ಯಲಹಂಕ: “ಭವಿಷ್ಯದಲ್ಲಿ ಹನಿ ನೀರಿಗೂ ಮಹತ್ವವಿದೆ. ಆದ್ದರಿಂದ ಇಂದಿನಿಂದಲೇ ಕೆರೆಗಳ ಪುನಶ್ಚೇತನಕ್ಕೆ ನಾಗರಿಕರು ಕಾರ್ಯಪ್ರವೃತ್ತವಾಗಬೇಕು,” ಎಂದು ಚಿತ್ರ ನಟ ಯಶ್ ಮನವಿ ಮಾಡಿದ್ದಾರೆ. ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಾರ್ಷಿಕ ತಂತ್ರಜ್ಞಾನ – ಸಾಂಸ್ಕೃತಿಕ ಹಬ್ಬ “ಅನಾದ್ಯಂತ’ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಅಂತರ್ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶವಾಗಿರಬಾರದು. ಕೆರೆ ಕುಂಟೆಗಳನ್ನು ದತ್ತು ತೆಗೆದುಕೊಂಡು ಅವುಗಳನ್ನು ಪುನಶ್ಚೇತನಗೊಳಿಸಿಬೇಕು. ನಿಟ್ಟೆ ಮೀನಾಕ್ಷಿಯಂಥ ತಾಂತ್ರಿಕ ವಿದ್ಯಾಲಯದಂಥ ಸಾಮಾಜಿಕ ಕಾಳಜಿ ಹೊಂದಿದ ಸಂಸ್ಥೆ ತಮಗೆ ಸನಿಹದ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಬೇಕು,” ಎಂದು ಕಾರ್ಯಕ್ರಮದಲ್ಲಿ ಸಲಹೆ ನೀಡಿದರು.
ತಮ್ಮ ನೇತೃತ್ವದಲ್ಲಿ ಕೆರೆ ಅಭಿವೃದ್ಧಿ ಕಾರ್ಯದಲ್ಲಿ ಮುನ್ನಡೆಯುತ್ತಿರುವ “ಯಶೋಮಾರ್ಗ’ ಸಂಘಟನೆಯೊಂದಿಗೆ ಯುವಕರು ಕೈಜೋಡಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು. ಮಣಿಪಾಲ್ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ “ಬದುಕಿನ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಲು ಅಗತ್ಯವಿರುವ ಅನುಭವ ಪಡೆಯಲು ಕಾಲೇಜುಗಳು ನಿಜವಾದ ಕಲಿಕೆಯ ತಾಣಗಳು. ಬೋಧಕರು ಬದುಕಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು,” ಎಂದರು.
ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ. ಎನ್.ಆರ್. ಶೆಟ್ಟಿ ಮಾತನಾಡಿ, “ಯುವಜನತೆ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ಭಾರತ ಬಲಿಷ್ಠವಾಗಲಿದೆ,” ಎಂದರು. ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್, ಆಡಳಿತಾಧಿಕಾರಿ ರೋಹಿತ್ ಪೂಂಜ, ವಿಜಾnನಿ ಹಾಗೂ ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದ ಸಲಹೆಗಾರ ಪ್ರೊ. ಎಲ್.ಎಂ. ಪಟ್ನಾಯಕ್ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಸುಧಾರಾವ್ ಇದ್ದರು.