ಮುಂಬಯಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆ ಕಂಡ 27 ದಿನಗಳ ಬಳಿಕವೂ ಮತ್ತೊಂದು ಮೈಲಿಗಲ್ಲು ನೆಟ್ಟಿದ್ದು, ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು 5.5 ಕೋಟಿಗೂ ಅಧಿಕ ಮಂದಿ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದು, ಇದೊಂದು ದಾಖಲೆಯಾಗಿದೆ ಎಂದು ವರದಿ ತಿಳಿಸಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಭಾರತದಲ್ಲಿ ಈವರೆಗೆ 958 ಕೋಟಿ ರೂಪಾಯಿ ಗಳಿಸಿದ್ದು, ಜಾಗತಿಕವಾಗಿ 1,160 ಕೋಟಿ ರೂಪಾಯಿ ಗಳಿಕೆ ಕಂಡಿರುವುದಾಗಿ ಮೂಲಗಳು ಹೇಳಿವೆ.
ಕರ್ನಾಟಕ, ತೆಲಂಗಾಣದಲ್ಲಿ 70 ಲಕ್ಷ ಮಂದಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ವೀಕ್ಷಿಸಿದ್ದು, ಆಂಧ್ರಪ್ರದೇಶದಲ್ಲಿ 85 ಲಕ್ಷ ಮಂದಿ, ತಮಿಳುನಾಡು ಮತ್ತು ಕೇರಳದಲ್ಲಿ 45 ಲಕ್ಷ ಮಂದಿ ಈ ಚಿತ್ರವನ್ನು ವೀಕ್ಷಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಒಟ್ಟು 2.70 ಕೋಟಿಗೂ ಹೆಚ್ಚು ಮಂದಿ ಸಿನಿಮಾ ವೀಕ್ಷಿಸಿದ್ದು, ಉತ್ತರಭಾರತದಲ್ಲಿ 2.35 ಕೋಟಿ ಮಂದಿ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದ್ದಾರೆ.
ಭಾರತದಲ್ಲಿ ಬಾಹುಬಲಿ ಹಾಗೂ ಗದ್ದರ್ ಸಿನಿಮಾದ ನಂತರ ಚಿತ್ರಮಂದಿರದಲ್ಲಿ ಅತ್ಯಧಿಕ ಜನ ವೀಕ್ಷಿಸಿದ ಮೂರನೇ ಚಿತ್ರ ಎಂಬ ಹೆಗ್ಗಳಿಕೆ ಕೆಜಿಎಫ್ ಚಾಪ್ಟರ್ 2ನದ್ದಾಗಿದೆ. ಇನ್ನು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರವನ್ನು ಭಾರತದಲ್ಲಿ 4.40 ಕೋಟಿ ಮಂದಿ ವೀಕ್ಷಿಸಿದ್ದರು. 2000ನೇ ಇಸವಿಯಿಂದ ಈವರೆಗೆ ದಂಗಲ್, ಕಭಿ ಕುಶಿ ಕಭಿ ಗಮ್, 2.0, ಬಜರಂಗಿ ಭಾಯಿಜಾನ್, ಪಿಕೆ, ಧೂಮ್ 3, ಎಂದಿರನ್ ಸಿನಿಮಾವನ್ನು 3 ಕೋಟಿಗೂ ಅಧಿಕ ಜನರು ವೀಕ್ಷಿಸಿರುವುದಾಗಿ ವರದಿ ತಿಳಿಸಿದೆ.
ಚಿತ್ರಮಂದಿರದಲ್ಲಿ ಅತೀ ಹೆಚ್ಚು ಮಂದಿ ವೀಕ್ಷಿಸಿದ ಐದು ಸಿನಿಮಾಗಳು:
- ಬಾಹುಬಲಿ 2: 10.80 ಕೋಟಿ ಮಂದಿ
- ಗದ್ದರ್: 9 ಕೋಟಿ ಮಂದಿ
- ಕೆಜಿಎಫ್ ಚಾಪ್ಟರ್ 2: 5.05 ಕೋಟಿ ಮಂದಿ
- ಬಾಹುಬಲಿ 1: 4.90 ಕೋಟಿ
- ಆರ್ ಆರ್ ಆರ್: 4.40 ಕೋಟಿ ಮಂದಿ