Advertisement

ಯಶ್‌ ಬಾಡಿಗೆ ಮನೆ ವಿವಾದ: ತೀರ್ಪು ಎತ್ತಿ ಹಿಡಿದ ಹೈಕೋರ್ಟ್‌

06:35 AM Sep 06, 2018 | |

ಬೆಂಗಳೂರು: ಚಿತ್ರನಟ ಯಶ್‌ ವಾಸ ಮಾಡುತ್ತಿರುವ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಸೆಷನ್ಸ್‌ ಕೋರ್ಟ್‌  ನೀಡಿರುವ ತೀರ್ಪನ್ನು ಹೈಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ.

Advertisement

ಸೆಷನ್ಸ್‌ ಕೋರ್ಟ್‌ ಆದೇಶ ಪ್ರಶ್ನಿಸಿ ಯಶ್‌ ತಾಯಿ ಎ.ಪುಷ್ಪಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್‌.ಬೋಪಣ್ಣ   ಹಾಗೂ  ನ್ಯಾ. ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರಿದ್ದ ವಿಭಾಗೀಯಪೀಠ, ಅಧೀನ ನ್ಯಾಯಾಲಯದ ಆದೇಶದಂತೆ ಯಶ್‌ ಕುಟುಂಬ ಮನೆ ಮಾಲಕರಿಗೆ ಬಾಕಿ ಉಳಿಸಿಕೊಂಡಿರುವ 23.27 ಲಕ್ಷ ರೂ. ಮನೆ ಬಾಡಿಗೆ ಹಣವನ್ನು ಪಾವತಿಸಬೇಕು ಎಂದು ನಿರ್ದೇಶನ ನೀಡಿತು.

ಅಲ್ಲದೇ ಮನೆ ಬಾಡಿಗೆಯ ಬಾಕಿ ಹಣ ನೀಡಿ ಮುಂದಿನ  ವರ್ಷ ಮಾರ್ಚ್‌ 31ರವರೆಗೆ ಅದೇ ಮನೆಯಲ್ಲಿ ವಾಸ ಮುಂದುವರಿಸಬಹುದು. ಇಲ್ಲವಾದಲ್ಲಿ ಡಿಸೆಂಬರ್‌ನಲ್ಲಿ ಮನೆ ಖಾಲಿ ಮಾಡಬೇಕು ಎಂದು ಸಹ ಹೈಕೋರ್ಟ್‌ ಆದೇಶಿಸಿತು.

ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿ ಮುನಿಪ್ರಸಾದ್‌ ಹಾಗೂ ಡಾ.ವನಜಾ ಎಂಬುವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಯಶ್‌ ಕುಟುಂಬ ವಾಸವಾಗಿದೆ. ಬಾಡಿಗೆ ಹಣಕ್ಕೆ ಸಂಬಂಧಿಸಿದಂತೆ ಮನೆ ಮಾಲಕ ಹಾಗೂ ಯಶ್‌ ನಡುವೆ ವಿವಾದವಾಗಿತ್ತು. ಈ ವಿವಾದ ಕೋರ್ಟ್‌ ಮೆಟ್ಟಿಲೇರಿತ್ತು. ಅದೃಷ್ಟದ ಮನೆ ಎಂಬ ಕಾರಣಕ್ಕೆ ಯಶ್‌ ಮನೆ ಖಾಲಿ ಮಾಡಲು ನಿರಾಕರಿಸಿದ್ದರು.

ಆದರೆ, ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ, ಬಾಕಿ ಹಣ ಪಾವತಿಸಬೇಕು ಮತ್ತು ಮನೆ ಖಾಲಿ ಮಾಡುವಂತೆ ಯಶ್‌ ಕುಟುಂಬಕ್ಕೆ ನಿರ್ದೇಶನ ನೀಡಬೇಕು ಎಂದು ಮನೆ ಮಾಲಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಲಯ ಬಾಡಿಗೆ ಹಣ ಪಾವತಿಸಿ, ಮನೆ ಖಾಲಿ ಮಾಡುವಂತೆ ಆದೇಶಿಸಿತು.

Advertisement

ಇದನ್ನು ಪ್ರಶ್ನಿಸಿ ಯಶ್‌ ತಾಯಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬುಧವಾರ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಯಶ್‌ ಕುಟುಂಬದವರು ಈಗಾಗಲೇ ಮನೆಯನ್ನು ನವೀಕರಣ ಮಾಡಲು 12 ಲಕ್ಷ ರೂ.ಹಣವನ್ನು ನೀಡಿದ್ದಾರೆ. ಆದರೆ, ಮನೆಯ ಮಾಲಕರು ಆ ಹಣದ ಬಗ್ಗೆ ಏನು ಹೇಳದೆ ಬಾಕಿ ಉಳಿಸಿಕೊಂಡಿರುವ ಹಣವನ್ನು ನೀಡಿ ಎಂದು ಕೋರ್ಟ್‌ ಮೆಟ್ಟಿಲೇರಿದ್ದಾರೆ  ಎಂದು ಪೀಠಕ್ಕೆ ವಿವರಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ಮನೆ ಮಾಲಕರಿಗೆ 23.27 ಲಕ್ಷ ರೂ. ಪಾವತಿಸುವಂತೆ ಯಶ್‌ ಕುಟುಂಬಕ್ಕೆ ನಿರ್ದೇಶನ ನೀಡಿ ಅರ್ಜಿ ವಜಾಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next