ಹಝಾರಿಭಾಗ್ ಜಾರ್ಖಂಡ್‌ನ ಅತ್ಯಂತ ಪ್ರಮುಖ ಲೋಕಸಭಾ ಕ್ಷೇತ್ರ. ಸದ್ಯ ಬಿಜೆಪಿಯ ಮಾಜಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮೂರು ಬಾರಿ ಪ್ರತಿನಿಧಿಸಿದ್ದ ಕ್ಷೇತ್ರವಿದು. 2014ರ ಚುನಾವಣೆಯಲ್ಲಿ ಅವರ ಪುತ್ರ ಜಯಂತ್ ಸಿನ್ಹಾ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಪುನರಾಯ್ಕೆ ಬಯಸುತ್ತಿದ್ದಾರೆ. ಅವರಿಗೆ ಎದುರಾಗಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಪ್ರಸಾದ್ ಸಾಹು ಕಣದಲ್ಲಿದ್ದಾರೆ. ಅವರಿಬ್ಬರ ನಡುವೆ ನೇರ ಹೋರಾಟ ಉಂಟು. ಸಿಪಿಎಂ ಹಾಗೂ ಬಿಎಸ್ಪಿ ಕೂಡ ಕಣದಲ್ಲಿವೆ.
ನಡೆ ಇರಿಸು ಮುರುಸು: 2014ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಜಯಂತ್ ಸಿನ್ಹಾ ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರ ತಂದೆ, ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಪದೇ ಪದೆ ಮೋದಿ ಸರ್ಕಾರವನ್ನು ಟೀಕಿಸುತ್ತಿರುವುದು ಜಯಂತ್ ಸಿನ್ಹಾ ಹಾಗೂ ಬಿಜೆಪಿ ಇರುಸು ಮುರುಸು ತಂದಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಯಶವಂತ್ ಸಿನ್ಹಾ, ಲಕ್ನೋದಲ್ಲಿ ರಾಜನಾಥ್ ಸಿಂಗ್ ವಿರುದ್ಧ ಪ್ರಚಾರ ಮಾಡುವುದಾಗಿ ಹೇಳಿರುವುದು ಇನ್ನಷ್ಟು ಕೆರಳುವಂತೆ ಮಾಡಿದೆ.
ಹಝಾರಿಭಾಗ್ ಕ್ಷೇತ್ರದಿಂದ 1996ರ ವರೆಗೆ ಕಾಂಗ್ರೆಸ್ ಹುರಿಯಾಳುಗಳೇ ಆಯ್ಕೆಯಾಗುತ್ತಿದ್ದರು. 1998, 1999 ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ ಯಶವಂತ್ ಸಿನ್ಹಾ ಗೆಲುವು ಸಾಧಿಸಿ, ಬಿಜೆಪಿ ಭದ್ರಕೋಟೆಯನ್ನಾಗಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದರು. ಇದೀಗ ಅವರು ಎಲ್ಲೇ ಹೋದರೂ ಮೋದಿ ಕಾರ್ಯವೈಖರಿಯನ್ನು ಟೀಕಿಸುವ ಹೇಳಿಕೆಗಳು ಸಾಮಾನ್ಯವಾಗಿವೆ.
ಮೋದಿ ನಾಮಬಲ: ಮೊದಲ ಬಾರಿಗೆ ಸಂಸದರಾಗಿ ಕೇಂದ್ರ ಸಚಿವರಾಗಿದ್ದ ಜಯಂತ್ ಸಿನ್ಹಾ ಈ ಬಾರಿ ಉಜ್ವಲ ಯೋಜನೆ, ಆಯುಷ್ಮಾನ್ ಭಾರತ, ಸ್ವಚ್ಛ ಭಾರತ, ಆರ್ಥಿಕ ಭದ್ರತೆ ವಿಷಯಗಳ ಜೊತೆ ಮೋದಿ ನಾಮ ಬಲದೊಂದಿಗೆ ಪ್ರಚಾರಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಬಲವಾಗಿ ಬೇರೂರಿದ್ದು, ಮೋದಿ ಅಲೆ ಕೂಡ ಇದೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವಿರುವುದು ಕೂಡ ಜಯಂತ್ ಸಿನ್ಹಾಗೆ ಅನುಕೂಲವಾಗಿದೆ.
ಕಳೆದ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಸೌರಭ್ ನರೈನ್ ಸಿಂಗ್ 1.60 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ ಗೋಪಾಲ್ ಪ್ರಸಾದ್ ಸಾಹು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದಲ್ಲಿ ಶೇ.27ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರಿದ್ದು, ಕಾಂಗ್ರೆಸ್ ಕೈಹಿಡಿಯುವ ಸಾಧ್ಯತೆ ಇದೆ.
2014ರ ಫಲಿತಾಂಶ
ಜಯಂತ್ ಸಿನ್ಹಾ (ಬಿಜೆಪಿ) 4,06,931
ಸೌರಭ್ ನರೈನ್ ಸಿಂಗ್ (00) 2,47,803
ಗೆಲುವಿನ ಅಂತರ: 1,59,000