Advertisement

ಸ್ಕೂಟರ್‌ನಲ್ಲಿ ಯಾತ್ರೆ, ಪುತ್ತೂರಿಗೆ ಬಂದ ತಾಯಿ-ಪುತ್ರ

04:59 AM Jan 06, 2019 | |

ಪುತ್ತೂರು : ತಾಯಿಯ ಅಭಿಲಾಷೆಯನ್ನು ಈಡೇರಿಸುವುದಕ್ಕಾಗಿ ಉದ್ಯೋಗ ತೊರೆದ ಪುತ್ರ, ಅವರನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಪ್ರಮುಖ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದು, ಈಗ ಪುತ್ತೂರಿಗೆ ಆಗಮಿಸಿದ್ದಾರೆ.

Advertisement

ಮೈಸೂರು ನಿವಾಸಿ ಡಿ, ಕೃಷ್ಣಮೂರ್ತಿ ಕಾರ್ಪೊರೇಟ್‌ ಕಂಪೆನಿಯೊಂದರ ಟೀಮ್‌ ಲೀಡರ್‌ ಆಗಿದ್ದವರು. ತಮ್ಮ ತಂದೆ ದಕ್ಷಿಣಾಮೂರ್ತಿ ಅವರ ನಿಧನ ಹೊಂದಿದ ಅನಂತರ ತಾಯಿ ಚೂಡಾರತ್ನ ಅವರ ಆಸೆಯಂತೆ ಒಂದು ವರ್ಷದಿಂದ ದೇಶದ ಎಲ್ಲ ಶ್ರದ್ಧಾ ಕೇಂದ್ರಗಳಿಗೆ ಕರೆದೊಯ್ಯುತ್ತಿದ್ದಾರೆ.

2017ರ ಜ.16ರಂದು ಮೈಸೂರು ಬಿಟ್ಟಿರುವ ತಾಯಿ-ಪುತ್ರ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾ, ತೆಲಂಗಾಣ ರಾಜ್ಯಗಳಲ್ಲಿ ಸಂಚರಿಸಿದ್ದಾರೆ. ಎರಡು ದಿನಗಳಿಂದ ಪುತ್ತೂರಿನಲ್ಲಿದ್ದಾರೆ. ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲಿ ಈವರೆಗೆ 29 ಸಾವಿರ ಕಿ.ಮೀ. ಪಯಣಿಸಿದ್ದು, ಮೈಸೂರು, ನಂಜನಗೂಡು, ಗುಂಡ್ಲು ಪೇಟೆ, ಊಟಿ, ಪಾಲಕ್ಕಾಡ್‌, ಪಟ್ಟಾಂಬಿ, ತೃಶ್ಶೂರ್‌, ಕನ್ಯಾಕುಮಾರಿ, ಶಿವಕಾಶಿ, ರಾಮೇಶ್ವರಂ, ತಂಜಾವೂರು, ಕುಂಭ ಕೋಣಂ, ತಿರುಚೆಂದೂರು, ತಿರುಪತಿ,
ಕದ್ರಿ, ಪುಟ್ಟಪರ್ತಿ, ಕಡಪ, ಕಾಳಹಸ್ತಿ, ವಿಜಯವಾಡ, ಧರ್ಮಸ್ಥಳ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಮಾಣಿಲ, ಒಡಿಯೂರು, ಅಳಿಕೆ, ಪುತ್ತೂರು ಕೆಮ್ಮಿಂಜೆ ದೇವಾಲಯಗಳಿಗೆ ಭೇಟಿ ನೀಡಿದ್ದು, ಕೆಮ್ಮಿಂಜೆಯ ಮನೆಯೊಂದರಲ್ಲಿ ತಂಗಿದ್ದಾರೆ.  ಮುಂದೆ ಹನುಮಗಿರಿ, ಸುಬ್ರಹ್ಮಣ್ಯ ದೇವಾಲ ಯಗಳನ್ನು ಸಂದರ್ಶಿಸುವ ಇರಾದೆಯನ್ನು ಹೊಂದಿದ್ದಾರೆ.

ಕಾಣಿಕೆ ತೆಗೆದುಕೊಂಡಿಲ್ಲ
ತಂದೆ ತೀರಿಕೊಂಡ ಬಳಿಕ ಮನೆಯಲ್ಲಿ ತಾಯಿ ಒಬ್ಬಂಟಿಯಾಗಿದ್ದರು. ನಾನು ರಜೆಯಲ್ಲಿ ಮನೆಗೆ ಬರುವಾಗ, ‘ನಾನು ಬೇಲೂರು, ಹಳೆಬೀಡನ್ನೂ ನೋಡಿಲ್ಲ ಮಗ!’ ಎಂದು ತಾಯಿ ಹೇಳಿದ್ದು ಮನ ಕಲಕಿತು. ಅಂದೇ ನಿರ್ಧಾರ ಮಾಡಿದೆ. ‘ಅಮ್ಮ, ನಿನಗೆ ನಾನು ಭಾರತವನ್ನೇ ದರ್ಶನ ಮಾಡಿಸ್ತೀನಿ’ ಅಂತ ಮಾತು ಕೊಟ್ಟು, ಕೆಲಸ ತೊರೆದೆ. ಹದಿಮೂರು ವರ್ಷ ಕೆಲಸ ಮಾಡಿದ್ದರಲ್ಲಿ ಉಳಿಸಿರುವ ಹಣವನ್ನು ತಿರುಗಾಟದ ಖರ್ಚಿಗೆ ಬಳಸುತ್ತಿದ್ದೇನೆ. ಮನೆ ಹಾಗೂ ಮಠಗಳಲ್ಲಿ ಆಶ್ರಯ ಪಡೆದಿದ್ದೇವೆ. ಆದರೆ, ಯಾರಿಂದಲೂ ಹಣ ಸ್ವೀಕರಿಸಿಲ್ಲ, 2001ರಲ್ಲಿ ತಂದೆಯವರು ಖರೀದಿಸಿದ ಸ್ಕೂಟರ್‌ನಲ್ಲೇ ಪ್ರಯಾಣಿಸುತ್ತಿದ್ದೇವೆ. ತಂದೆ ನಮ್ಮ ಜತೆಗೇ ಇದ್ದಾರೆ ಎನ್ನುವ ಅನುಭವ ಆಗುತ್ತಿದೆ. 

ನಮ್ಮ ಜತೆ ಬಟ್ಟೆ ಬರೆ ಇತ್ಯಾದಿಗಳ ಆರು ಚೀಲಗಳಿವೆ. ರಕ್ಷಣೆಗಾಗಿ ಎರಡು ಹೆಲ್ಮೆಟ್, ಚಾಪೆ, ಬೆಡ್‌ಶೀಟ್, ಅಡುಗೆ ಸಾಮಾನು ಇರುತ್ತದೆ. ಆರೋಗ್ಯದ ದೃಷ್ಟಿಯಿಂದ ಹೊರಗಡೆ ಏನೂ ತಿನ್ನುತ್ತಿಲ್ಲ ಎಂದು ಕೃಷ್ಣಕುಮಾರ್‌ ವಿವರಿಸಿದರು.ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಎಲ್ಲ ಊರಿನವರ ಪರಿಚಯ ಆಗಿದೆ. ಅವರ ಸಂಪರ್ಕ ಇರುವ ಕಾರಣ ಆಯಾ ಭಾಗಗಳಿಗೆ ತೆರಳಿದಾಗ ಅವರ ಸಲಹೆ, ಸೂಚನೆ ಪಡೆಯುತ್ತೇನೆ. ತಾಯಿಯ ಸಹಪಾಠಿಗಳಾದ ವಿಟ್ಲ ಕಜೆಯ ವಿದ್ಯಾ ಲಕ್ಷ್ಮೀ, ಸಾಗರದ ಚಂದ್ರಮತಿ ಅವರನ್ನು ಭೇಟಿ ಮಾಡಿದ್ದು, ತಾಯಿ ತುಂಬ ಸಂತೋಷ ಪಟ್ಟಿದ್ದಾರೆ ಎಂದು ಹೇಳಿದರು.

Advertisement

ಆತ್ಮ ತೃಪ್ತಿಗಾಗಿ ಯಾತ್ರೆ 
ಯಾವುದೇ ಗುರಿ ಇಟ್ಟುಕೊಂಡು ಈ ಯಾತ್ರೆ ಕೈಗೊಂಡಿಲ್ಲ. ಆತ್ಮತೃಪ್ತಿಗಾಗಿ ಮಾಡುತ್ತಿದ್ದೇವೆ. ಸಮಾಜ ನಮ್ಮನ್ನು ಕಾಪಾಡಿದೆ. 21ನೇ ವಯಸ್ಸಿನಲ್ಲೇ ಬ್ರಹ್ಮಚರ್ಯದ ಸಂಕಲ್ಪ ತೊಟ್ಟಿರುವುದರಿಂದ ಸಾಂಸಾರಿಕ ಜೀವನದ ಕುರಿತಾಗಿಯೂ ಆಲೋಚಿಸಿಲ್ಲ. ಕ್ಷೇತ್ರಗಳನ್ನು ಸಂದರ್ಶಿಸುವ ಆಸೆ ತಾಯಿಯವರಿಗೆ ಅಪಾರವಾಗಿತ್ತು. ಅದರಿಂದಾಗಿಯೇ ಅವರಲ್ಲಿ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಶಕ್ತಿ ಇದೆ.
ಡಿ. ಕೃಷ್ಣಕುಮಾರ್‌,
ಮೈಸೂರು

ಪುಣ್ಯ ಮಾಡಿದ್ದೇನೆ
ಇಂತಹ ಪುತ್ರನನ್ನು ಪಡೆ ಯಲು ನಿಜಕ್ಕೂ ಪುಣ್ಯ ಮಾಡಿದ್ದೆ. ಎಲ್ಲ ಕ್ಷೇತ್ರಗಳನ್ನು ಸಂದರ್ಶಿ ಸಿರುವುದು ಖುಷಿ ನೀಡಿದೆ. ಪುತ್ರನ ಪ್ರೀತಿಗೆ ಮನ ತುಂಬಿದೆ. 
ಚೂಡಾರತ್ನ್ನಾ, 
ಯಾತ್ರೆಗೆ ಬಂದ ತಾಯಿ

Advertisement

Udayavani is now on Telegram. Click here to join our channel and stay updated with the latest news.

Next