ಮಂಡ್ಯ: ಚುನಾವಣೆಯಲ್ಲಿ ಅಮ್ಮ (ಸುಮಲತಾ)ನನ್ನು ಸೋಲಿಸಲು ಮೂವರು ಸುಮಲತಾ ಅವರಿಂದ ನಾಮಪತ್ರ ಸಲ್ಲಿಸಿ ಜನರನ್ನು ಕನ್‌ಫ್ಯೂಸ್ ಮಾಡಲು ಹೊರಟಿದ್ದಾರೆ. ಮಂಡ್ಯ ಜನರು ಕನ್‌ಫ್ಯೂಸ್ ಆಗುವಷ್ಟು ದಡ್ಡರಲ್ಲ ಎಂದು ಚಿತ್ರನಟ ಯಶ್ ಹೇಳಿದರು.
ರಣಕಹಳೆ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತಾಲೂಕಿನ ಊರಮಾರಕಸಲಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ರಣಕಹಳೆ ಊದುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ನಾವು ಯಾರ ಬಗ್ಗೆಯೂ ಮಾತನಾಡೋದಿಲ್ಲ.
ನಮ್ಮ ಬಗ್ಗೆ ಯಾರು ಎಷ್ಟೇ ಮಾತನಾಡಿದರೂ ಉತ್ತರ ಕೊಡುವುದಿಲ್ಲ. ಮಾತನಾಡುವವರಿಗೆಲ್ಲಾ ಜನರು ಉತ್ತರ ಕೊಡುತ್ತಾರೆ ಎಂದು ಹೇಳಿದರು. ಅಂಬರೀಶ್ ತೋರಿಸುತ್ತಿದ್ದ ಪ್ರೀತಿ ನಿಷ್ಕಲ್ಮಶವಾಗಿತ್ತು. ಅವರ ಪ್ರೀತಿ ಎಂದಿಗೂ ನಾಟಕೀಯವಾಗಿರಲಿಲ್ಲ.
ಮಂಡ್ಯ ಎಂದರೆ ಅಂಬರೀಶಣ್ಣಂಗೆ ಬಹಳಾ ಪ್ರೀತಿ. ಮಂಡ್ಯ ಜನರು ಎಲ್ಲೇ ಸಿಕ್ಕರೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದರು. ಹೃದಯವಂತಿಕೆಗೆ ಮತ್ತೂಂದು ಹೆಸರೇ ಅಂಬರೀಶ್ ಎಂದು ಹೇಳಿದರು.
ಅಮ್ಮನ ಬೆಂಬಲಕ್ಕೆ ನಿಲ್ಲುವೆ: ಕಷ್ಟಕಾಲದಲ್ಲಿ ನೆರವಾದವರನ್ನು ನೆನೆಯೋದು ನಮ್ಮ ವ್ಯಕ್ತಿತ್ವ. ನಾನು ಇಂದು ಏನೇ ಆಗಿದ್ದರೂ ಅದರ ಹಿಂದೆ ಅಂಬರೀಶಣ್ಣನ ಆಶೀರ್ವಾದವಿದೆ. ಆ ಪ್ರೀತಿಯ ಸೆಳೆತವೇ ಇಂದು ಅಮ್ಮನ ಬೆಂಬಲಕ್ಕೆ ನಿಲ್ಲುವಂತೆ ಮಾಡಿದೆ. ನನ್ನನ್ನೂ ಸೇರಿದಂತೆ ಹಲವರಿಗೆ ಅಂಬರೀಶಣ್ಣ ಬೇಕಾದಷ್ಟು ಸಹಾಯ ಮಾಡಿದ್ದಾರೆ. ಅವರ ಮನೆಯ ಮಗನಾಗುವಷ್ಟು ಸಿಕ್ಕಿರುವುದೇ ನನಗೆ ದೊಡ್ಡ ಪುಣ್ಯ ಎಂದರು.
ಅಮ್ಮ ನಿಮ್ಮೂರಿನ ಸೊಸೆ. ಮದುವೆ ಮಾಡಿಕೊಟ್ಟ ಮೇಲೆ ಆ ಹೆಣ್ಣು ಗಂಡನ ಮನೆಯವರಾಗುತ್ತಾರೆ. ಆದರೂ ಕೆಲವರು ಸುಮಲತಾ ಅಲ್ಲಿಯವರು, ಇಲ್ಲಿಯವರು ಎಂದೆಲ್ಲಾ ಮಾತನಾಡುತ್ತಿದ್ದಾರೆ. ಇದು ಸರಿಯೇ ಎನ್ನುವುದನ್ನು ಜನರೇ ತೀರ್ಮಾನ ಮಾಡಬೇಕು ಎಂದು ಹೇಳಿದರು.