ಮುಂಬಯಿ: ಯಾಮಿ ಗೌತಮ್ ಅಭಿನಯದ ʼಅರ್ಟಿಕಲ್ 370ʼ ಸಿನಿಮಾಕ್ಕೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಕೇಳಿ ಬರುತ್ತಿದೆ. ವಾರಾಂತ್ಯದಲ್ಲಿ ಸಿನಿಮಾ ನೋಡುಗರ ಸಂಖ್ಯೆ ಹೆಚ್ಚಾಗಿದೆ.
ಬಾಕ್ಸ್ ಆಫೀಸ್ ನಲ್ಲಿ ಇದುವರೆಗೆ 22.80 ಕೋಟಿ ರೂ. ಗಳಿಸಿದ್ದು, ಆ ಮೂಲಕ ಕಲೆಕ್ಷನ್ ವಿಚಾರದಲ್ಲೂ ಮುನ್ನುಗ್ಗುತ್ತಿದೆ. ಥಿಯೇಟರ್ ನಲ್ಲಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಸಿನಿಮಾಕ್ಕೆ ಬ್ಯಾನ್ ಬಿಸಿ ತಟ್ಟಿದೆ.
ʼಅರ್ಟಿಕಲ್ 370ʼ ಸಿನಿಮಾವನ್ನು ಗಲ್ಫ್ ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿದೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಕತಾರ್, ಓಮನ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಆದರೆ ಸಿನಿಮಾ ನಿಷೇಧಕ್ಕೆ ಸೂಕ್ತ ಕಾರಣ ಇದುವರೆಗೆ ತಿಳಿದು ಬಂದಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಕುರಿತು ಸಿನಿಮಾದಲ್ಲಿ ಹೇಳಲಾಗಿದೆ.ಇಂಟಲಿಜೆನ್ಸ್ ಆಫೀಸರ್ ಆಗಿ ಈ ಸಿನಿಮಾದಲ್ಲಿ ಯಾಮಿ ನಟಿಸಿದ್ದಾರೆ. ಆರ್ಟಿಕಲ್ 370 ರದ್ದತಿಯ ಬಗ್ಗೆಯೂ ಸಿನಿಮಾದಲ್ಲಿ ಹೇಳಲಾಗಿದೆ.
ಆದಿತ್ಯ ಸುಹಾಸ್ ಜಂಬಾಳೆ ನಿರ್ದೇಶನದ ಈ ಸಿನಿಮಾದಲ್ಲಿ ಯಾಮಿ ಗೌತಮ್, ಪ್ರಿಯಾಮಣಿ ಸೇರಿದಂತೆ ಅರುಣ್ ಗೋವಿಲ್, ಕಿರಣ್ ಕರ್ಮಾಕರ್, ರಾಜ್ ಅರ್ಜುನ್, ಅಶ್ವಿನಿ ಕೌಲ್ ಮತ್ತು ಸಂದೀಪ್ ಚಟರ್ಜಿ ಮುಂತಾದವರು ನಟಿಸಿದ್ದಾರೆ.
ಇತ್ತೀಚೆಗೆ ಹೃತಿಕ್ ರೋಷನ್ ಅವರ ʼಪೈಟರ್ʼ ಸಿನಿಮಾವನ್ನು ಕೂಡ ಯುಎಇ ಹೊರತುಪಡಿಸಿ ಇತರೆ ಗಲ್ಫ್ ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿತ್ತು.