ದಾವಣಗೆರೆ: ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಹೊದಿಗೆರೆ ಕ್ಷೇತ್ರದ ಬಿಜೆಪಿ ಸದಸ್ಯೆ ಯಶೋಧಮ್ಮ ಮರುಳಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ, ಜಿಲ್ಲಾ ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಯಶೋಧಮ್ಮ ಒಬ್ಬರೇ ಎರಡು ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಅವರು ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಪ್ರಕಟಿಸಲಾಯಿತು.
ಮಧ್ಯಾಹ್ನ 12 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭಿಸಿ, ಮಾತನಾಡಿದ ಅಪರ ಜಿಲ್ಲಾಧಿಕಾರಿ ನಜ್ಮಾ ಜಿ.1 ಗಂಟೆವರೆಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ಇರುವುದಾಗಿ ತಿಳಿಸಿ, ನಂತರ ಯಶೋಧಮ್ಮ ಒಬ್ಬರೇ ಸಲ್ಲಿಸಿದ್ದ ಎರಡು ನಾಮಪತ್ರ ಸ್ವೀಕರಿಸಲಾಗಿದೆ ಎಂದರು.
ಯಶೋಧಮ್ಮ ಸಲ್ಲಿಸಿದ್ದ ಮೊದಲನೇ ನಾಮಪತ್ರಕ್ಕೆ ಸದಸ್ಯೆ ಕೆ.ವಿ.ಶಾಂತಕುಮಾರಿ ಸೂಚಕರಾಗಿದ್ದಾರೆ. ಎರಡನೇ ನಾಮಪತ್ರಕ್ಕೆ ಸದಸ್ಯ ಬಿ.ಎಂ. ವಾಗೀಶಸ್ವಾಮಿ ಸೂಚಕರಾಗಿದ್ದರು.
29 ಸದಸ್ಯ ಬಲದ ಜಿಲ್ಲಾ ಪಂಚಾಯತ್‌ನಲ್ಲಿ ಸಭೆ ಆರಂಭಿಸಲು 16 ಮಂದಿ ಹಾಜರಿ ಕಡ್ಡಾಯ. ಅಗತ್ಯ ಕೋರಂ ಇದೆ. ಎರಡೂ ನಾಮಪತ್ರಗಳನ್ನು ಪರಿಶೀಲಿಸಿ, ನಾಮಪತ್ರಗಳು ಕ್ರಮಬದ್ಧವಾಗಿದ್ದವು. ನಾಮಪತ್ರ ಹಿಂಪಡೆಯುವ ಅವಕಾಶದ ನಂತರ ನೂತನ ಅಧ್ಯಕ್ಷರಾಗಿ ಯಶೋಧಮ್ಮ ಮರುಳಪ್ಪ ಅವಿರೋಧ ಆಯ್ಕೆಯಾದ ಬಗ್ಗೆ ಪ್ರಾದೇಶಿಕ ಆಯುಕ್ತರು ಸಭೆಯಲ್ಲಿ ಘೋಷಿಸಿದರು. ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ, ಉಪಕಾರ್ಯದರ್ಶಿ ಆನಂದ್, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು. ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯತ್ ಸದಸ್ಯರು, ಇತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.