Advertisement

Politics: ಯತ್ನಾಳ್‌, ಸೋಮಣ್ಣ, ಬೆಲ್ಲದ್‌ ಅತೃಪ್ತಿ ಶೀಘ್ರ ಶಮನ- ಈಶ್ವರಪ್ಪ

12:36 AM Dec 23, 2023 | Team Udayavani |

ಬಾಗಲಕೋಟೆ: ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಅಸಮಾಧಾನ ಇರುವುದು ನಿಜ. ಆದರೆ ಅವರು ಪಕ್ಷದ ವಿರುದ್ಧ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಶೀಘ್ರ ಎಲ್ಲವೂ ಸರಿಯಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೂವರು ನಮ್ಮವರೇ. ಅಸಮಾಧಾನವನ್ನು ಬಹಿರಂಗವಾಗಿ ಹೇಳಿದ್ದಾರೆ. ದಿಲ್ಲಿಯಲ್ಲಿ ಪಕ್ಷದ ಹಿರಿಯರನ್ನು ಭೇಟಿ ಮಾಡಿದ ಬಳಿಕ ವಿಜಯೇಂದ್ರ ಅವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಎಲ್ಲವೂ ಸರಿಯಾಗುತ್ತದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನವನ್ನೂ ಗೆದ್ದು ತೋರಿಸುತ್ತೇವೆ ಎಂದರು.

Advertisement

ರಾಜ್ಯ ಬಿಜೆಪಿಯಲ್ಲಿ ನಿನ್ನೆಯಿಂದ ತಿರುವು ಆರಂಭಗೊಂಡಿದೆ. ಜೆಡಿಎಸ್‌ ನಾಯಕರಾದ ಎಚ್‌.ಡಿ. ದೇವೇ ಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ನಿಖೀಲ್‌ ಮತ್ತು ತಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಲೋಕಸಭೆ, ಜಿಪಂ-ತಾಪಂ ಚುನಾವಣೆಗೆ ಸರಿಯಾದ ಮಾರ್ಗದರ್ಶನ ಮಾಡಿ ಪ್ರಧಾನಿ ಮೋದಿ ಕಳುಹಿಸಿದ್ದಾರೆ. ಇಡೀ ರಾಜ್ಯದ ಜನ ಮೋದಿ ಜತೆಗಿದ್ದಾರೆ ಎಂದರು.

ಸಿಎಂ ಮಾಡದವರು ಪ್ರಧಾನಿ ಮಾಡುತ್ತಾರಾ?
ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಕಾಲಿಡುವ ಮೊದಲೇ ಮಲ್ಲಿಕಾರ್ಜುನ ಖರ್ಗೆ ಆ ಪಕ್ಷದ ಪ್ರಮುಖ ನಾಯಕರಾಗಿದ್ದರು. ಆದರೆ ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿ ಆದರು. ದಲಿತ-ಹಿಂದುಳಿದವರ ನಾಯಕ ಎನ್ನುವ ಸಿದ್ದರಾಮಯ್ಯ ಅವರು ಖರ್ಗೆಯನ್ನು ಸಿಎಂ ಮಾಡಲು ಯಾಕೆ ಬಿಡಲಿಲ್ಲ? ಖರ್ಗೆ ಅವರನ್ನು ಮುಖ್ಯಮಂತ್ರಿಯೇ ಮಾಡಲಿಲ್ಲ. ಇನ್ನು ಪ್ರಧಾನಿ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ಗೆಲ್ಲುವ ವಿಶ್ವಾಸವಿಲ್ಲ
ಕಾಂಗ್ರೆಸ್‌ನ ಹಲವು ನಾಯಕರೇ, ಖಾಸಗಿಯಾಗಿ ನರೇಂದ್ರ ಮೋದಿ ಅವರೇ ಪ್ರಧಾನಿ ಆಗಲಿ ಎನ್ನುತ್ತಾರೆ. ಖರ್ಗೆ ಅವರು ಮೊದಲು ಲೋಕಸಭೆ ಚುನಾವಣೆ ಗೆಲ್ಲೋಣ. ಆ ಮೇಲೆ ನೋಡೋಣ ಎಂದು ಹೇಳಿದ್ದಾರೆ. ಅವರಿಗೂ ಗೆಲ್ಲುವ ವಿಶ್ವಾಸವಿಲ್ಲ. ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಖರ್ಗೆ ಹೆಸರು ಹೇಳಿದ್ದು ಮಮತಾ ಬ್ಯಾನರ್ಜಿ ಮತ್ತು ಕೇಜ್ರಿವಾಲ್‌ ಅವರೇ ಹೊರತು ಕಾಂಗ್ರೆಸ್‌ನವರಲ್ಲ. ಇದನ್ನು ಸೋನಿಯಾ, ರಾಹುಲ್‌ ಗಾಂಧಿ ಸ್ವಾಗತಿಸಿದ್ದಾರಾ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next