Advertisement
ಬೆಳಗ್ಗೆ ಕಲಾಪ ಆರಂಭವಾಗಿ ಸಂಶೋಧಕ ಷ.ಶೆಟ್ಟರ್ ಸೇರಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಯವರನ್ನು ಪಾಕ್ ಏಜೆಂಟ್ ಎನ್ನುವ ಮೂಲಕ ಇಡೀ ಸ್ವಾತಂತ್ರ್ಯ ಚಳವಳಿಯನ್ನೇ ಯತ್ನಾಳ್ ಅಪಮಾನ ಮಾಡಿದ್ದಾರೆ. ಯತ್ನಾಳ್ ಅವರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಮತ್ತು ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದರು.
Related Articles
Advertisement
ಪುನಃ ಸದನ ಆರಂಭವಾಗುತ್ತಿದ್ದಂತೆ, ವಿಪಕ್ಷ ಸದಸ್ಯರು ಸದನದ ಬಾವಿಯಲ್ಲಿ ಪ್ರತಿಭಟನೆ ಮುಂದುವರಿಸಿದರು. ಈ ಮಧ್ಯೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಸದ ನದ ನಿಯಮಾವಳಿ ಪಾಲನೆಯಾಗಿಲ್ಲ. ಕ್ರಿಯಾ ಲೋಪವಾಗಿದೆ. ದೊರೆಸ್ವಾಮಿಯವರ ಎಲ್ಲ ಚಟುವಟಿಕೆಗಳನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನುವ ದೃಷ್ಟಿಯಲ್ಲಿ ನೋಡಬೇಕೇ? ಕನ್ನಯ್ಯ ಕುಮಾರ್ ಮತ್ತು ತುಕ್ಡೆ, ತುಕ್ಡೆ ಗ್ಯಾಂಗ್ ಜತೆಗೂ ಅವರು ಗುರುತಿಸಿಕೊಂಡಿದ್ದಾರೆ. ಇದಕ್ಕೆಲ್ಲ ಏನೆನ್ನಬೇಕು ಎನ್ನುತ್ತಿದ್ದಂತೆ ಸದನದಲ್ಲಿ ಗದ್ದಲ ಕೋಲಾಹಲವುಂಟಾಯಿತು.
ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಈ ಮನೆಯ ಸದಸ್ಯರಲ್ಲದವರಿಗೆ ಸಂತಾಪ ಸೂಚಿಸುತ್ತೇವೆ. ಹೀಗಿರುವಾಗ ಇಂತಹ ವಿಷಯ ಚರ್ಚೆ ಮಾಡುವುದರಲ್ಲಿ ತಪ್ಪಿಲ್ಲ. ಹಾಗೆಯೇ ಯತ್ನಾಳ್ ಅವರು ಕ್ಷಮೆ ಕೇಳಬೇಕು. ಅನಗತ್ಯ ಚರ್ಚೆ ಸರಿಯಲ್ಲ ಎಂದರು. ವಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಸಭಾಪತಿಯವರು ಸಂಜೆ 4 ಗಂಟೆವರೆಗೆ ಕಲಾಪವನ್ನು ಮುಂದೂಡಿದರು. ಸಂಜೆಯ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷದವರು ಮತ್ತೆ ಪ್ರತಿಭಟಿಸಿದರು.ಸಭಾಪತಿ ಪ್ರತಾಪ್ ಶೆಟ್ಟಯವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.
ಯತ್ನಾಳ್ ಪರ ಬಿಜೆಪಿ ಸಮರ್ಥನೆ: ವಿಧಾನಮಂಡಲದಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ಹೇಳಿಕೆ ನೀಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿಲುವನ್ನು ಉಭಯ ಸದನಗಳಲ್ಲೂ ಬೆಂಬಲಿಸಿ ಅವರ ಪರ ಸಮರ್ಥನೆಗೆ ನಿಲ್ಲಲು ಬಿಜೆಪಿ ನಿರ್ಧರಿಸಿದೆ. ಎಚ್.ಎಸ್. ದೊರೆಸ್ವಾಮಿಯವರ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಖಂಡಿಸಿ ಕ್ಷಮೆಗೆ ಆಗ್ರಹಿಸಿ ಕಾಂಗ್ರೆಸ್ ಉಭಯ ಸದನಗಳಲ್ಲಿ ಧರಣಿ ಆರಂಭಿಸಿದೆ.
ಆದರೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಪರವಾಗಿ ಬಿಜೆಪಿಯು ದೊರೆಸ್ವಾಮಿಯವರ ಕುರಿತು ಹೆಚ್ಚು ಚರ್ಚಿಸದೆ ಕಾಂಗ್ರೆಸ್ ಧೋರಣೆಯನ್ನೇ ಪ್ರಶ್ನಿಸುವುದನ್ನು ಮುಂದುವರಿಸುವ ಮೂಲಕ ಆ ಪಕ್ಷದ ನಿಲುವನ್ನು ಬಯಲು ಮಾಡಲು ಕಾರ್ಯತಂತ್ರ ಹೆಣೆದಿದೆ. ಎಚ್.ಎಸ್.ದೊರೆಸ್ವಾಮಿಯವರ ಪರವಾಗಿ ನಿಲ್ಲುವ ಮೂಲಕ ನಕ್ಸಲ್ ಚಟುವಟಿಕೆ, ದೇಶ ದ್ರೋಹದ ಕೃತ್ಯಗಳಿಗೂ ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂಬುದಾಗಿ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಧೋರಣೆಯನ್ನೇ ಉಗ್ರವಾಗಿ ಖಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಯತ್ನಾಳ್ ನಿಲುವು ಬೆಂಬಲಿಸುತ್ತಲೇ ಕಾಂಗ್ರೆಸ್‌ನ ಧೋರಣೆಯನ್ನು ವಿರೋಧಿಸಲು ಬಿಜೆಪಿ ಶಾಸಕರು ಅಣಿಯಾಗುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.