ಶಿವಮೊಗ್ಗ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಜರಗಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ 2,500 ಕೋಟಿ ರೂ. ನೀಡುವಂತೆ ಕೇಳಿದ್ದರು ಎಂದು ಯತ್ನಾಳ್ ಹೇಳಿದ್ದಾರೆ.
ಅವರಿಗೆ ಈ ರೀತಿ ಒತ್ತಡ ಅಥವಾ ಆಫರ್ ಕೊಟ್ಟವರು ಯಾರು ಎಂಬುದನ್ನು ಅವರೇ ತಿಳಿಸಬೇಕು. ಅವರ ಈ ರೀತಿಯ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದು, ಬಿಜೆಪಿ ನಾಯಕರು ಸೂಕ್ತ ಸಮಯದಲ್ಲಿ ಯತ್ನಾಳ್ ವಿರುದ್ಧ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಇತ್ತೀಚೆಗೆ ಬಿಜೆಪಿಯ ಹಲವು ಸಚಿವರ ಮೇಲೆ ಕಮಿಷನ್ ಆರೋಪಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಸಮೀಪಿಸುತ್ತಿರುವುದರಿಂದ ವಿಪಕ್ಷಗಳು ಕಮಿಷನ್ ಹಗರಣ ಸೃಷ್ಟಿ ಮಾಡುತ್ತಿವೆ ಎಂದರು. ಪಕ್ಷ ನನಗೆ ಈಗಾಗಲೇ ಸೂಕ್ತ ಸ್ಥಾನಮಾನ ನೀಡಿದೆ. ಸಂಪುಟ ಸೇರುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ನಾನಾಗಲೀ, ನಮ್ಮ ಕುಟುಂಬವಾಗಲೀ ಸಂಪುಟ ಸೇರ್ಪಡೆಗೆ ಒತ್ತಡ ಹೇರಿಲ್ಲ ಎಂದರು.