Advertisement

ಮೆದುಳು-ಬಾಯಿಗೆ ಲಿಂಕ್ ಇಲ್ಲದವರಿಗೆ ಉತ್ತರ ಕೊಡುವ ಅಗತ್ಯವಿಲ್ಲ: ಯಶವಂತ್ರಾಯಗೌಡ ತಿರುಗೇಟು

04:30 PM May 28, 2022 | keerthan |

ವಿಜಯಪುರ : ಅನಗತ್ಯ ಹಾಗೂ ಆಧಾರ ರಹಿತವಾಗಿ ನಾಯಕರ ತೇಜೋವಧೆ ಮಾಡುವ ಶಾಸಕ ಯತ್ನಾಳ ಅವರಿಗೆ ಮಾಧ್ಯಮಗಳು ಹೆಚ್ಚಿನ ಆದ್ಯತೆ ನೀಡಬಾರದು. ಯಾರೋ ಹಿಂದೆನಿಂತು ಹೇಳುತ್ತಾರೆಂದು ಯತ್ನಾಳ ಮಾತನಾಡುತ್ತಿದ್ದಾರೆ ಎನಿಸುತ್ತದೆ. ಮೆದುಳು ಮತ್ತು ಬಾಯಿಗೆ ಲಿಂಕ್ ಇಲ್ಲದವರಿಗೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರಿಗೆ ಸಾಕ್ಷಾಧಾರಗಳೇ ಇಲ್ಲದೇ ಉಡಾಫೆ ಮಾತನಾಡುವ ಪ್ರವೃತ್ತಿ ಇದೆ. ಇಂಥವರು ಮಾಡುವ ಆಧಾರ ರಹಿತ ಹೇಳಿಕೆ, ಟೀಕೆ ಟಿಪ್ಪಣೆಗೆ ಉತ್ತರ ಕೊಡುವುದಿಲ್ಲ.  ರಾಜಕೀಯ ಸೂಕ್ಷ್ಮತೆ, ಸೂಕ್ಷ್ಮ ಗ್ರಾಹಿತ್ವ, ವ್ಯಕ್ತಿ ಗೌರವದ ಸೌಜನ್ಯವೇ ಇಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದು ವ್ಯರ್ಥ ಎಂದು ಕುಟುಕಿದರು.

ನಾವು ಮಾತನಾಡುವ ಮಾತು ಕನಿಷ್ಟವಾದರೂ ಸತ್ಯಕ್ಕೆ ಹತ್ತಿರ ಇರಬೇಕು. ಇಷ್ಟಕ್ಕೂ ನಾನು ಎಂದೂ ಕಾಂಗ್ರೆಸ್ ಬಿಡುತ್ತೇನೆ, ಬಿಜೆಪಿ ಸೇರುತ್ತೇನೆ ಎಂದು ಹೇಳಿಲ್ಲ. ಹಲವು ಬಾರಿ ಇದಕ್ಕೆ ಸ್ಪಷ್ಟೀಕರಣ ನೀಡಿದ್ದರೂ ಯಾರದೋ ಹಿನ್ನೆಲೆಯಿಂದ ಇವರು ಅನಗತ್ಯವಾಗಿ ಟೀಕೆ ಮಾಡುತ್ತಾರೆ ಎಂದರು.

ಬಿಜೆಪಿ ನಾಯಕರೂ ಪಕ್ಷ ಸೇರ್ಪಡೆ ವಿಷಯವಾಗಿ ನನ್ನನ್ನು ಸಂಪರ್ಕಿಸಿಲ್ಲ. ಹಿಂದೊಂದು ಮುಂದೊಂದು ಮಾತನಾಡುವ ಅವರು ನಾಟಕ ಮಾಡುತ್ತಾರೆ. ಅಸಂಸದೀಯ ಪದ ಬಳಕೆ ಮಾಡಿ ಮಾತನಾಡುವ ಮೂಲಕ ತೇಜೋವಧೆ ಮಾಡುತ್ತಿದ್ದೀರಿ. ನನಗೂ ಮಾತನಾಡಲು ಬರುತ್ತೆ, ಆದರೆ ಮಾತನಾಡುವುದು ಸರಿಯಲ್ಲ ಎಂದರು.

ನಿಮ್ಮ ಮಾತಿನಿಂದಲೇ ನೀವು ಎಲ್ಲಿದ್ದೀರಿ ಎಂಬುದನ್ನು ಅರಿಬೇಕು ಎಂದು ಬಿಜೆಪಿ ಶಾಸಕ ಯತ್ನಾಳ ಅವರಿಗೆ ಸಲಹೆ ನೀಡಿದ ಕಾಂಗ್ರೆಸ್ ಯಶವಂತ್ರಾಯಗೌಡ ಪಾಟೀಲ, ಅತಿಯಾಗಿ ಮಾತಾಡಿ ನಿಮ್ಮ ಪರಿಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಬೇಕು. ಯಾರನ್ನೋ ತುಳಿಯುವ ಪ್ರಯತ್ನ ಮಾಡಬಾರದು. ಯಾರೋ ಹೇಳಿದ್ದನ್ನು ಕೇಳಿ ಮಾತನಡುವುದು ಸರಿಯಲ್ಲ. ಆಧಾರ ರಹಿತವಾಗಿ ನಿತ್ಯವೂ ಮಾತನಾಡುವವರಿಗೆ ಉತ್ತರ ಕೊಡುತ್ತಾ ಹೋಗಲಾಗದು ಎಂದರು.

Advertisement

ಪ್ರಸ್ತುತ ಸಂದರ್ಭದಲ್ಲಿ ರಾಜಕಾರಣ ಪ್ರಾಮಾಣಿಕವಾಗಿ ಉಳಿದಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ನಡುವಳಿಕೆ ನಮ್ಮ ಗೌರವ ಹೆಚ್ಚಿಸುವಂತಿರಬೇಕು. ನಗರ ಜನತೆಗೆ ಎಂಥವರನ್ನು ಆರಿಸಿ ತಂದಿದ್ದೇವೆ ಎಂದು ಪಶ್ಚಾತಾಪ ಪಡುವಂತಾಗಿದೆ, ತಕ್ಷಣ ನೀವು ನಿಮ್ಮ ವರ್ತನೆಯನ್ನು ಬದಲಸಿಕೊಳ್ಳದಿದ್ದರೆ ಸುಶೀಕ್ಷಿತ ಮತದಾರರೇ ಹೆಚ್ಚಿರುವ ವಿಜಯಪುರ ನಗರ ಕ್ಷೆತ್ರದ ಮತದಾರರು ಭವಿಷ್ಯದಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಇಷ್ಟಕ್ಕೂ ರಾಜಕೀಯ ನಿಂತ ನೀರಲ್ಲ. ಇನ್ನು ಸ್ವಲ್ಪ ದಿನದಲ್ಲಿ ಚುನಾವಣೆ ಬರಲಿದ್ದು, ಯಾರು ಎಲ್ಲೆಲ್ಲಿ ಇರುತ್ತಾರೋ ನೋಡೋಣ. ಅಲ್ಲಿಂದಲೇ ರಾಜಕಾರಣ ಮಾಡೋಣ ಎಂದೂ ಮಾರ್ಮಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next