಟ್ಟಣ ಪಂಚಾಯತ್‌ನಲ್ಲಿ ವಾರ್ಡ್‌ಗಳು ಅಂತಿಮಗೊಳ್ಳದ ಕಾರಣ ಸರಕಾರದಿಂದ ಬಂದಿರುವ 50ಕ್ಕೂ ಹೆಚ್ಚು ಮನೆಗಳನ್ನು ಹಂಚಲಾಗದೆ ವಾಪಸ್‌ ಹೋಗುವ ಸಾಧ್ಯತೆ ಇದೆ. ಒಂದು ವರ್ಷ ಕಳೆದರೂ ವಾರ್ಡ್‌ ತೀರ್ಮಾನ ಅಂತಿಮಗೊಂಡಿಲ್ಲ.

ಹಲವು ಯೋಜನೆ ಮಂದಗತಿಯಲ್ಲಿ
ಗ್ರಾ.ಪಂ.ನಲ್ಲಿ ಗರಿಷ್ಠ 50 ಲ.ರೂ. ಅನುದಾನ ದೊರೆಯುತ್ತಿತ್ತು.ಆದರೆ ಪ.ಪಂ.ನಲ್ಲಿ ಸುಮಾರು 10 ಕೋಟಿ ರೂ. ಅನುದಾನ ದೊರೆಯುವ ನಿರೀಕ್ಷೆ ಇದೆ.ಆದರೆ ಅಧಿಕಾರಿಗಳ ಸಮನ್ವಯ ಕೊರತೆ,ಸಣ್ಣಪುಟ್ಟ ಕೆಲಸಕ್ಕೂ ಹಣ ಪಾವತಿಸಬೇಕಾದ ಗೊಂದಲದಲ್ಲಿ ಹಲವು ಯೋಜನೆ ಮಂದಗತಿಯಲ್ಲಿ ಸಾಗುತ್ತಿವೆ.

ಈಗಿರುವ ಮಾಹಿತಿ ಪ್ರಕಾರ 14ನೇ ಹಣಕಾಸು ಯೋಜನೆಯಲ್ಲಿ 71 ಲ.ರೂ., 15ನೇ ಹಣಕಾಸು ಯೋಜನೆಯಲ್ಲಿ 238 ಲ.ರೂ., 2021-22ನೇ ಹಣಕಾಸು ಯೋಜನೆಯಡಿ 10 ಲ.ರೂ., ನಿರ್ಮಲ ನಗರ ಯೋಜನೆಯಲ್ಲಿ 1 ಕೋ.ರೂ., ನಗರೋತ್ಪನ್ನ ಯೋಜನೆಯಲ್ಲಿ 5 ಕೋ.ರೂ. ಅನುದಾನ ಕಡತದಲ್ಲಿ ಹಾಗೂ ಟೆಂಡರ್‌ ಪ್ರಕ್ರಿಯೆಯಲ್ಲಿ ಇವೆ. ಒಂದು ವರ್ಷದಿಂದ ಯಾವುದೇ ಮಹತ್ವಾಕಾಂಕ್ಷೆ ಯೋಜನೆಗಳು ಜನಸಾಮಾನ್ಯರನ್ನು ಮುಟ್ಟಿಲ್ಲ. ಅಧಿಕಾರಿಗಳು,
ಸಂಸದರು, ಶಾಸಕರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ಎಸ್‌.ಎಲ್‌.ಆರ್‌.ಎಂ. ಘಟಕಗಳಿಲ್ಲ, ಬೈಂದೂರು ಮುಖ್ಯ ರಸ್ತೆ ಅಭಿವೃದ್ಧಿಯಾಗಿಲ್ಲ ಬೈಂದೂರು ದಾಖಲೆಯಲ್ಲಷ್ಟೆ ತಾ| ಕೇಂದ್ರ. ಆದರೆ ಪ್ರಮುಖ ತಾಲೂಕು ಕೇಂದ್ರದಲ್ಲಿ ಕಸ ವಿಲೇವಾರಿಗೆ ಎಸ್‌.ಎಲ್‌.ಆರ್‌.ಎಂ. ಘಟಕಕ್ಕೆ ಸ್ಥಳ ನಿಗದಿಯಾಗಿಲ್ಲ. ತಗ್ಗರ್ಸೆ ಬಳಿ ಮೀಸಲಿರಿಸಿದ ಜಾಗ ಕೂಡ ರಾಜಕೀಯ ಪ್ರಭಾವದಲ್ಲಿ ಅಧಿಕಾರಿಗಳಿಂದ ಕೈತಪ್ಪಿದೆ.

Advertisement

ಮಾತ್ರವಲ್ಲ ಹಲವು ಸಮಯದಿಂದ ಬೇಡಿಕೆ ಇರುವ ಬೈಂದೂರು ಮುಖ್ಯ ರಸ್ತೆ ವಾಹನ ದಟ್ಟಣೆ ಮತ್ತು ಅನಧಿಕೃತ ಗೂಡಂಗಡಿಗಳಿಂದ ನಡೆ ದಾಡಲು ಕೂಡ ಸಾಧ್ಯವಾಗುತ್ತಿಲ್ಲ. ಆದರೆ ಈ ಬಗ್ಗೆ ಪ.ಪಂ. ಅಧಿಕಾರಿಗಳು ಗಮನಹರಿಸಿದಂತಿಲ್ಲ. ಅಧಿಕಾರಿಗಳಿಗೆ ವೈಯಕ್ತಿಕ ಆದಾಯದ ಯೋಜನೆ ಹೊರತುಪಡಿಸಿ ಊರಿನ ಅಭಿವೃದ್ದಿ ಯೋಜನೆಗೆ ಗಮನಹರಿಸಿಲ್ಲ. ಒಟ್ಟಾರೆಯಾಗಿ ಪಟ್ಟಣ ಪಂಚಾಯತ್‌ ಮೇಲ್ದರ್ಜೆಗೇರಿದ ಬಳಿಕ ಅಭಿವೃದ್ದಿ ವೇಗ ಕುಂಠಿತವಾಗಿರುವುದು ಒಂದೆಡೆ ಯಾದರೆ ಸಮರ್ಪಕ ಯೋಜನೆಗಳ ಮೂಲಕ ಬೈಂದೂರಿನ ಅಭಿವೃದ್ದಿಗೊಂದು ಮಹತ್ವಾಕಾಂಕ್ಷೆ ಯೋಜನೆ ರೂಪಿಸಲು ಅಧಿಕಾರಿಗಳು ಸೋತಿರುವುದು ಇಲ್ಲಿನ ಬೆಳವಣಿಗೆಗೆ ಹಿನ್ನಡೆ ಯಾಗಿದೆ.ಹೀಗಾಗಿ ಸಂಸದರು, ಶಾಸಕರು ಕೇಂದ್ರ ಸ್ಥಾನದ ಅಭಿವೃದ್ದಿ ಕುರಿತು ಗಮನಹರಿಸಬೇಕಿದೆ. ಮೂಲಸೌಕರ್ಯ  ಈಡೇರಿಕೆಗೆ ಪ್ರಯತ್ನಿಸಬೇಕಾಗಿದೆ.

ಕೃಷಿಕರಿಗೆ ಸಮಸ್ಯೆ; ನೂರೆಂಟು ನಿಯಮ, ದುಪ್ಪಟ್ಟು ತೆರಿಗೆ ಬೈಂದೂರು ನಗರ ಪ್ರದೇಶದ ನಾಲ್ಕೈದು ಕಿ.ಮೀ. ವ್ಯಾಪ್ತಿ ಪಟ್ಟಣ ಪ್ರದೇಶಗಳನ್ನು ಒಳಗೊಂಡಿದೆ. ಇನ್ನುಳಿದಂತೆ ತೂದಳ್ಳಿ, ಗಂಗನಾಡು, ತಗ್ಗರ್ಸೆ, ಮಧ್ದೋಡಿ, ಹೊಸೂರು, ಹಾಲಂಬೇರು ಮುಂತಾದ ಕೃಷಿ ಪ್ರಧಾನ ಹಳ್ಳಿಗಳು ತರಾತುರಿಯಲ್ಲಿ ಪ.ಪಂ. ಪಟ್ಟಿಯಲ್ಲಿ ಸೇರಿಕೊಂಡಿವೆ. ಇದರಿಂದಾಗಿ ಕೃಷಿಯನ್ನು ನಂಬಿಕೊಂಡಿರುವ ರೈತರಿಗೆ ಪ.ಪಂ.ನ ಕಾನೂನು ಕಬ್ಬಿಣದ ಕಡಲೆಯಂತಾಗಿಬಿಟ್ಟಿದೆ. ಮಾತ್ರವಲ್ಲದೆ ಸಣ್ಣ ಕಟ್ಟಡ ನಿರ್ಮಾಣಕ್ಕೂ ಕೂಡ ನೂರೆಂಟು ನಿಯಮ, ದುಪ್ಪಟ್ಟು ತೆರಿಗೆ ಪಾವತಿಸಬೇಕಾಗಿದೆ. ಕನಿಷ್ಠ 20 ವಾರ್ಡ್‌ ರಚನೆಯಾಗಬೇಕಾದ ಬೈಂದೂರು ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ, ವಿನ್ಯಾಸ ನಕ್ಷೆ, ಪ್ರಾಧಿಕಾರದ ಅನುಮತಿ ಬೇಕಾಗಿರುವುದರಿಂದ ಕುಗ್ರಾಮದಿಂದ ಬೈಂದೂರಿಗೆ ಬಂದು ಅಲ್ಲಿಂದ ಉಡುಪಿಗೆ ಅಲೆಯಬೇಕಾಗಿರುವುದರಿಂದ ನೂರಾರು ಎಕರೆ ಕೃಷಿಭೂಮಿ ಪ್ರಾಧಿಕಾರದ ಅನುಮತಿಗೆ ಕಾಯುತ್ತಿದೆ. ಆರಂಭದಲ್ಲಿ ನಿರೀಕ್ಷೆ ಮೂಡಿಸಿದ ಪ.ಪಂ. ನಿರ್ಧಾರ ಕೃಷಿಕರ ಪಾಲಿಗೆ ಉರುಳಾಗಿ ಪರಿಣಮಿಸಿದೆ.

ಅನುದಾನ ಟೆಂಡರ್‌ ಪ್ರಕ್ರಿಯೆಯಲ್ಲಿ
ಪ. ಪಂ. ಮೇಲ್ದರ್ಜೆಗೇರಿದ ಬಳಿಕ 10 ಕೋಟಿಗೂ ಅಧಿಕ ಅನುದಾನ ಟೆಂಡರ್‌ ಪ್ರಕ್ರಿಯೆಯಲ್ಲಿದ್ದು ಸದ್ಯದಲ್ಲೆ ಅಂತಿಮಗೊಳ್ಳಲಿದೆ. ಈಗಾಗಲೇ ಹಲವು ರಸ್ತೆ, ಬೀದಿದೀಪ,ಕುಡಿಯುವ ನೀರಿನ ಯೋಜನೆ ಆರಂಭಗೊಳ್ಳಲಿವೆ. ಗ್ರಾಮೀಣ ಭಾಗದಲ್ಲಿ ಯೋಜನೆ ತಲುಪಿಸಲು ಸಮಸ್ಯೆಯಾಗಿರುವುದು ಸಹಜ. ಅದರ ಬಗ್ಗೆ ಆಡಳಿತಾತ್ಮಕ ಚಿಂತನೆ ಬೇಕಿದೆ. ಹಂತ ಹಂತವಾಗಿ ಪ್ರತಿ ಗ್ರಾಮಕ್ಕೂ ಸಮರ್ಪಕ ಯೋಜನೆ ನೀಡಲಾಗುವುದು.ವಾರ್ಡ್‌ ರಚನೆ ಸದ್ಯದಲ್ಲೇ ಅಂತಿಮಗೊಳ್ಳಲಿದೆ.
-ನವೀನ್‌, ಪ.ಪಂ. ಮುಖ್ಯಾಧಿಕಾರಿ, ಬೈಂದೂರು

ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next