ಶುಕ್ರವಾರ ಮತ್ತು ಶನಿವಾರ ಬಂತೆಂದರೆ ಸಾಕು ರವಿವಾರ ಎಲ್ಲಿ ಹೋಗೋಣ? ಏನು ಮಾಡೋಣ? ರೂಮ್‌ನಲ್ಲಿ ಕೂತು ನಮ್ಮ ಹುಬ್ಬಳ್ಳಿ-ಧಾರವಾಡ ಸುತ್ತಮುತ್ತ ಇರುವ ಸ್ಥಳಗಳ ಕುರಿತು ಚರ್ಚೆ. ಹಾಗೆಯೇ ಒಂದು ದಿನ ಶನಿವಾರ ರಾತ್ರಿ ನಮ್ಮ ಪಯಣ ಯಾಣದ ಕಡೆ ಹೋಗಲು ನಿರ್ಧಾರ ಮಾಡಿತು.
ಬೆಳಗ್ಗೆ 6ಕ್ಕೆ ಹೋಗೋಣ ಎಂದು ಹೇಳಿದವರು 7.30ಕ್ಕೆ ಹೊರಡಲು ಸಿದ್ಧರಾದೆವು. ಅದಕ್ಕೆ ಇಷ್ಟೇ ಕಾರಣ ಸೆಲ್ಫೀ ಯುಗದಲ್ಲಿ ಮೊಬೈಲ್ ಹಿಡಿದುಕೊಂಡು ನಿಂತರೆ ಬೇಗ ಹೋಗ್ತೀವಾ?
ಮಲೆನಾಡಿನ ಸೃಷ್ಟಿಯನ್ನು ನೋಡುವುದೇ ಒಂಥರಾ ಖುಷಿ. ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಭಯದಿಂದ ಕೂಡಿದೆ. ಬೆಟ್ಟಗುಡ್ಡಗಳ ಹಸುರು ಸಾಲು ಕಣ್ಣಿಗೆ ನೆಮ್ಮದಿ ಉಂಟು ಮಾಡುವುದರ ಜತೆಗೆ ಮನಸ್ಸಿಗೆ ಹಿತ ನೀಡುತ್ತಿತ್ತು. ಸ್ವತ್ಛಂದವಾಗಿ ಆಗಸದೆತ್ತರಕ್ಕೆ ನಿಂತ ಅಡಿಕೆ ಮರಗಳನ್ನು ನೋಡುವುದೇ ಚೆಂದ. ದಾಳಿ ಮಾಡಲೆಂದು ಕುಳಿತಿರುವ ವಾನರ ಸೇನೆ ನಮ್ಮ ಕಪಿಸೈನ್ಯಕ್ಕಿಂತ ದೊಡ್ಡದು.
ಮುಗಿಯದ ತಿರುವು, ಕಡಿದಾದ ಹಾದಿ ಡಾಮರು ರಸ್ತೆ. ವಿಪರೀತ ಮಳೆಯಿಂದ ದಾರಿ ಯಾವುದು, ಕಾಲುವೆ ಯಾವುದು ಎಂದು ಗೊತ್ತಾಗುತ್ತಿರಲಿಲ್ಲ. ದಾರಿಯಂತೂ ಭಯಾನಕವಾಗಿತ್ತು. ಹೀಗೆ ಹೋದಾಗ “ಯಾಣಕ್ಕೆ ಸ್ವಾಗತ’ ಎಂಬ ಬೋರ್ಡ್ ಕಂಡಾಗ ಎಲ್ಲಿಲ್ಲದ ಖುಷಿ.
ಅನಂತರ ಅಲ್ಲಿಂದ ಹತ್ತು ನಿಮಿಷ ಕಾಲುದಾರಿ ಕಾಡುಗಳ ಮಧ್ಯೆ ಒಮ್ಮೆಲೆ ಎದುರಾಗುವ ಕಲ್ಲು ಪರ್ವತವೇ ಮೋಹಿನಿ ಶಿಖರ. ಅದನ್ನು ನೋಡಿದ ಖುಷಿಯಿಂದ ಮುಂದೆ ಹೋದಾಗ ಅದರಕ್ಕಿಂತ ಬೃಹದಾಕಾರದಲ್ಲಿ ಕಲ್ಲಿನ ಪರ್ವತವೇ ಭೈರವ ಶಿಖರ. ಶಿಖರದ ಕೆಳಗಿನಿಂದ ದೇವಾಲಯದ ತಲೆಯೆತ್ತಿ ನೋಡಿದರೆ ಮುಗಿಯುವುದಿಲ್ಲ. ಶಿಖರದ ಬುಡದಲ್ಲಿ ಗುಹೆ ರೂಪದಲ್ಲಿ ದೇವಾಲಯ. ನಿರಂತರವಾಗಿ ಜಿನುಗುವ ನೀರಿನ ಅಭಿಷೇಕ. ಹೀಗೆ ಶಿಖರದ ಎಡಗಡೆಯಿಂದ ಮೆಟ್ಟಿಲೇರುತ್ತಾ ಹೋದಾಗ ಅಪೂರ್ವವಾದ ದೃಶ್ಯ ಕಣ್ಮುಂದೆ ಬಂದಿತು.
ಹಳೇ ಸಿನೆಮಾದಲ್ಲಿ ತೋರಿಸುವ ಹಾಗೆ ಋಷಿಮುನಿಗಳು ತಪಸ್ಸು ಮಾಡುವಂತೆ ಗುಹೆಯು ಕಲ್ಲುಬಂಡೆಗಳಿಂದ ತುಂಬಿದ ಪರ್ವತ. ಅದೊಂದು ಅದ್ಭುತ ದೃಶ್ಯಾವಳಿ. ಬಣ್ಣಿಸುವುದಕ್ಕಿಂತ ಒಮ್ಮೆ ಆ ಸ್ಥಳಕ್ಕೆ ಭೇಟಿ ನೀಡಿದಾಗ ಮಾತ್ರ ಅದರ ಬಗ್ಗೆ ಗೊತ್ತಾಗುವುದು.
ನಾವೆಲ್ಲರೂ ನಮ್ಮ ಸ್ನೇಹಿತರ ಮತ್ತು ಪ್ರೀತಿ ಪಾತ್ರದಾರರ ಹೆಸರುಗಳನ್ನು ಕೂಗಿ ಅದರ ಪ್ರತಿಧ್ವನಿ ಕೇಳುವುದೇ ಒಂದು ಸುಂದರ ಅನುಭವ. ಕರಿ ಕಲ್ಲಿನಿಂದ ಕೂಡಿದ ಶಿಖರವು ನೋಡುವಾಗ ಭಯ. ವಿಶಾಲವಾದ ದಾರಿ ಇಲ್ಲದಿದ್ದರೂ ಓಡಾಡಲು ತೊಂದರೆಯೇನಿಲ್ಲ. ಅಲ್ಲೇ ನಿಂತು ಕೂತು ಕೂಗಾಡಿ ಹೊರಡಲು ತಯಾರಾದೆವು.
ನನ್ನ ಸ್ನೇಹಿತೆ ಕಂಬಿ ಹಿಡಿದು ಇಳಿಯುವಾಗ ಖುಷಿಯಲ್ಲಿ ಕಂಬಿ ಬಿಟ್ಟು ಕಾಲು ಜಾರಿ ಮೆಟ್ಟಿಲು ಇಳಿಯದೇ ಸರ್ರನೆ ಜಾರಿ ಕೆಳಗೆ ಬಿದ್ದು ನಾನು ಇಳಿದಿರೋ ಸ್ಟೈಲ್ ನೋಡಿ ನೀವು ಕಲಿಯಿರಿ ಎಂದು ಹೇಳುತ್ತಾ ನಗುತ್ತಿದ್ದಳು. ಬಿದ್ದವಳನ್ನು ಮೂರು ಜನ ಸೇರಿಕೊಂಡು ಎತ್ತಿಕೊಂಡು ಕಾರಿನತ್ತ ಹೊರಟೆವು.
ಹೊರಡಲು ಮನಸ್ಸಿಲ್ಲದಿದ್ದರೂ ಒಲ್ಲದ ಮನಸ್ಸಿನಿಂದ ಬಂದೆವು. ದಾರಿಯ ಮಧ್ಯೆ ಯಾಣದ ಅನುಭವ ನೆನಪು ಮಾಡಿಕೊಳ್ಳುತ್ತಾ, ಕೂಗಾಡುತ್ತಾ, ಚೀರಾಡುತ್ತಾ ಮತ್ತೆ ಹಾಸ್ಟೆಲ್‌ಗೆ ಬಂದಿದ್ದೇ ತಿಳಿಯಲಿಲ್ಲ.
ಅಕ್ಷತಾ ನಂದಿಕೇಶ್ವರಮಠ
ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು