Advertisement

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಕಾಂಗ್ರೆಸ್ ಗೆ ಸೋಲು: ಕಾಂಗ್ರೆಸ್ ಶಾಸಕ ಯಶವಂತರಾಯಗೌಡ

08:47 PM Aug 23, 2021 | Team Udayavani |

ವಿಜಯಪುರ: ಸಿದ್ಧರಾಮಯ್ಯ ಅವರು ಅತ್ಯುತ್ತಮ ಆಡಳಿತ ನೀಡಿದರೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದಲೇ‌ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಕಾರಣವಾಯ್ತು ಎಂದು ಕಾಂಗ್ರೆಸ್ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸ್ವಪಕ್ಷೀಯ ಶಾಸಕ ಎಂ.‌ಬಿ. ಪಾಟೀಲ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಧರ್ಮ ಒಡೆಯುವ ನಿಮ್ಮ ಅಚಾತುರ್ಯದ ಹೋರಾಟದ ಕಾರಣವೇ ಕಾಂಗ್ರೆಸ್ ಸುಮಾರು 30 ಸ್ಥಾನಗಳಲ್ಲಿ ಸೋತು, ಅಧಿಕಾರ ಕಳೆದುಕೊಳ್ಳುವಂತಾಯ್ತು. ಈ ಬಗ್ಗೆ ನಮ್ಮ ನಾಯಕರು ಸದನದಲ್ಲೇ ಮಾತನಾಡಿದ್ದಾರೆ ಎಂದೂ ಹೇಳಿದರು.

ಜಗದ್ಗುರು ಮೇಲೆ ಎಫ್ ಐ ಆರ್ ಮಾಡಿದ್ದು ಜಿಲ್ಲೆಯ ಜನ ಮರೆತಿಲ್ಲ. ಇನ್ನಾದರೂ ನಿಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಾನು ನಿಮ್ಮನ್ನು ಬದಲಿಸಿಯೇ ತೀರುತ್ತೇನೆ ಎಂದು ಎಂ.ಬಿ.ಪಾಟೀಲ ಅವರಿಗೆ ಸವಾಲು ಎಸೆದರು.

ಬಬಲೇಶ್ವರ ಶಾಸಕರು ನಾನು ಪ್ರತಿನಿಧಿಸುವ ಇಂಡಿ ತಾಲೂಕಿನಲ್ಲಿ ತಮ್ಮಿಂದಲೇ ಕೆರೆ ತುಂಬುವ ಹಾಗೂ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬಂದಿದೆ ಎಂದು ತಮ್ಮನ್ನು ತಾವು ಬಸವಣ್ಣನಿಗೆ ಹೋಲಿಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಪದೇ ಪದೇ ನನ್ನ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ತಲೆ ಹಾಕುತ್ತಿದ್ದಾರೆ ಎಂದು ದೂರಿದರು.

ತಿಳಿದವರು ನೀಡಿದ ಸಲಹೆ ಮೇರೆಗೆ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ಕೊಡದೇ ಸುಮ್ಮನಿದ್ದೆ. ನಾನು ರಾಜಕೀಯ ಸಂದರ್ಭದಲ್ಲಿ ಯಾರ ತಂಟೆಗೂ ಹೋಗುವುದಿಲ್ಲ. ಯಾರಾದರೂ ನನ್ನ ತಂಟೆಗೆ ಬಂದರೆ ತಾರ್ಕಿಕ ಅಂತ್ಯ ಕಾಣುವ ವರೆಗೂ ಬಿಡುವುದಿಲ್ಲ. ಅವರು ಪದೇ ಪದೆ ನನ್ನನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ರಣಕಹಳೆ ಊದಿರುವ ನಾನು ಅವರ ವಿರುದ್ಧ ತಾರ್ಕಿಕ ಅಂತ್ಯ ಕಾಣಿಸಿಯೇ ತೀರುತ್ತೇನೆ ಎಂದೂ ಗುಡುಗಿದರು.

Advertisement

ಬಂಥನಾಳ ಸಂಗನಬಸವ ಶ್ರೀಗಳ ಪರಿಶ್ರಮದಿಂದ ಕಟ್ಟಿ ಬೆಳೆಸಿದ ಬಿಎಲ್ ಡಿಇ ಸಂಸ್ಥೆಯನ್ನು ಸ್ವಂತದ ಆಸ್ತಿ ಮಾಡಿಕೊಂಡಿದ್ದೀರಿ. ಬರುವ ದಿನಗಳಲ್ಲಿ ಬಿಎಲ್ ಡಿಇ ಸಂಸ್ಥೆ ಬಗ್ಗೆ ಕೆದಕುತ್ತೇನೆ ಎಂದು ಎಚ್ಚರಿಸಿದರು.

ಮಹಾತ್ಮ ಬಸವೇಶ್ವರ ಅವರ ಹೆಸರು ಹೇಳುವ ಯೋಗ್ಯತೆ‌ ನಿಮಗಿಲ್ಲ. ಅವರ ತತ್ವಾದರ್ಶ ಪಾಲನೆ ಕಿಂಚಿತ್ತೂ ನಿಮ್ಮಲ್ಲಿಲ್ಲ. ಅವರ ಪಾದದ ಧೂಳಿಗೂ ನೀವು ಸಮನಲ್ಲ ಎಂದು ಕುಟುಕಿದರು.

ಕೆರೆ ತುಂಬುವ ಯೋಜನೆ ನಿಮ್ಮ‌ ಕನಸಿನ ಕೂಸಲ್ಲ. ಈ ಕನಸಿಗೆ ಜನ್ಮ‌ ನೀಡಿದ್ದೇ ಇಂಡಿ ತಾಲೂಕು. ಹೋರ್ತಿ ಗ್ರಾಮದಲ್ಲಿ 2007 ರಲ್ಲಿ ರೈತರು, ಹೋರಾಟಗಾರರು ಸೇರಿ ಹುಟ್ಟುಹಾಕಿದ ಹೋರಾಟದ ಫಲದಿಂದ ಕೆರೆ ತುಂಬುವ ಯೋಜನೆ ರೂಪುಗೊಂಡದ್ದು. ಹೀಗಾಗಿ ಇದು ಅವರ ಕನಸಿನಲ್ಲಿ‌ ಹುಟ್ಟಿದ ಕೂಸಲ್ಲ.

ನೀರಾವರಿ ಕನಸು ನೀವೊಬ್ಬರ ಕಂಡಿಲ್ಲ. ಕನಸು ಕಂಡ ಮಾತ್ರಕ್ಕೆ ಮಕ್ಕಳಾಗಲ್ಲ, ಪರಿಶ್ರಮ ಪಡಬೇಕು ಎಂದು ಆಗ್ರಹಿಸಿದರು.

ಎಲ್ಲವೂ ನನ್ನಿಂದಲೇ ಆದದ್ದು ಎಂಬ ಅಹಂಕಾರದ ಮಾತು ಸರಿಯಲ್ಲ. ಜಿಲ್ಲೆಯಲ್ಲಿ ನೀವೂ ಸೇರಿದಂತೆ ಆಯ್ಕೆ ಆಗಿದ್ದ ಕಾಂಗ್ರೆಸ್ ಪಕ್ಷದ ಏಳು ಶಾಸಕರಲ್ಲಿ ಎಲ್ಲರೂ ಸಹಕಾರ ನೀಡಿದ್ದರಿಂದಲೇ ನೀವು ಸಚಿವರಾದದ್ದು ಎಂಬುದನ್ನು ಮರೆಯಬೇಡಿ. ಸರ್ಕಾರ ಹಾಗೂ ಸಾಂಘಿಕ ಕೆಲವನ್ನು ವ್ಯಕ್ತಿಗತವಾಗಿ ನನ್ನದೇ ಎಂದು ಬಿಂಬಿಸಿಕೊಂಡು ಆಧುನಿಕ ಭಗೀರಥ ಎಂದು ಮಾಧ್ಯಮಗಳಲ್ಲಿ ಹೊಗಲಿಕೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದೀರಿ ಎಂದೂ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next