Advertisement

ವೀರಭದ್ರನಾದ ಯತಿರಾಜ್‌

09:57 AM Feb 06, 2020 | Lakshmi GovindaRaj |

ಕನ್ನಡದಲ್ಲಿ ಈಗಾಗಲೇ ಹಲವು ವಿಭಿನ್ನ ಕಥಾಹಂದರವುಳ್ಳ ಚಿತ್ರಗಳು ಹೊಸ ನಿರೀಕ್ಷೆ ಹುಟ್ಟಿಸುತ್ತಿರುವುದು ಗೊತ್ತೇ ಇದೆ. ಅದರಲ್ಲೂ ಶೀರ್ಷಿಕೆ ಮೂಲಕವೇ ಒಂದಷ್ಟು ಕುತೂಹಲ ಕೆರಳಿಸುವುದುಂಟು. ಆ ಸಾಲಿಗೆ ಈಗ “ಓಜಸ್‌’ ಎಂಬ ಸಿನಿಮಾವೂ ಸೇರಿದೆ. ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟ,ನಟಿಯರನ್ನು ಹೊರತುಪಡಿಸಿದರೆ, ತೆರೆ ಹಿಂದೆ ನಿಂತವರೆಲ್ಲರಿಗೂ ಇದು ಹೊಸ ಅನುಭವ. “ಓಜಸ್‌’ ಅಂದರೆ, ಬೆಳಕು ಎಂದರ್ಥ.

Advertisement

ಚಿತ್ರದಲ್ಲಿ ಕುಡಿತ ವಿಷಯ ಸೇರಿದಂತೆ ಹಲವು ವ್ಯಸನಗಳ ಕುರಿತಾದ ಅಂಶಗಳಿವೆ. ಚಿತ್ರದಲ್ಲಿ ಯಾವುದೇ ಹೊಡಿ,ಬಡಿ, ಕಡಿ ದೃಶ್ಯಗಳಿಲ್ಲ. ಆದರೂ, ಇಲ್ಲೊಬ್ಬ ಖಳನಟನಿದ್ದಾನೆ. ಆ ಪಾತ್ರವನ್ನು ನಟ ಯತಿರಾಜ್‌ ನಿರ್ವಹಿಸಿದ್ದಾರೆ. ಈವರೆಗೆ 150 ಪ್ಲಸ್‌ ಚಿತ್ರಗಳಲ್ಲಿ ನಟಿಸಿರುವ ಯತಿರಾಜ್‌, “ಓಜಸ್‌’ ಚಿತ್ರದಲ್ಲಿ ಪೂರ್ಣಪ್ರಮಾಣದ ಖಳನಟರಾಗಿ ನಟಿಸಿದ್ದಾರೆ. ತಮ್ಮ ಪಾತ್ರ ಕುರಿತು ಹೇಳುವ ಯತಿರಾಜ್‌, “ನಾನು ಇದುವರೆಗೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ.

ಖಳ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದೇನೆ. ಆದರೆ, “ಓಜಸ್‌’ ಚಿತ್ರದ ಪಾತ್ರ ವಿಶೇಷವಾಗಿದೆ. ಕಾರಣ, ಇಡೀ ಚಿತ್ರದಲ್ಲಿ ನಾನು ಪೂರ್ಣಪ್ರಮಾಣದ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಅದೊಂದು ವಿಶೇಷ ಪಾತ್ರ ಎನ್ನಬಹುದು. ಖಳನಟ ಅಂದಾಕ್ಷಣ, ಫೈಟ್‌ ದೃಶ್ಯಗಳಿಲ್ಲ. ವಿಭಿನ್ನ ಮ್ಯಾನರಿಸಂ ಇರುವ, ಖಡಕ್‌ ಆಗಿ ಮಾತನಾಡುವ, ಪಕ್ಕಾ ಹಳ್ಳಿ ಶೈಲಿಯ ಪಾತ್ರವದು. ವಿಭಿನ್ನ ಗೆಟಪ್‌ ಇರುವ ವೀರಭದ್ರ ಎಂಬ ಹಳ್ಳಿ ಗೌಡನ ಪಾತ್ರವದು.

ಸದಾ ವಿಭೂತಿ, ಗಂಧ, ಕುಂಕುಮ ಇಟ್ಟುಕೊಂಡು, ಉರಿ ಮೀಸೆ ಬಿಟ್ಟು, ವಯಸ್ಸು ಹೆಚ್ಚಿರುವ ಪಾತ್ರವದು. ಸಿನಿಮಾದಲ್ಲಿ ಖಳಪಾತ್ರಕ್ಕೆ ಹೆಚ್ಚು ಒತ್ತು ಇದೆ. ರೆಗ್ಯುಲರ್‌ ಪ್ಯಾಟ್ರನ್‌ಗಿಂತ ಡಿಫ‌ರೆಂಟ್‌ ಆಗಿರುವ ಸಿನಿಮಾದಲ್ಲಿ ಅಬ್ಬರಿಸುವುದರ ಜೊತೆಯಲ್ಲಿ ಭಾವನಾತ್ಮಕ ವಿಷಯಗಳೂ ಇವೆ’ ಎನ್ನುತ್ತಾರೆ ಯತಿರಾಜ್‌. ಅಂದಹಾಗೆ, ಫೆ.7 ರಂದು ರಿಲೀಸ್‌ ಆಗುತ್ತಿರುವ ಈ ಚಿತ್ರಕ್ಕೆ ಸಿ.ಜೆ.ವರ್ಧನ್‌ ನಿರ್ದೇಶಕರು.

ಕಥೆ, ಚಿತ್ರಕಥೆ ಜವಾಬ್ದಾರಿ ವಹಿಸಿಕೊಂಡ ಅವರ ಚೊಚ್ಚಲ ಚಿತ್ರವನ್ನು ರಜತ್‌ ರಘುನಾಥ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ರಜತ್‌ ರಘುನಾಥ್‌ ಹಾಗೂ ಡಾ. ಎಡ್ವರ್ಡ್ ಡಿಸೋಜ ಅವರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ನೇಹಾ ಸಕ್ಸೇನಾ ಪ್ರಮುಖ ಪಾತ್ರ ನಿರ್ವಹಿಸಿದ್ದು, ಹಿರಿಯ ನಟಿ ಭವ್ಯಾ ತಾಯಿ ಪಾತ್ರ ಮಾಡಿದ್ದಾರೆ. ರಜತ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಹಾಗು ಡಾ. ಎಡ್ವರ್‌x ಡಿಸೋಜ ಸಿಎಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next