Advertisement

ವರ್ಷಾಂತ್ಯದೊಳಗೆ ಯರಗೋಳು ಯೋಜನೆ ಪೂರ್ಣ

01:30 PM May 13, 2019 | Suhan S |

ಕೋಲಾರ: ನಗರ ಸೇರಿದಂತೆ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮತ್ತು ಶುದ್ಧ ನೀರು ಒದಗಿಸುವ ಧ್ಯೇಯದೊಂದಿಗೆ ಬಂಗಾರಪೇಟೆ ತಾಲೂಕಿನ ಯರ್ರಗೋಳ್‌ನಲ್ಲಿ ನಿರ್ಮಿಸಲಾಗುತ್ತಿರುವ ಯರಗೋಳ್‌ ಡ್ಯಾಂ ಕಾಮಗಾರಿ ಭರದಿಂದ ಸಾಗಿದ್ದು, ವರ್ಷದ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

Advertisement

ಬಂಗಾರಪೇಟೆ, ಮಾಲೂರು ಮತ್ತು ಕೋಲಾರ ನಗರ ಮತ್ತು ಪಟ್ಟಣ ಹಾಗೂ ಮಾರ್ಗಮದ್ಯದ 45 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು 258 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿತ್ತು. 168 ಕೋಟಿ ರೂ. ಡ್ಯಾಂ ಕಾಮಗಾರಿಗೆ ಮೀಸಲಿಡಲಾಗಿದೆ. 2006ರಲ್ಲಿ ಡ್ಯಾಂ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. 2013ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. 1 ವರ್ಷದ ಒಳಗೆ ಯೋಜನೆ ಪೂರ್ಣಗೊಳ್ಳಬೇಕಾಗಿತ್ತಾದರೂ ತಾಂತ್ರಿಕ ಕಾರಣದಿಂದ ನನೆಗುದಿಗೆ ಬಿದ್ದಿತ್ತು.

2004ರಲ್ಲಿ ಶಂಕುಸ್ಥಾಪನೆಯಾಗಿದ್ದ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದು, ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಆರ್‌.ರಮೇಶ್‌ಕುಮಾರ್‌ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಮುತುವರ್ಜಿ ತೋರಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಸೇರಿದಂತೆ ಯೋಜನೆ ವ್ಯಾಪ್ತಿಗೆ ಬರುವ ಶಾಸಕರೊಂದಿಗೆ ಸಭೆ ನಡೆಸಿ ಗುತ್ತಿಗೆದಾರರಿಗೆ ಕಾಮಗಾರಿ ಕೈಗೆತ್ತಿಕೊಳ್ಳಲು ಬೇಕಾದ ಎಲ್ಲ ರೀತಿಯ ಸಹಕಾರ ನೀಡಿದ್ದರು.

ತೆಲಂಗಾಣ ರಾಜ್ಯದ ಶಾಸಕ ವೇಣುಗೋಪಾಲರೆಡ್ಡಿ ಈ ಯೋಜನೆಯ ಗುತ್ತಿಗೆದಾರರಾಗಿದ್ದು, ಸ್ಪೀಕರ್‌ ರಮೇಶ್‌ಕುಮಾರ್‌ ಅವರ ಸೂಚನೆ ಮೇರೆಗೆ ಕಾಮಗಾರಿಯ ವೇಗ ಹೆಚ್ಚಿಸಿದ್ದಾರಲ್ಲದೆ ಈ ವರ್ಷದ ಅಂತ್ಯದೊಳಗೆ ಡ್ಯಾಂ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದಾರೆ.

ಕಳೆದ ಜನವರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸ್ಪೀಕರ್‌ ರಮೇಶ್‌ಕುಮಾರ್‌, ಯುಗಾದಿಯೊಳಗೆ ಡ್ಯಾಂ ಕಾಮಗಾರಿ ಪುರ್ಣಗೊಳಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಈ ಸಂಬಂಧ ಮಾರ್ಚ್‌ ತಿಂಗಳಲ್ಲಿ ಮತ್ತೂಂದು ಪ್ರಗತಿ ಪರಿಶೀಲನಾ ಸಭೆ ನಡೆಸಲು ತೀರ್ಮಾನಿಸಿದ್ದರಾದರೂ ಲೋಕಸಭೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

Advertisement

ಪ್ರಸ್ತುತ ಶೇ.50ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ದಿನಕ್ಕೆ 500 ಕ್ಯೂಬಿಕ್‌ ಮೀಟರ್‌ನಷ್ಟು ಕಾಂಕ್ರಿಟ್ ಕಾಮಗಾರಿ ಮುಗಿಸಿದಲ್ಲಿ ಇನ್ನು ಮೂರು ತಿಂಗಳಲ್ಲಿ ಡ್ಯಾಂ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳಿದೆ.

ಜೂನ್‌ ಮೊದಲ ವಾರದಲ್ಲಿ ಸ್ಪೀಕರ್‌ ರಮೇಶ್‌ಕುಮಾರ್‌ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸುವ ಸಾಧ್ಯತೆ ಇರುವುದರಿಂದ ಕೆಲಸ ಚುರುಕುಗೊಳಿಸಲಾಗಿದೆ.

ಡ್ಯಾಂ ಕಾಮಗಾರಿ ಈ ವರ್ಷದ ಅಂತ್ಯದೊಳಗಡೆ ಪೂರ್ಣಗೊಳ್ಳುವುದರ ಒಳಗೆ ಬಂಗಾರಪೇಟೆಯಲ್ಲಿ ಪಂಪ್‌ಹೌಸ್‌ ನಿರ್ಮಾಣ ಕಾರ್ಯ ಮುಗಿಯದಿದ್ದರೆ ಮಳೆಗಾಲದಲ್ಲಿ ಸಂಗ್ರಹವಾಗಲಿರುವ ನೀರು ವ್ಯರ್ಥವಾಗುವ ಸಾಧ್ಯತೆಗಳಿವೆ.

ಬಂಗಾರಪೇಟೆ-ಬೂದಿಕೋಟೆ ಮಾರ್ಗದಲ್ಲಿನ ರೈಲ್ವೆ ಗೇಟ್ ಮೂಲಕ ಪೈಪ್‌ಲೈನ್‌ ಹಾದುಹೋಗಬೇಕಾಗಿದ್ದು, ರೈಲ್ವೆ ಇಲಾಖೆಯಿಂದ ಇನ್ನೂ ಅನುಮತಿ ಸಿಗದಿರುವುದರಿಂದ ನೀರು ಸರಬರಾಜು ಕಾರ್ಯ ವಿಳಂಭವಾಗುವ ಆತಂಕ ಎದುರಾಗಿರುವುದರಿಂದ ಕೇಂದ್ರದ ಮೇಲೆ ಒತ್ತಡ ತರುವ ಜವಾಬ್ದಾರಿ ನೂತನ ಸಂಸದರ ಮೇಲಿದೆ.

ಈ ವರ್ಷದ ಅಂತ್ಯದೊಳಗೆ ಯರ್ರಗೋಳ್‌ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಮೂಡಿದೆ. ಡ್ಯಾಂ ಕಾಮಗಾರಿ ಪೂರ್ಣ0ಗೊಂಡರೆ ಸಾಲದು, ಉಳಿದ ಕಾಮಗಾರಿಗೆ ತ್ವರಿತಗತಿಯಲ್ಲಿ ಚಾಲನೆ ನೀಡಬೇಕಾಗಿದೆ. ಪಂಪ್‌ಹೌಸ್‌ ನಿರ್ಮಾಣದ ಜತೆಗೆ ಪವರ್‌ಲೈನ್‌ ಅಳವಡಿಕೆ ಕೆಲಸ ಜೊತೆಜೊತೆಯಾಗಿ ಕೈಗೆತ್ತಿಕೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next