ಅನೇಕ ಸಂದರ್ಭದಲ್ಲಿ ಮಾತನಾಡುವಾಗ ಆಡು ಬಳಕೆಯಲ್ಲಿ “ಯರ್ರಾಬಿರ್ರಿ’ ಎಂಬ ಪದ ಬಳಕೆಯನ್ನು ಕೇಳಿರುತ್ತೀರಿ. ಈಗ ಇದೇ “ಯರ್ರಾಬಿರ್ರಿ’ ಅನ್ನೋ ಪದ ಸಿನಿಮಾವೊಂದರ ಟೈಟಲ್ ಆಗಿ ತೆರೆಮೇಲೆ ಬರುತ್ತಿದೆ.
ಹೌದು, ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ “ಯರ್ರಾಬಿರ್ರಿ’ ಚಿತ್ರ, ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಇತ್ತೀಚೆಗೆ ಚಿತ್ರತಂಡ ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಬಿಡುಗಡೆ ಮಾಡಿದೆ.
ಇನ್ನು ಸಿನಿಮಾದ ಟೈಟಲ್ಲೇ ಹೇಳುವಂತೆ ಇದೊಂದು ಮಾಸ್-ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾ ಅನ್ನೋದು ಚಿತ್ರತಂಡದ ಮಾತು.
“ಯರ್ರಾಬಿರ್ರಿ’ ಚಿತ್ರಕ್ಕೆಗೋವಿಂದದಾಸರ್ ಕಥೆ, ಚಿತ್ರಕಥೆ ಬರೆದು ಸಂಕಲನ ಕಾರ್ಯ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. “ದಾಸ್ ಸಿನಿ ಕ್ರಿಯೇಶನ್ಸ್’ ಬ್ಯಾನರ್ ಅಡಿಯಲ್ಲಿ ಹೆಚ್.ಡಿ ದಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಮನಸಿನ ಚಿತ್ತಾರ’ ಕಿರುಚಿತ್ರದಲ್ಲಿ ನಟಿಸಿದ್ದ ಅಂಜನ್, ಸೋನು ಪಾಟೀಲ್, ಶಿಲ್ಪಾ ಶೈಲೇಶ್, ಆನಂದ್, ವಿ. ಶರಣ್, ಆನಂದರಂಗರೇಜು, ಎಸ್.ಕೆ ಉಪ್ಪಾರಮ ಗೋಪಾಲರೆಡ್ಡಿ, ರಬಿಸುಬ್ಬರಾವ್, ಸುನಂದಾ ಹೊಸಪೇಟ್, ವೆಂಕಟೇಶ್, ಸಂಸ್ಕೃತಿ ಚಂದ್ರು, ಅಮಿತ್ ಹಾವೇರಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಚುಟು ಚುಟು ಅಂತೈತೇ…’ ಹಾಡಿಗೆ ಸಾಹಿತ್ಯ ರಚಿಸಿದ ಖ್ಯಾತಿಯ ಶಿವು ಬೇರ್ಗಿ ಈ ಚಿತ್ರಕ್ಕೆ ಸಾಹಿತ್ಯದ ಜೊತೆಸಂಗೀತವನ್ನೂ ಸಂಯೋಜಿಸಿದ್ದಾರೆ. ಹುಡುಗನೊಬ್ಬ ಏನೆಲ್ಲತೊಂದರೆಗಳನ್ನು ಎದುರಿಸಿ, ದುಷ್ಟರಿಂದ ತನ್ನ ತಾಯಿ ಮತ್ತು ಪ್ರೇಯಸಿಯನ್ನು ಕಾಪಾಡುತ್ತಾನೆ ಅನ್ನೋದು ಚಿತ್ರದ ಕಥೆಯ ಎಳೆ.