Advertisement

ಮೇ 31ಕ್ಕೆ ಯಶಸ್ವಿನಿ ಆರೋಗ್ಯ ಕರ್ನಾಟಕದೊಂದಿಗೆ ವಿಲೀನ

04:57 AM May 26, 2018 | Karthik A |

ಕುಂದಾಪುರ: ಇದೇ ತಿಂಗಳ 31ಕ್ಕೆ ಅಂತ್ಯಗೊಳ್ಳುತ್ತಿರುವ ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಬದಲು ಆರೋಗ್ಯ ಕರ್ನಾಟಕ ಜಾರಿಗೊಂಡಿದ್ದರೂ, ನೆಟ್‌ ವರ್ಕ್‌ ಆಸ್ಪತ್ರೆಗಳ ಆಯ್ಕೆಯನ್ನು ಇನ್ನೂ ಪೂರ್ಣಗೊಳಿಸದಿರುವುದು ಫ‌ಲಾನುಭವಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮಾರ್ಚ್‌ನಿಂದಲೇ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಆರೋಗ್ಯ ಕರ್ನಾಟಕ ವಿಮೆ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಆದರೆ ಇದರಡಿ ನೆಟ್‌ವರ್ಕ್‌ ಆಸ್ಪತ್ರೆಗಳ ಗುರುತಿಸುವಿಕೆಗೆ 2018ರ ಡಿ. 31ರವರೆಗೆ ಕಾಲಾವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಫ‌ಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸದಿರುವುದು ಗೊಂದಲಕ್ಕೀಡು ಮಾಡಿದೆ. ಆರೋಗ್ಯ ಕರ್ನಾಟಕಕ್ಕೆ ಪ್ರಸ್ತುತ ಕೇವಲ ಹತ್ತು ಆಸ್ಪತ್ರೆಗಳನ್ನಷ್ಟೇ ಗುರುತಿಸಲಾಗಿದೆ. ಎರಡನೇ ಹಂತದಲ್ಲಿ ಜೂನ್‌ ನಲ್ಲಿ 33 ಆಸ್ಪತ್ರೆಗಳನ್ನು ಗುರುತಿಸಲಾಗುತ್ತಿದೆ. ಹಾಗಾಗಿ ಹೊಸ ವಿಮೆ ಯೋಜನೆ ಇದ್ದರೂ ಜನಸಾಮಾನ್ಯರು ತಮ್ಮ ಕಿಸೆಯಿಂದ ಹಣ ಪಾವತಿಸುವಂತಾಗಿದೆ.

Advertisement

ಯಶಸ್ವಿನಿಯಲ್ಲಿ ಏನಿತ್ತು?
2003ರಲ್ಲಿ ಜಾರಿಗೆ ಬಂದ ಯಶಸ್ವಿನಿಯಲ್ಲಿ ವಾರ್ಷಿಕ 250 ರೂ. ವಂತಿಗೆ ಪಾವತಿಸಿ ವಾರ್ಷಿಕ ಗರಿಷ್ಠ ಮಿತಿ 2 ಲಕ್ಷ ರೂ. ವರೆಗಿನ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳ‌ಬಹುದಾಗಿತ್ತು.  ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಕ ಯೋಜನೆ. ಗ್ರಾಮೀಣ ಸ್ತ್ರೀಶಕ್ತಿ ಗುಂಪು, ಸ್ವ ಸಹಾಯ ಗುಂಪಿನ ಸದಸ್ಯ, ಸಹಕಾರ ಸಂಘದ ಸದಸ್ಯ ಹಾಗೂ ಅವರ ಕುಟುಂಬ ಯೋಜನೆಯ ಫ‌ಲಾನುಭವಿಗಳು. ಒಟ್ಟು 525 ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ 823 ಶಸ್ತ್ರಚಿಕಿತ್ಸೆಗಳನ್ನು ಪಡೆಯಬಹುದಾಗಿತ್ತು. 

‘ಆರೋಗ್ಯ ಕರ್ನಾಟಕ’ದಲ್ಲೇನಿದೆ?
ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ಬಂದ ‘ಆರೋಗ್ಯ ಕರ್ನಾಟಕ’ ದಡಿ ಎಲ್ಲ ಬಿಪಿಎಲ್‌ ಕಾರ್ಡುದಾರ ಕುಟುಂಬಗಳ 1.5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಲಿದೆ. ಸರಕಾರಿ ಹಾಗೂ ಖಾಸಗಿ ನೆಟ್‌ ವರ್ಕ್‌ ಆಸ್ಪತ್ರೆಗಳಲ್ಲಿ 2 ಲಕ್ಷ ರೂ. ವರೆಗಿನ ಚಿಕಿತ್ಸೆ ಉಚಿತ.

ಎಲ್ಲ ಒಂದರೊಳಗೆ
ವಾಜಪೇಯಿ ಆರೋಗ್ಯ ಶ್ರೀ, ಜ್ಯೋತಿ ಸಂಜೀವಿನಿ, ಯಶಸ್ವಿನಿ, ಮುಖ್ಯಮಂತ್ರಿ ಸಾಂತ್ವನ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ರಾಜೀವ್‌ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಗಳನ್ನು ‘ಆರೋಗ್ಯ ಕರ್ನಾಟಕ’ದಡಿ ಸಂಯೋಜಿಸಲಾಗಿದೆ. ಯೋಜನೆಯ ಉದ್ದೇಶ ಒಳ್ಳೆಯದೇ. ಸಹಕಾರಿ ಸಂಸ್ಥೆಗಳ ಮೂಲಕವಷ್ಟೇ ದೊರೆಯುತ್ತಿದ್ದ ಯೋಜನೆಯನ್ನು ಎಲ್ಲರಿಗೂ ದೊರೆಯುವಂತೆ ಮಾಡಿದ್ದಾರೆ. ಆದರೆ ನಿಯಮಗಳು ಗೋಜಲಾಗಿವೆ. ಅದನ್ನು ಸರಳೀಕೃತಗೊಳಿಸಿದರೆ ಪರವಾಗಿಲ್ಲ ಎನ್ನುತ್ತಾರೆ ಕುಂದಾಪುರದ ವೈದ್ಯ ಡಾ| ಗೋಪಾಲಕೃಷ್ಣ. ಯಶಸ್ವಿನಿಯಂತೆಯೇ ಇದನ್ನೂ ಮುಂದುವರಿಸಿದರೆ ಉತ್ತಮ. ಎಲ್ಲರಿಗೂ ಎಲ್ಲ ಸೌಲಭ್ಯಗಳೂ ದೊರೆಯುವಂತಾಗಬೇಕು ಎನ್ನುತ್ತಾರೆ ಮತ್ತೂಬ್ಬ ವೈದ್ಯ ಡಾ| ಮಂಜುನಾಥ ಕುಲಾಲ್‌.

ಏನು ವ್ಯತ್ಯಾಸ
– ಯಶಸ್ವಿನಿಯಲ್ಲಿ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಆಸ್ಪತ್ರೆಗೆ ನೇರ ಕೊಡುತ್ತಿತ್ತು. ಹೊಸ ಯೋಜನೆಯಲ್ಲಿ ರೋಗಿ ಪಾವತಿಸಿ, ಸರಕಾರದಿಂದ ಪಡೆಯಬೇಕು.

Advertisement

– ಯಶಸ್ವಿನಿಯಲ್ಲಿ ಬಿಪಿಎಲ್‌ -ಎಪಿಎಲ್‌ ತಾರತಮ್ಯ ಇರಲಿಲ್ಲ. ಹೊಸದರಲ್ಲಿ ಬಿಪಿಎಲ್‌ನವರಿಗೆ ಮಾತ್ರ ಉಚಿತ, ಇತರರಿಗೆ ಶೇ. 30ರಷ್ಟು  ಮಾತ್ರ ನೆರವು ಲಭ್ಯ.

– ಯಶಸ್ವಿನಿಯಡಿ ನೆಟ್‌ವರ್ಕಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ನೆರವು ದೊರೆಯುತ್ತಿತ್ತು. ಹೊಸ ಯೋಜನೆಯಡಿ  ಸರಕಾರಿ ಎಲ್ಲ ರೀತಿಯ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆರೋಗ್ಯ ಸೇವೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲೇ ಪಡೆಯಬೇಕು. ‘ಚಿಕಿತ್ಸಾ ಸೌಲಭ್ಯ ಇಲ್ಲ’ ಎಂದು ಸರಕಾರಿ ಆಸ್ಪತ್ರೆಯ ಪತ್ರವಿಲ್ಲದೆ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ವೆಚ್ಚ ದೊರೆಯದು. ಒಂದುವೇಳೆ ಪತ್ರವಿದ್ದರೆ ಪ್ಯಾಕೇಜ್‌ ದರಗಳ ವೆಚ್ಚ ಅಥವಾ ನೈಜ ವೆಚ್ಚಗಳ ಪೈಕಿ ಕಡಿಮೆ ಇರುವ ದರದ ಶೇ. 30 ಚಿಕಿತ್ಸಾ ವೆಚ್ಚವನ್ನು ಸರಕಾರ ಫಲಾನುಭವಿಗೆ ಮರುಪಾವತಿಸಲಿದೆ.  

ಹೊಸ ಸರಕಾರದ ಸ್ಪಷ್ಟ ಮಾರ್ಗಸೂಚಿ ಬಂದ ಅನಂತರ ಈ ಬಗ್ಗೆ ಮಾಹಿತಿ ನೀಡಲಾಗುವುದು. ಪ್ರಸ್ತುತ ಇರುವ ಮಾರ್ಗದರ್ಶಿಯಂತೆ ಯಶಸ್ವಿನಿ ಮೇ 31 ರ ಬಳಿಕ ‘ಆರೋಗ್ಯ ಕರ್ನಾಟಕ’ ಯೋಜನೆ ಜತೆಗೆ ವಿಲೀನಗೊಳ್ಳಲಿದೆ. ಆದ್ದರಿಂದ ಗೊಂದಲ ಬೇಡ.
– ಡಾ| ರೋಹಿಣಿ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next