ಮಂಗಳೂರು: ಇತ್ತೀಚೆಗೆ ಪ್ರಾರಂಭಗೊಂಡಿರುವ ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ( ರೈಲು ನಂ. 16575/576) ರೈಲನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಲು ದಕ್ಷಿಣ ರೈಲ್ವೇಯು ನೈಋತ್ಯ ರೈಲ್ವೇಗೆ ಪ್ರಸ್ತಾವನೆಯನ್ನು ಸಲ್ಲಿಸಲು ಚಿಂತನೆ ನಡೆಸಿದೆ. ಈ ರೈಲು ಪ್ರಸ್ತುತ ವಾರದಲ್ಲಿ ಮೂರು ದಿನ ಮಂಗಳೂರು ಜಂಕ್ಷನ್‌ನಿಂದ ಸಂಚಾರ ನಡೆಸುತ್ತಿದೆ.
ನೂತನ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸಬೇಕು ಎಂದು ಪ್ರಯಾಣಿಕರು ಹಾಗೂ ರೈಲ್ವೇ ಪ್ರಯಾಣಿಕರ ಸಂಘಟನೆಗಳಿಂದ ಪ್ರಬಲ ಬೇಡಿಕೆಗಳು ವ್ಯಕ್ತವಾಗಿದ್ದು, ಈ ಕುರಿತಂತೆ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿದೆ.
ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವುದರ ಜತೆಗೆ ಸಂಚಾರ ಸಮಯದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಪ್ರಸ್ತುತ ರೈಲು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 11.30ಕ್ಕೆ ಹೊರಟು ರಾತ್ರಿ 8.30ಕ್ಕೆ ಯಶವಂತಪುರ ತಲುಪುತ್ತದೆ. ಈ ವೇಳಾಪಟ್ಟಿ ಪ್ರಯಾಣಿಕರಿಗೆ ಪೂರಕವಾಗಿಲ್ಲ. ಯಶವಂತಪುರಕ್ಕೆ ರಾತ್ರಿ 8.30ಕ್ಕೆ ತಲುಪುವುದರಿಂದ ಅಲ್ಲಿಂದ ಬೆಂಗಳೂರು ನಗರಕ್ಕೆ ಪ್ರಯಾಣಿಸಲು ಸಮಸ್ಯೆಗಳಾಗುತ್ತಿವೆ ಎಂಬುದಾಗಿ ದೂರುಗಳು ವ್ಯಕ್ತವಾಗಿವೆ.
ಯಶವಂತಪುರ-ಮಂಗಳೂರು ಜಂಕ್ಷನ್ -ಯಶವಂತ ಪುರ ರೈಲು ಮಂಗಳೂರು ಸೆಂಟ್ರಲ್‌ಗೆ ಬರಲು ಫ್ಲಾಟ್‌ಫಾರಂ ಸಮಸ್ಯೆ ಇದೆ ಎಂದು ಪಾಲ್ಗಾಟ್ ವಿಭಾಗ ಹೇಳಿತ್ತು.
ಈಗ ಈ ಸಮಸ್ಯೆಯನ್ನು ನಿವಾರಿಸಲು ಪ್ರಸ್ತುತ ಮಂಗಳೂರು ಸೆಂಟ್ರಲ್‌ಗೆ ಬರುವ ಯಾವುದಾದರೂ ಒಂದು ರೈಲನ್ನು ಮರುಹೊಂದಾಣಿಕೆ ಮಾಡಿ ಮಂಗಳೂರು ಜಂಕ್ಷನ್‌ಗೆ ವರ್ಗಾಯಿಸಿ ಯಶವಂತಪುರ-ಮಂಗಳೂರು ಜಂಕ್ಷನ್ -ಯಶವಂತಪುರ (ರೈಲು ನಂ. 16575/576) ರೈಲಿಗೆ ಪ್ಲಾಟ್‌ಫಾರಂ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಇದಕ್ಕಾಗಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ರೈಲನ್ನು ಗುರುತಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎನ್ನಲಾಗಿದೆ.
ಯಶವಂತಪುರ-ಮಂಗಳೂರು ಜಂಕ್ಷನ್ -ಯಶವಂತಪುರ (ರೈಲು ನಂ. 16575/576) ಬೆಂಗಳೂರಿನಿಂದ ಬೆಂಗಳೂರು ಹಾಗೂ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂಬುದಾಗಿ ಉಡುಪಿ ರೈಲ್ವೇ ಯಾತ್ರಿಗಳ ಸಂಘ, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿಕರ ಅಭಿವೃದ್ಧಿ ಸಂಘ ಮುಂತಾದ ಸಂಘಟನೆಗಳು ಆಗ್ರಹಿಸುತ್ತಾ ಬಂದಿವೆ. ಇತ್ತೀಚೆಗೆ ನಡೆದ ರೈಲ್ವೇ ಪಾಲಕ್ಕಾಡ್ ವಿಭಾಗದ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲೂ ಸಮಿತಿ ಸದಸ್ಯ ಹನುಮಂತ ಕಾಮತ್ ಈ ಬಗ್ಗೆ ಒತ್ತಾಯಿಸಿದ್ದರು.