ಬಂಗಾರಪೇಟೆ: ಕುಡಿಯುವ ನೀರಿನ ಯೋಜನೆ ಆಗಿರುವ ಯರಗೋಳ್ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡು ತುಂಬಿ ಹರಿದು 8 ತಿಂಗಳ ನಂತರ ಇದೇ ಮೊಟ್ಟ ಮೊದಲ ಬಾರಿಗೆ ಗುರುವಾರ ರಾತ್ರಿ ಬಂಗಾರಪೇಟೆಗೆ ನೀರು ಬಂದಿದೆ.
ತಾಲೂಕಿನಲ್ಲಿ 2022 ಆಗಷ್ಟನಲ್ಲಿ ಯರಗೋಳ್ ಅಣೆಕಟ್ಟು ತುಂಬಿದ್ದು, ತಾಲೂಕಿನ ಗಡಿಭಾಗದಲ್ಲಿರುವ ಯರಗೋಳ್ ಅಣೆಕಟ್ಟು 300 ಎಕರೆ ಭೂ ಪ್ರದೇಶದಷ್ಟು ವಿಶಾಲವಾಗಿದೆ. ಅಣೆಕಟ್ಟು ನಿರ್ಮಾಣಗೊಂಡ 2 ವರ್ಷಗಳ ನಂತರ ತುಂಬಿ ಹರಿದಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುನರತ್ನ ನೇತೃತ್ವದಲ್ಲಿ ಅಣೆಕಟ್ಟು ಉದ್ಘಾಟನೆ ಮಾಡಿದ್ದರೂ, ಸಹ ನೀರು ಸರಬರಾಜು ಮಾಡಲು ಯಂತ್ರ ಅಳವಡಿಕೆ ಮಾಡದ ಕಾರಣ, ಅಣೆಕಟ್ಟಿನಲ್ಲಿಯೇ ನೀರು ಸಂಗ್ರಹವಾಗಿತ್ತು.
ಆನಂದ ಗಿರಿ ಬಳಿ ಪಂಪ್‌ಹೌಸ್ : ಜಿಲ್ಲಾಡಳಿತವು ಕಳೆದ 8 ತಿಂಗಳ ಹಿಂದೆ ಲೋಕಾರ್ಪಣೆ ಮಾಡಿದ್ದರೂ, ನೀರು ಪೂರೈಕೆ ಮಾಡಲು ಯಂತ್ರಗಳ ಕೊರತೆಯಿಂದ ಸಾಧ್ಯವಾಗಲಿಲ್ಲ. ಸರ್ಕಾರವು ಸುಮಾರು 8 ಕೋಟಿಗೆ ಟೆಂಡರ್ ಕರೆದು ಅಣೆಕಟ್ಟಿನಿಂದ ಬಂಗಾರಪೇಟೆ ಸರ ಬರಾಜು ಮಾಡಿದ ನಂತರ ಇಲ್ಲಿಂದ ಕೋಲಾರ ಹಾಗೂ ಮಾಲೂರು ನಗರಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಿದೆ. ತಾಲೂಕಿನ ಬೂದಿ ಕೋಟೆ ಮುಖ್ಯರಸ್ತೆಯ ಆನಂದಗಿರಿ ಬಳಿ ನಿರ್ಮಾಣ ಮಾಡಿರುವ ಬೃಹತ್ ಗಾತ್ರದ ನೀರು ಸಂಗ್ರಹಣೆಯ ಪಂಪ್‌ಹೌಸ್‌ನಲ್ಲಿ ನೀರನ್ನು ಪಂಪ್ ಮಾಡಲು ಯಂತ್ರಗಳನ್ನು ಅಳವಡಿಸಿ ಯಶಸ್ವಿಯಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೋಲಾರ ವಿಭಾಗದ ಅಧಿಕಾರಿಗಳು ನೀರು ಸರಬರಾಜು ಮಾಡಲು ಎಲ್ಲಾ ಯಂತ್ರೋಪಕರಣಗಳನ್ನು ಯಶಸ್ವಿಯಾಗಿ ಅಳವಡಿಸಿದೆ. ಮೇ 11 ರಂದು ರಾತ್ರಿ ಯರಗೋಳ್ ಅಣೆಕಟ್ಟಿನಿಂದ ಪಂಪ್ ಮಾಡಿದ್ದರಿಂದ ಬಂಗಾರಪೇಟೆಯ ಆನಂದಗಿರಿ ಪಂಪ್‌ಹೌಸ್‌ಗೆ ನೀರು ಬಂದಿದೆ. ಇದನ್ನು ವೀಕ್ಷಿಸಿದ ಪುರಸಭೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
45 ಗ್ರಾಮಗಳಿಗೆ ಕುಡಿಯುವ ನೀರು: ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು ಪಟ್ಟಣಗಳಿಗೆ ಹಾದು ಹೋಗುವ ಮಾರ್ಗ ಮಧ್ಯೆ ಬರುವ 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆ ಯೋಜನೆ ಯರಗೋಳ್ ಅಣೆಕಟ್ಟು ಆಗಿದೆ. ಯೋಜನೆ 2006ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ಕಾಮಗಾರಿಯ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೋಲಾರ ವಿಭಾಗ ಹೊಂದಿದೆ. ಕಾಮಗಾರಿಯ ಗುತ್ತಿಗೆಯನ್ನು ಆಂಧ್ರ ಪ್ರದೇಶ ಮೂಲದ ರಾಮ್‌ಕೀ ಕಂಪನಿಯು ಪಡೆ ದಿದ್ದು, 24 ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿ ಬರೋಬ್ಬರಿ 13 ವರ್ಷಗಳು ತೆಗೆದುಕೊಂಡಿದೆ.
ಜಿಲ್ಲೆಗೆ ವರದಾನ: ಯರಗೋಳ್ ಅಣೆಕಟ್ಟು ಸಾರ್ವಜನಿಕರ ಉಪಯೋಗಕ್ಕೆ ಬರಲು ಮುಖ್ಯವಾಗಿ ಸಮರ್ಪಕ ಮಳೆಯಾದಲ್ಲಿ ನೀರು ಶೇಖರಣೆಯಾಗಲು, ಇದೊಂದು ಮಹತ್ವದ ಅಣೆಕಟ್ಟು ಆಗಲಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಿಂದ ಕೂಡಿದ ಯೋಜನೆಗೆ ಹೊರಗಿನಿಂದ ಯಾವುದಾದರೊಂದು ನೀರಾವರಿ ಯೋಜನೆಯ ಮೂಲಕ ನೀರು ಬಂದಿದ್ದೇ ಆದಲ್ಲಿ, ನೀರು ಶೇಖರಣೆಗೆ ಇದು ಉತ್ತಮ ಅಣೆಕಟ್ಟು ಆಗಿ ಕೋಲಾರ ಜಿಲ್ಲೆಗೆ ವರದಾನವಾಗಲಿದೆ.
ಯರಗೋಳ್ ಜಲಾಶಯವು ಒಟ್ಟು 500 ಎಂಸಿಎಫ್ಟಿ ಸಾಮಾರ್ಥ್ಯ ಹೊಂದಿದ್ದು, ಸರಾಸರಿ 136.50 ಮೀಟರ್ ಆಳವಾದ ಪ್ರದೇಶಹೊಂದಿದೆ. ಒಟ್ಟು 482.73 ಕ್ಯೂಮೆಕ್ ಪ್ರದೇಶ ಹೊಂದಿದ್ದು, ಸುಮಾರು 8 ಕೋಟಿಗಳ ವೆಚ್ಚದಲ್ಲಿ ಯರಗೋಳ್ ಅಣೆಕಟ್ಟಿನಿಂದ 24.5 ಕಿ.ಮೀ ದೂರದಿಂದ ಬಂಗಾರಪೇಟೆಗೆ ಹಾಗೂ ಮಾಲೂರು ಮತ್ತು ಕೋಲಾರ ನಗರಗಳಿಗೆ ನೀರು ಸರಬರಾಜು ಮಾಡಲು ನೂತನವಾಗಿ ಯಂತ್ರೋಪ ಕರಣ ಅಳವಡಿಸಿ ಪ್ರಯೋಗ ನಡೆಸಲಾಗಿದ್ದು, ಯಶಸ್ವಿಯಾಗಿ ರುವುದರಿಂದ ಮೇ ತಿಂಗಳ ಅಂತ್ಯದ ವೇಳೆಗೆ ನಿಯಾಮಾನುಸಾರವಾಗಿ ಮೂರು ನಗರಗಳಿಗೆ ನೀರು ಪೂರೈಕೆಯಾಗಲು ಕ್ರಮಕೈಗೊಳ್ಳಲಾಗುವುದು.
-ಬಿ.ಸಿ.ರವೀಂದ್ರ, ಕಾರ್ಯಪಾಲಕ ಅಭಿಯಂತರರು
-ಎಂ.ಸಿ.ಮಂಜುನಾಥ್.