Advertisement

ಕುಸ್ತಿ ಕೇಂದ್ರವಾಗಿ ಬೆಳೆಯುತ್ತಿದೆ ಯಲ್ಲಟ್ಟಿ

09:53 AM Nov 24, 2019 | Lakshmi GovindaRaj |

ಕುಸ್ತಿ ಇಡೀ ಭಾರತದಲ್ಲೇ ಬಹಳ ಮಹತ್ವ ಪಡೆದುಕೊಂಡಿರುವ ಗ್ರಾಮೀಣ ಕ್ರೀಡೆಗಳಲ್ಲೊಂದು. ಕ್ರಿಕೆಟ್‌ನ ಜನಪ್ರಿಯತೆಯಿಂದ ಈ ಕ್ರೀಡೆ ಕಣ್ಮರೆಯಾಗುವ ಹಂತಕ್ಕೆ ಬಂದಿದ್ದರೂ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಕುಸ್ತಿಪಟುಗಳು ಮಿಂಚುತ್ತಿರುವ ಕಾರಣ, ಕುಸ್ತಿ ಮತ್ತೆ ಜನಪ್ರಿಯವಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ದಕ್ಷಿಣಭಾಗದಲ್ಲಿರುವ ಮೈಸೂರಿನಲ್ಲಿ ಕುಸ್ತಿ ಬಹಳ ಜನಪ್ರಿಯ. ಆದರೆ ಉತ್ತರ ಕರ್ನಾಟಕದ ಸ್ಥಿತಿ ಬಹಳ ಭಿನ್ನ. ಇಡೀ ಉತ್ತರಭಾಗದಲ್ಲಿ ಕುಸ್ತಿಗೆ ಬಹಳ ಆದ್ಯತೆ.

Advertisement

ಅಲ್ಲಿನ ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವವನ್ನು ನೀಡುತ್ತ ಬಂದಿದ್ದಾರೆ. ಯಾವುದೇ ಜಾತ್ರೆ, ಉತ್ಸವ, ಹಬ್ಬಗಳಿರಲಿ ಅಲ್ಲಿ ಕಡ್ಡಾಯವಾಗಿ ಕುಸ್ತಿ ಇರಲೇಬೇಕು. ಕುಸ್ತಿ ಇಲ್ಲಿಯ ಜನರಿಗೆ ಮನಃರಂಜನೆಯ ಒಂದುಭಾಗ. ಆದರೆ ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಪ್ರತಿಭಾಪ್ರದರ್ಶನಕ್ಕೆ ಒಂದು ಅವಕಾಶ. ಆದ್ದರಿಂದಲೇ ಉತ್ತರಕರ್ನಾಟಕದಲ್ಲಿ ಅತಿಹೆಚ್ಚು ಪೈಲ್ವಾನರು ತಯಾರಾಗುತ್ತಾರೆ. ರಾಷ್ಟ್ರಮಟ್ಟದಲ್ಲೂ ಮಿಂಚುತ್ತಾರೆ. ಹಾಗೆ ಕುಸ್ತಿ ಬಹಳ ಪ್ರಾಮುಖ್ಯತೆ ಪಡೆದಿರುವ ಒಂದು ಜಾಗ ಬಾಗಲಕೋಟೆ ಜಿಲ್ಲೆಯ, ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮ.

ಕುಸ್ತಿಕೇಂದ್ರ: ರಬಕವಿ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ನಾವು ಗರಡಿ ಮನೆಗಳನ್ನು ಕಾಣಬಹುದಾಗಿದೆ. ಅಲ್ಲಿ ಬೆಳಗ್ಗೆ ಮತ್ತು ಸಂಜೆ ಹಿರಿಯ ಪೈಲ್ವಾನರ ಮಾರ್ಗದರ್ಶನದಲ್ಲಿ ಕಿರಿಯರು ತಾಲೀಮು ನಡೆಸುತ್ತಾರೆ. ಯಲ್ಲಟ್ಟಿಯ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನ ಸಮಿತಿಯವರೇ ಒಂದು ಗರಡಿಮನೆ ನಿರ್ಮಿಸಿದ್ದಾರೆ. ಅಲ್ಲಿ ಸದ್ಯ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಸ್ತಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಒಂದುರೀತಿಯಲ್ಲಿ ಈ ಗರಡಿಮನೆ, ಕುಸ್ತಿಕೇಂದ್ರವಾಗಿ ಬೆಳೆಯುತ್ತಿದೆ. ಇದೇ ವರ್ಷ ಇಲ್ಲಿ ತರಬೇತಿ ಪಡೆದುಕೊಂಡ ಯಲ್ಲಟ್ಟಿ ಗ್ರಾಮದವರೇ ಆದ ಐದು ಪೈಲ್ವಾನರು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಇತ್ತೀಚೆಗೆ ದಾವಣಗೆರೆಯಲ್ಲಿ ಮುಕ್ತಾಯಗೊಂಡ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ವಿವಿಧ ಕುಸ್ತಿ ಪಂದ್ಯಾವಳಿಯಲ್ಲಿ ಯಲ್ಲಟ್ಟಿಯ ಯುವ ಪೈಲ್ವಾನರು ಜಯಶಾಲಿಗಳಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಲಿಂಗರಾಜ ರಾಜಮಾನೆ 45 ಕೆ.ಜಿ. ಬೆಲ್ಟ್ ಕುಸ್ತಿ ಪಂದ್ಯದಲ್ಲಿ ಪ್ರಥಮ,

ಬಸವರಾಜ ಸಂತಿ 60 ಕೆ.ಜಿ. ವಿಭಾಗದಲ್ಲಿ ಪ್ರಥಮ, ಸಾಗರ ತಳವಾರ 55 ಕೆ.ಜಿ. ಬೆಲ್ಟ್ ಕುಸ್ತಿಯಲ್ಲಿ ಪ್ರಥಮ, ಕಾಡಪ್ಪ ಪಾಟೀಲ 65 ಕೆ.ಜಿ. ಕುಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದೇ ಗ್ರಾಮದ ಮಹೇಶ ಭುಜಂಗ 61 ಕೆ.ಜಿ. ಕುಸ್ತಿಯಲ್ಲಿ ಕಲಬುರಗಿ ವಿಶ್ವವಿದ್ಯಾಲಯದ ‘ಬ್ಲೂ’ ಆಗಿ ಆಯ್ಕೆಯಾಗಿದ್ದು, ಈಗ ಇವರು ಕೂಡಾ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಇವರೆಲ್ಲ ಯಲ್ಲಟ್ಟಿಯವರೇ ಆದರೂ, ಬೇರೆ ಬೇರೆ ಊರು, ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

Advertisement

ಬೇರೆ ಕಡೆಯೂ ಪ್ರಶಸ್ತಿ: ಬಸವರಾಜ ಸಂತಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಮಹೇಶ ಭುಜಂಗ ಜಮಖಂಡಿ­ಯಲ್ಲಿ ರಾಜ್ಯೋತ್ಸವದ ನಿಮಿತ್ತವಾಗಿ ನಡೆದಿದ್ದ ಕುಸ್ತಿಯಲ್ಲಿ ಪ್ರಥಮ, ಹಳಿಯಾಳ, ಮುಧೋಳದಲ್ಲಿ ನಡೆದ ಕುಸ್ತಿ ಪಂದ್ಯಾವಳಿ­ಯಲ್ಲಿಯೂ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಸಾಗರ ತಳವಾರ ಕುಂಬಾರಹಳ್ಳದಲ್ಲಿ ದ್ವಿತೀಯ, ಜಮಖಂಡಿಯಲ್ಲಿ ದ್ವಿತೀಯ ಹಾಗೂ ಮುಧೋಳದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನಿಯಾಗಿದ್ದಾರೆ.

ಬೇರೆ ಬೇರೆ ಜಾಗದಿಂದ ತರಬೇತಿಗಾಗಿ ಆಗಮನ: ಯಲ್ಲಟ್ಟಿಯ ಅಖಾಡಕ್ಕೆ ಬನಹಟ್ಟಿ, ಜಗದಾಳ, ಆಸಂಗಿ ಮತ್ತು ಅಸ್ಕಿ ಗ್ರಾಮದ ಬಾಲಕರು ತರಬೇತಿಗಾಗಿ ಬರುತ್ತಾರೆ. ಇವರೆಲ್ಲರಿಗೂ ಇಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಎಲ್ಲರಿಗೂ ಮ್ಯಾಟ್‌ ಮೇಲೆಯೇ ತರಬೇತಿ ನೀಡಲಾಗುತ್ತದೆ. ಇನ್ನು ಇಲ್ಲಿಯ ತರಬೇತುದಾರ ಸದಾಶಿವ ಗುಂಡಿ ರಾಷ್ಟ್ರಮಟ್ಟದ ಕುಸ್ತಿಪಟು. ಅವರು ಕೂಡಾ ಯಾವುದೇ ಸಂಭಾವನೆ ಇಲ್ಲದೆ ಬೆಳಗ್ಗೆ 5ರಿಂದ 7 ಮತ್ತು ಸಂಜೆ 4ರಿಂದ 7ವರೆಗೆ ತರಬೇತಿಯನ್ನು ನೀಡುತ್ತ ಬಂದಿದ್ದಾರೆ. ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಕುಸ್ತಿ ಮೈದಾನವನ್ನು ನಿರ್ಮಿಸಿ ಮಣ್ಣಿನ ಅಂಗಳದ ಮೇಲೆಯೂ ಕೂಡಾ ತರಬೇತಿಯನ್ನು ನೀಡಲಾಗುತ್ತದೆ ಎನ್ನುತ್ತಾರೆ ತರಬೇತುದಾರ ಸದಾಶಿವ ಗುಂಡಿ.

* ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next