ಬೆಂಗಳೂರು: ರಾಕಿಂಗ್ ಸ್ಟಾರ್ ಅವರ ಯಶ್ (Actor Yash) ಪ್ಯಾನ್ ಇಂಡಿಯಾ ʼಟಾಕ್ಸಿಕ್ʼ (Toxic Movie) ಸಿನಿಮಾ ಅನೌನ್ಸ್ ಆದ ದಿನದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಮಾಲಿವುಡ್ ನ ಗೀತು ಮೋಹನ್ ದಾಸ್ (Geetu Mohandas) ಅವರೊಂದಿಗೆ ರಾಕಿಭಾಯ್ ಸಿನಿಮಾ ಮಾಡಲಿದ್ದಾರೆ. ‘ಟಾಕ್ಸಿಕ್ʼ ಪಾತ್ರವರ್ಗದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಆರಂಭದಲ್ಲಿ ಕರೀನಾ ಕಪೂರ್ (Kareena Kapoor) ಯಶ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಪ್ರಾಜೆಕ್ಟ್ ನಿಂದ ಅವರು ಹೊರಹೋಗಿದ್ದು, ಇವರ ಜಾಗಕ್ಕೆ ನಯನತಾರಾ (Nayanthara) ಅವರು ಬರಲಿದ್ದಾರೆ ಎನ್ನಲಾಗಿದೆ. ಪ್ರಮುಖ ಪಾತ್ರಗಳಲ್ಲಿ ಕಿಯಾರಾ ಅಡ್ವಾಣಿ (Kiara Advani) ಮತ್ತು ಹುಮಾ ಖುರೇಷಿ (Human Qureshi) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸಿನಿಮಾ ಅನೌನ್ಸ್ ಆದ ದಿನವೇ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದ್ದು, ಇದೀಗ ಈ ರಿಲೀಸ್ ಡೇಟ್ ಮುಂದೂಡಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ʼಟಾಕ್ಸಿಕ್ʼ ರಿಲೀಸ್ ಮುಂದೂಡಿಕೆ ಸಾಧ್ಯತೆ?: ʼಟಾಕ್ಸಿಕ್ʼ ದೇಶಾದ್ಯಂತದ ಹಲವಾರು ಖ್ಯಾತ ಕಲಾವಿದರನ್ನು ಒಟ್ಟುಗೂಡಿಸಲಿದೆ. ಇದಕ್ಕಾಗಿ ಚಿತ್ರತಂಡ ಸಾಕಷ್ಟು ತಯಾರಿಯನ್ನು ನಡೆಸಲಿದೆ. ಈ ಕಲಾವಿದರ ದಿನಾಂಕಗಳನ್ನು ಪಡೆಯುವುದು ದೊಡ್ಡ ಸವಾಲಾಗಿದೆ. ಈ ಕಾರಣದಿಂದ ಈಗಾಗಲೇ ನಿಗದಿಪಡಿಸಿರುವ ರಿಲೀಸ್ ಡೇಟ್ ಗಿಂತ ಹೆಚ್ಚಿನ ಸಮಯ ಇದಕ್ಕೆ ಬೇಕಾಗಬಹುದು ಎಂದು ವರದಿಯಾಗಿದೆ.
ಆದರೆ ಈ ಬಗ್ಗೆ ಚಿತ್ರತಂಡದಿಂದ ಇನ್ನು ಕೂಡ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಗೋವಾದಲ್ಲಿನ ಡ್ರಗ್ ಕಾರ್ಟೆಲ್ ಸುತ್ತ ʼಟಾಕ್ಸಿಕ್ʼ ಕಥೆ ಸುತ್ತುತ್ತದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಿದೆ.
2025ರ ಏ.10ರಂದು ಸಿನಿಮಾ ರಿಲೀಸ್ ಆಗುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ.