Advertisement

ಮನೆ ಖಾಲಿ ಮಾಡಲು ಸಮಯ ಕೇಳಿದ ಯಶ್‌ ತಾಯಿ

06:55 AM Mar 23, 2019 | |

ಬೆಂಗಳೂರು: ಸದ್ಯ ವಾಸವಾಗಿರುವ ಕತ್ರಿಗುಪ್ಪೆಯ ಬಾಡಿಗೆ ಮನೆ ಖಾಲಿ ಮಾಡಲು ಆರು ತಿಂಗಳು ಕಾಲಾವಕಾಶ ನೀಡುವಂತೆ ಕೋರಿ ನಟ ಯಶ್‌ ತಾಯಿ ಎ. ಪುಷ್ಪಾ ಹೈಕೋರ್ಟ್‌ಗೆ ಶುಕ್ರವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ.ಬಿ.ವಿ. ನಾಗರತ್ನ ಹಾಗೂ ನ್ಯಾ. ಎಚ್‌.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಯಶ್‌ ತಾಯಿ ಪುಷ್ಟಾ ಅವರು, ಈ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

Advertisement

ಈ ವಿವಾದಕ್ಕೆ ಸಂಬಂಧಿಸಿದಂತೆ 2018ರ ಸೆ.5ರಂದು ಆದೇಶ ನೀಡಿದ್ದ ಹೈಕೋರ್ಟ್‌, ಪುಷ್ಪಾ ಅವರು ಮನೆ ಮಾಲೀಕರಿಗೆ ಕೂಡಲೇ ಬಾಡಿಗೆ ಬಾಕಿ ಹಣವನ್ನು ಬಡ್ಡಿಸಹಿತ ಪಾವತಿಸಿದರೆ 2019ರ ಮಾ.31ರವರೆಗೆ ಮನೆಯಲ್ಲಿ ವಾಸ ಮುಂದುವರಿಸಬಹುದು. ಒಂದೊಮ್ಮೆ ಬಾಡಿಗೆ ಹಣ ಪಾವತಿಸುವುದು ವಿಳಂಬವಾದರೆ, 2018ರ ಡಿ.31ರೊಳಗೆ ಮನೆ ಖಾಲಿ ಮಾಡಿಕೊಡಬೇಕು ಎಂದು ತಿಳಿಸಿತ್ತು. ಅದರಂತೆ ಪುಷ್ಪಾ, ಬಾಡಿಗೆ ಬಾಕಿ ಹಣವಾದ 25 ಲಕ್ಷ ರೂ.ಗಳನ್ನು ಹೈಕೋರ್ಟ್‌ನಲ್ಲಿ ಠೇವಣಿ ಇರಿಸಿದ್ದರು.

ಇದೀಗ, ಮಧ್ಯಂತರ ಅರ್ಜಿ ಸಲ್ಲಿಸಿರುವ ಪುಷ್ಪಾ, ಹೈಕೋರ್ಟ್‌ ಆದೇಶದಂತೆ ಇದೇ ತಿಂಗಳ 31ರಂದು ಮನೆ ಖಾಲಿ ಮಾಡಬೇಕಿದೆ. ಆದರೆ, ಸದ್ಯ ತಾವು ಹಾಸನದಲ್ಲಿ ಮನೆ ನಿರ್ಮಿಸುತ್ತಿದ್ದು, ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 5ರಿಂದ 6 ತಿಂಗಳು ಬೇಕಾಗುತ್ತದೆ. ಇಷ್ಟು ಕಡಿಮೆ ಅವಧಿಗೆ ಬೇರೊಂದು ಬಾಡಿಗೆ ಮನೆ ಹುಡುಕುವುದು ಕಷ್ಟವಾಗಲಿದೆ.

ಹೀಗಾಗಿ ಮನೆ ಖಾಲಿ ಮಾಡಲು ನೀಡಿದ್ದ ಕಾಲಾವಕಾಶವನ್ನು ಮತ್ತೆ ಆರು ತಿಂಗಳಿಗೆ ವಿಸ್ತರಿಸಬೇಕು ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಇದೇ ವೇಳೆ ಪುಷ್ಪಾ ಅವರು ಹೈಕೋರ್ಟ್‌ನಲ್ಲಿ ಠೇವಣಿ ಇಟ್ಟಿದ್ದ 25 ಲಕ್ಷ ರೂ. ಬಾಡಿಗೆ ಬಾಕಿ ಹಣವನ್ನು ಮನೆ ಮಾಲೀಕ ಡಾ. ಎಂ. ಮುನಿಪ್ರಸಾದ್‌ ಅವರಿಗೆ ಬಿಡುಗಡೆ ಮಾಡುವಂತೆ ನ್ಯಾಯಪೀಠ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next