ಹೊಸದಿಲ್ಲಿ: ಕೋವಿಡ್-19 ಸೋಂಕು ಕಾರಣದಿಂದ ಸರ್ಕಾರ ಲಾಕ್ ಡೌನ್ ಹೇರಿದ ನಂತರ ಜನರು ಬಹಳಷ್ಟು ಸಮಸ್ಯ ಎದುರಿಸಿದರು. ವ್ಯಾಪಾರಸ್ಥರು ನಷ್ಟ ಅನುಭವಿಸಿದರು. ಆದರೆ ಬಹಳಷ್ಟು ಲಾಭ ಆಗಿದ್ದು, ಪರಿಸರಕ್ಕೆ.
ಹೌದು ಲಾಕ್ ಡೌನ್ ಸಮಯದಲ್ಲಿ ಕೈಗಾರಿಕೆಗಳು ಮುಚ್ಚಿದ್ದು, ರಸ್ತೆಯಲ್ಲಿ ವಾಹನಗಳ ಓಡಾಟ ಇರದ ಕಾರಣ ಪರಿಸರ ಮಾಲಿನ್ಯ ಕಡಿಮೆಯಾಗಿತ್ತು. ದಿಲ್ಲಿಯ ಯುಮನಾ ನದಿಯು ಯಾವುದೇ ಮಾಲಿನ್ಯವಿಲ್ಲದೆ ಶುದ್ಧವಾಗಿ ಹರಿಯುತ್ತಿತ್ತು. ಆದರೆ ಈಗ ಲಾಕ್ ಡೌನ್ ತೆರವಾದ ನಂತರ ಮತ್ತೆ ಯಮುನೆ ಮಾಲಿನ್ಯವಾಗಿದೆ.
ಇಂಡಿಯಾ ಟುಡೆ ವಾಹಿನಿ ಸ್ಥಳಕ್ಕೆ ತೆರಳಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ವಾಜೀರವಾದ್ ಬ್ಯಾರೇಜ್ ನಿಂದ ಓಕ್ಲಾ ಬ್ಯಾರೇಜ್ ವರೆಗೆ ಯಮುನಾ ನದಿಯು ದಿಲ್ಲಿಯಲ್ಲಿ 22 ಕಿ.ಮೀ ಹರಿಯುತ್ತದೆ. ಈ ನಡುವೆ ಯಮುನಾ ನದಿಗೆ 22 ಚರಂಡಿಗಳು ಬಂದು ಸೇರುತ್ತದೆ. ಇದರಿಂದ ಶೇ.80 ರಷ್ಟು ಯಮುನೆ ಮಲಿನಗೊಳ್ಳುತ್ತದೆ.
ಈ ಬಗ್ಗೆ ಮಾತನಾಡಿರುವ ದಿಲ್ಲಿ ಪರಿಸರ ಖಾತೆ ಸಚಿವ ಗೋಪಾಲ್ ರೈ, ಯಮುನಾ ನದಿ ದಿಲ್ಲಿಯಲ್ಲಿ ಉಗಮವಾಗುವುದಲ್ಲ. ದಿಲ್ಲಿಗಿಂತಲೂ ಮೊದಲೇ ಹರಿದುಬರುತ್ತದೆ. ಅಲ್ಲಿಂದಲೇ ಹಾನಿಕಾರಕ ರಾಸಾಯನಿಕ ತ್ಯಾಜ್ಯಗಳು ಬಂದು ಸೇರುತ್ತದೆ ಎನ್ನುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಎಲ್ಲವೂ ಬಂದ್ ಆಗಿದ್ದ ಕಾರಣ ಯಮುನೆಯನ್ನು ಕ್ಲೀನ್ ಮಾಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ.
ಯಮುನಾ ನದಿಯನ್ನು ತ್ಯಾಜ್ಯಮುಕ್ತ ಮಾಡಲು ದೀರ್ಘಕಾಲೀನ ಯೋಜನೆಯೊಂದನ್ನು ರೂಪಿಸಿದ್ದೇವೆ. ಆದರೆ ಕೋವಿಡ್ ಕಾರಣದಿಂದ ಇದು ಆರು ತಿಂಗಳಷ್ಟು ಹಿಂದೆ ಉಳಿಯಿತು ಎನ್ನುತ್ತಾರೆ ದಿಲ್ಲಿ ಜಲ ಮಂಡಳಿ ಅಧ್ಯಕ್ಷ ಸತ್ಯೇಂದರ್ ಜೈನ್.