ಮುಂಬಯಿ: ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ ʼರಾಮಾಯಣʼ ದೊಡ್ಡಮಟ್ಟದಲ್ಲೇ ತೆರೆಗೆ ಬರುವುದು ಪಕ್ಕಾ ಆಗಿದೆ. ಈ ಸಿನಿಮಾ ಸಟ್ಟೇರುವ ಮುನ್ನ ಅನೇಕ ಕಾರಣಗಳಿಂದ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ಬಿಗ್ ಅಪ್ಡೇಟ್ ವೊಂದು ಹೊರಬಿದ್ದಿದೆ.
ಸಿನಿಮಾದಲ್ಲಿ ʼರಾಮʼನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಯಶ್ ʼರಾವಣʼನಾಗಿ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಸಿನಿಮಾ ಅನೌನ್ಸ್ ಆದ ದಿನದಿಂದ ಸದ್ದು ಮಾಡಿತ್ತು. ಇದೀಗ ಯಶ್ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ.
ಯಶ್ ʼರಾಮಾಯಣʼ ಸಿನಿಮಾದ ಭಾಗವಾಗಲಿದ್ದಾರೆ ಆದರೆ ʼರಾವಣʼನ ಪಾತ್ರದಲ್ಲಿ ಅಲ್ಲ. ಬದಲಾಗಿ ನಿರ್ಮಾಪಕರಾಗಿ. ಹೌದು ʼರಾಮಾಯಣʼ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಅವರು ತನ್ನ ಪ್ರೈಮ್ ಫೋಕಸ್ ಸ್ಟುಡಿಯೋ ಸಂಸ್ಥೆಯಡಿ ನಿರ್ಮಾಣ ಮಾಡಲಿದ್ದಾರೆ. ಅವರ ಸಂಸ್ಥೆಯ ಜೊತೆ ಯಶ್ ಅವರು ಕೈಜೋಡಿಸಿದ್ದಾರೆ. ಯಶ್ ಅವರು ತಮ್ಮ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ʼರಾಮಾಯಣʼಕ್ಕೆ ಸಹ ನಿರ್ಮಾಪಕರಾಗಿ ಕೈಜೋಡಿಸಲಿದ್ದಾರೆ ಎನ್ನುವ ಸುದ್ದಿಯೊಂದು ಅಧಿಕೃತವಾಗಿ ಹೊರಬಿದ್ದಿದೆ.
ಆಸ್ಕರ್ ವಿಜೇತ ವಿಎಫ್‌ಎಕ್ಸ್ ಕಂಪನಿ ಡಿಎನ್‌ಇಜಿಯ ಸಿಇಒ ಕೂಡ ಆಗಿರುವ ನಮಿತ್ ಮಲ್ಹೋತ್ರಾ ಅವರ ಕಂಪೆನಿ ಓಪನ್‌ಹೈಮರ್, ಇ ಮಚಿನಾ, ಇಂಟರ್‌ಸ್ಟೆಲ್ಲಾರ್, ಡ್ಯೂನ್ ಮತ್ತು ಫಸ್ಟ್ ಮ್ಯಾನ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಯಶ್, “ ಭಾರತೀಯ ಸಿನಿರಂಗ ಅಂತರಾಷ್ಟ್ರೀಯ ಗಮನ ಸೆಳೆಯುವ ಚಲನಚಿತ್ರಗಳನ್ನು ನಿರ್ಮಿಸುವುದು ನನ್ನ ಜೀವನದ ಗುರಿಯಾಗಿದೆ. ಅತ್ಯುತ್ತಮ ವಿಎಫ್ ಎಕ್ಸ್ ಸ್ಟುಡಿಯೋಗಳ ಜೊತೆ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಲಾಸ್ ಏಂಜಲೀಸ್‌ಗೆ ಪ್ರಯಾಣಿಸಿದ್ದೆ. ಆ ವೇಳೆ ನನಗೆ ಗೊತ್ತಾಗಿದ್ದು, ಈ ವಿಎಫ್ ಎಕ್ಸ್ ಕಂಪೆನಿಯ ಹಿಂದಿರುವುದು ಓರ್ವ ಭಾರತೀಯನ ತಲೆ ಎಂದು. ಅವರೇ ನಮಿತ್. ನಮ್ಮಿಬ್ಬರ ನಡುವೆ ಸಾಕಷ್ಟು ಚರ್ಚೆಗಳು ನಡೆದಿದೆ. ನಮ್ಮಿಬ್ಬರ ನಡುವಿನ ಅಲೋಚನೆ ಹಾಗೂ ಕಲ್ಪನೆಗಳು ಒಂದೇ ರೀತಿ ಆಗಿದ್ದವು. ಈ ವೇಳೆ ʼರಾಮಾಯಣʼದ ಬಗ್ಗೆ ವಿಚಾರ ಚರ್ಚೆಗೆ ಬಂತು ಎಂದು ಯಶ್ ಹೇಳಿದ್ದಾರೆ.
ರಾಮಾಯಣದ ಕಥೆಗೆ ನ್ಯಾಯ ಸಲ್ಲಿಸಲು ಸಿದ್ಧನಾಗಿದ್ದೇನೆ. ಈ ಅದ್ಭುತ ಕಥೆಯನ್ನು ಪ್ರಪಂಚದಾದ್ಯಂತದ ಜನರಿಗೆ ಸಿನಿಮೀಯ ಅನುಭವವಾಗಿಸುವ ರೀತಿಯಲ್ಲಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ನಮಿತ್ ಹೇಳಿದ್ದಾರೆ.
ಇನ್ನೊಂದೆಡೆ ಯಶ್ ʼರಾಮಾಯಣʼದಲ್ಲಿ ʼರಾವಣʼನ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ. ಅವರು ಸಹ ನಿರ್ಮಾಪಕರಾಗಿ ಮಾತ್ರ ಸಿನಿಮಾದ ಭಾಗವಾಗಲಿದ್ದಾರೆ ಎನ್ನಲಾಗಿದೆ.
ಸಿನಿಮಾದಲ್ಲಿ ಹನುಮಾನ್ ಪಾತ್ರದಲ್ಲಿ ಸನ್ನಿ ಡಿಯೋಲ್ , ಬಾಬಿ ಡಿಯೋಲ್ ಕುಂಭಕರ್ಣನಾಗಿ, ವಿಭೂಷಣನಾಗಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇನ್ನು ರಾಜ ದಶರಥನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಿದ್ದಿಲ್ಲ.