ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ʼಯಶ್19ʼ ಗಾಗಿ ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೇನು ಅವರ ಮುಂದಿನ ಸಿನಿಮಾದ ಅಪ್ಡೇಟ್ ಬಂದೇ ಬಿಡುತ್ತದೆ ಎನ್ನುತ್ತಿರುವ ಪ್ರೇಕ್ಷಕರಿಗೆ ನಿರಾಸೆ ಉಂಟಾಗುತ್ತಿದೆ.
ʼಕೆಜಿಎಫ್ʼ ಸರಣಿ ಮೂಲಕ ಗ್ಲೋಬಲ್ ಸ್ಟಾರ್ ಆಗಿ ದೇಶ – ವಿದೇಶದಲ್ಲಿ ಮಿಂಚಿರುವ ರಾಕಿಭಾಯ್ ಖ್ಯಾತ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆ.ಜೆ.ಪೆರ್ರಿ ಅವರನ್ನು ಭೇಟಿ ಆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಯಶ್ ಅವರು ಗೀತು ಮೋಹನ್ ದಾಸ್ ಅವರ ಗೋವಾ ಡ್ರಗ್ಸ್ ಕಥೆಯನ್ನೊಳಗೊಂಡಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೇನು ಇದೇ ಸಿನಿಮಾ ‘ಯಶ್19’ ಸಿನಿಮಾವಾಗಿ ಅನೌನ್ಸ್ ಆಗಲಿದೆ ಎನ್ನಲಾಗುತ್ತಿದೆ. ಈ ನಡುವೆ ಯಶ್ ಹಾಲಿವುಡ್ ನಿರ್ದೇಶಕ ಜೆ.ಜೆ.ಪೆರ್ರಿ ಅವರನ್ನು ಭೇಟಿ ಆಗಿ ಆತ್ಮೀಯವಾಗಿ ಕೆಲ ಕ್ಷಣಗಳನ್ನು ಕಳೆದಿದ್ದಾರೆ.
ಲಂಡನ್ ನಲ್ಲಿ ಜೆ.ಜೆ.ಪೆರ್ರಿ ಅವರನ್ನು ಯಶ್ ಭೇಟಿ ಆಗಿದ್ದು, ಅಭಿಮಾನಿಗಳ ವಲಯದಲ್ಲಿ ಇದು ಸಿನಿಮಾ ವಿಚಾರದ ಭೇಟಿ ಎಂದೇ ಚರ್ಚೆ ಆಗುತ್ತಿದೆ. ಯಶ್ ಹಾಲಿವುಡ್ ನಲ್ಲಿ ಜೆ.ಜೆ.ಪೆರ್ರಿ ಅವರ ಸಿನಿಮಾವೊಂದರಲ್ಲಿ ಯಶ್ ಪಾತ್ರವೊಂದನ್ನು ಮಾಡಲಿದ್ದಾರೆ ಎನ್ನುವ ಮಾತೊಂದು ಕೇಳಿ ಬರುತ್ತಿದೆ. ಆದರೆ ಇದು ಅಧಿಕೃತವಾಗಿಲ್ಲ.
ಭೇಟಿ ಕುರಿತ ಫೋಟೋವನ್ನು ಜೆ.ಜೆ.ಪೆರ್ರಿ ಹಂಚಿಕೊಂಡಿದ್ದು ಅದರಲ್ಲಿ ಯಶ್ ನನ್ನು ಬ್ರದರ್ ಎಂದು ಅವರು ಕರೆದಿದ್ದಾರೆ.
ಇತ್ತೀಚೆಗೆ ಯಶ್ ಖ್ಯಾತ ಎಫ್ 1 ಕಾರ್ ರೇಸರ್ ಲೇವಿಸ್ ಹ್ಯಾಮಿಲ್ಟನ್ ಅವರನ್ನು ಭೇಟಿ ಆಗಿದ್ದರು. ಆ ಫೋಟೋ ಕೂಡ ಭಾರೀ ವೈರಲ್ ಆಗಿತ್ತು.
ಮುಂದಿನ ತಿಂಗಳು ಯಶ್ ಅವರ ಸಿನಿಮಾದ ಅಪ್ಡೇಟ್ ಹೊರಬೀಳುವ ಸಾಧ್ಯತೆಯಿದೆ.