ಮಳವಳ್ಳಿ: ಕಳೆದ ಐದು ವರ್ಷಗಳಿಂದ ಮಕ್ಕಳ ಕೊರತೆಯಿಂದ ಮುಚ್ಚಿದ ತಾಲೂಕಿನ ಯಮದೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ಇದೀಗ ಮತ್ತೆ ಚಾಲನೆ ದೊರಕಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯನವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ, ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಪೋಷಕರ ಮನವೊಲಿಸಿ 9 ಮಕ್ಕಳನ್ನು ದಾಖಲು ಮಾಡಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಶಾಲೆ ಆರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಪ್ರತಿಯೊಂದು ಗ್ರಾಮದಲ್ಲಿ ದೇವಸ್ಥಾನ ಎಷ್ಟು ಮುಖ್ಯವೋ ಅದೇ ರೀತಿ ಸರ್ಕಾರಿ ಪ್ರಾಥಮಿಕ ಶಾಲೆಯೂ ಅತ್ಯವಶ್ಯವಾಗಿದೆ. ಸರ್ಕಾರಿ ಶಾಲೆ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಬೇಕೆಂದು ಮನವಿ ಮಾಡಿದರು.
ಪೋಷಕರ ಮನವೊಲಿಕೆ: ಪ್ರತಿಯೊಬ್ಬರು ಶಿಕ್ಷಣ ಸಿಗಬೇಕಂಬ ಸಂಕಲ್ಪದೊಂದಿಗೆ ಪ್ರತಿಯೊಂದು ಗ್ರಾಮದಲ್ಲಿಯೂ ಸರ್ಕಾರಿ ಶಾಲೆಗಳನ್ನು ತೆರೆಯಲಾಗಿದೆ. ಖಾಸಗಿ ಶಾಲೆಗಳ ವ್ಯಾಮೋಹದಿಂದ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಎದುರಾಗಿದೆ. ಇದರಿಂದ ಅನೇಕ ಶಾಲೆಗಳು ಬಾಗಿಲು ಮುಚ್ಚಿದ್ದವು. ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಯಮದೂರು ಗ್ರಾಮದ ಪೋಷಕರ ಮನವೊಲಿಸಿ 9 ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಶಾಲೆಯನ್ನು ಪುನಾರಂಭಿಸಲಾಗಿದೆ ಎಂದು ತಿಳಿಸಿದರು.
ಜೆ.ಸಿ.ಪುರ ಸರ್ಕಾರಿ ಶಾಲೆ: ಕೆಲ ದಿನಗಳ ಹಿಂದೆ ಜೆ.ಸಿ.ಪುರ ಸರ್ಕಾರಿ ಶಾಲೆಯನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಸಹಕಾರ ನೀಡಿದರೆ ಮುಚ್ಚಿರುವ ಶಾಲೆಗಳನ್ನು ತೆರೆಯಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ನುರಿತ ಶಿಕ್ಷಕರು, ಬಿಸಿಯೂಟ, ಸೇರಿದಂತೆ ಆಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ವಿದ್ಯಾವಂತ ರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿ ಪ್ರಶಾಂತ್‌ಬಾಬು, ಆನಂದ್‌ರಾಜ್, ಶಿವಣ್ಣ, ಬಸವರಾಜು, ಜಿಸಿಒ ಸಿದ್ದರಾಜು, ಮಹಾಲಿಂಗಯ್ಯ, ಸಿಆರ್‌ಪಿ ಪಾಪಣ್ಣ, ಮುಖ್ಯ ಶಿಕ್ಷಕ ನಾಗೇಂದ್ರ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.