ವಿಜಯಪುರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಯಿ ಮೇಲೆ ಆಣೆ ಮಾಡಿ ಪಂಚಮಸಾಲಿ ಸಮುದಾಯಕ್ಕೆ ಡಿ.29 ರಂದು 2ಎ ಮೀಸಲು ಕಲ್ಪುಸುವುದಾಗಿ ಹೇಳಿದ್ದಾರೆ. ವಚನ ಭ್ರಷ್ಟರಾದರೆ ದಶದಕ ಹಿಂದೆ ಕುಮಾರಸ್ವಾಮಿ ಅವರಿಗೆ ಆದ ಗತಿ ಬೊಮ್ಮಾಯಿ ಅವರಿಗೂ ಬರಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದರು.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಶಕದ ಹಿಂದೆ ಬಿಜೆಪಿ ಪಕ್ಷಕ್ಕೆ ಅಧಿಕಾರ ಹಸ್ತಾಂತರಿಸದೇ ವಚನ ಭ್ರಷ್ಟರಾದ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂತು. ಹೀಗಾಗಿ ಬೊಮ್ಮಾಯಿ ಅವರು ಮಾತು ತಪ್ಪುವುದಿಲ್ಲ, ವಚನ ಭ್ರಷ್ಟರಾಗದೇ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮಾಜಕ್ಕೆ ಮೀಸಲು ಕಲ್ಪಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇತರೆ ಹಲವು ಸಮಾಜಗಳು ಮೀಸಲು ಬೇಡಿಕೆ ಇರಿಸಿದ್ದು, ಸಂವಿಧಾನದಲ್ಲಿ ಎಲ್ಲರಿಗೂ ಮೀಸಲು ಕೇಳುವ ಹಕ್ಕಿದೆ, ಸರ್ಕಾರ ನ್ಯಾಯ ಸಮ್ಮತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಸಂಪುಟ ಪುನರಚನೆ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನನಗೆ ಮಂತ್ರಿ ಸ್ಥಾನ ಬೇಡ, ನೀವು ಈ ವಿಷಯದಲ್ಲಿ ಕಥೆ ಹೇಳುವುದೂ ಬೇಡ. ನಮ್ಮ ಸಮಾಜಕ್ಕೆ 2ಎ ಮೀಸಲು ಕಲ್ಪಿಸಿ ಎಂದಷ್ಟೇ ಹೇಳಿದ್ದೇನೆ. ಅದೊಂದೇ ನನ್ನ ಮುಂದಿರುವ ಗುರಿ ಎಂದರು.
ಹೀಗಾಗಿ ನಾನು ಕೇವಲ ಮೂರು ತಿಂಗಳು ಅಧಿಕಾರ ಇರುವ ಸಂಪುಟ ಪುನಾರಚನೆ, ವಿಸ್ತರಣೆ ರಗಳೆಯಲ್ಲಿಲ್ಲ. ರಮೇಶ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ, ಸಿ.ಪಿ.ಯೋಗಿಶ್ವರ ಮಂತ್ರಿಮಂಡಲ ಸೇರುವ ನಿರೀಕ್ಷೆಯಲ್ಲಿದ್ದಾರೆ. ಅಂಥವರನ್ನು ಬೇಕಿದ್ದರೆ ಮಂತ್ರಿ ಮಾಡಿಕೊಳ್ಳಲಿ. ನಮಗೆ ಪಂಚಮಸಾಲಿ ಮೀಸಲು ಕೊಟ್ಟರೆ ಸಾಕು ಎಂದರು.
ಬಿಜೆಪಿ ಪಕ್ಷ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದಷ್ಟೇ ನಮ್ಮ ಮುಂದಿರುವ ಗುರಿ. ಹೀಗಾಗಿ ಯಾರು ಹೊಸ ಪಕ್ಷ ಕಟ್ಟಿದರು, ಯಾರು ಪಕ್ಷ ಬಿಟ್ಟರು ಎಂದು ಯೋಚಿಸುವ ಕಾಲವಿದಲ್ಲ. ಪಕ್ಷ ಬಿಡುವವರು ಇದ್ದಂತೆ ಹೊಸದಾಗಿ ಪಕ್ಷಕ್ಕೆ ಬರುವವರೂ ಇರುತ್ತಾರೆ. ಕಾರಣ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದರು.