ಯಲ್ಲಾಪುರ: ಇದೇನು ಪಾಳುಬಿದ್ದ ಕಟ್ಟಡವೇ? ಕಟ್ಟಡಕ್ಕೆ ಯಾರೂ ದಾತಾರರು ಇಲ್ಲವೇ? ಎಂದು ಕೇಳಬೇಡಿ. ಇದು ತಾಲೂಕು ಕೇಂದ್ರದಲ್ಲಿರುವ ಮೂರ್‍ನಾಲ್ಕು ಕಚೇರಿಗಳಿರುವ (ಸಂಕೀರ್ಣ) ಸರಕಾರಿ ಕಟ್ಟಡ. ಕಟ್ಟಡ ಶಿಥಿಲಗೊಳ್ಳುತ್ತಿರಬಹುದು. ಆಗಾಗ ದುರಸ್ತಿಯೂ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಈ ಕಟ್ಟಡದೊಳಗೆ ಕಚೇರಿಗಳೇನಾದರೂ ಇದೆಯೆಂದು ಗೊತ್ತಾಗುವುದು ಒಳಹೊಕ್ಕ ಮೇಲೆಯೇ. ಕೆಲ ಇಲಾಖೆ ಕಚೇರಿಯೊಳಗೆ ಹೋಗಬೇಕೆಂದರೆ ಯಾವ ಇಲಾಖೆಯದಿರಬಹುದು ಎಂಬುದಾದರೂ ತಿಳಿಯುತ್ತದೆ. ಇಲ್ಲಿ ಬಂದರೆ ಕಟ್ಟಡ ಪ್ರವೇಶಿಸುತ್ತಲೇ ಗಿಡಗಂಟಿಗಳು, ಬಳ್ಳಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ತುಕ್ಕು ಹಿಡಿದ ನಾಮಫಲಕಗಳು, ಒಂದು ರೀತಿಯಲ್ಲಿ ಪಾಳು ಬಿದ್ದ ಕಟ್ಟಡ ಒಳ ಹೊಕ್ಕಂತಾಗುತ್ತದೆ. ಒಳ ಹೋದಾಗಲೇ ಕಚೇರಿಗಳಿವೆ ಎಂಬುದು ಅರಿವಿಗೆ ಬರುತ್ತದೆ. ಇದೇನು ಸಣ್ಣ ಕಟ್ಟಡವಲ್ಲ. ಈ ಹಿಂದೆ ಕಂದಾಯ ಸೇರಿದಂತೆ ಹಲವು ಇಲಾಖೆಗಳಿದ್ದ ಕಟ್ಟಡ.
ಈಗ ಇಲ್ಲಿ ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರಾಗೃಹ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಗಳಿವೆ. ಇಲ್ಲಿ ಹೆಚ್ಚಿನದಾಗಿ ಶಿಶು ಅಭಿವೃದ್ಧಿ ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿ ಅಂಗನವಾಡಿ ಸಹಾಯಕಿಯರು, ಇನ್ನು ಸಣ್ಣಪುಟ್ಟ ಸರಕಾರದ ಸವಲತ್ತಿಗೆ ಅರ್ಜಿ ಹಿಡಿದು ಹೋಗುವವರೇ ಜಾಸ್ತಿಯಾದ್ದರಿಂದ ಉಳಿದವರಿಗೆ ತಾಲೂಕು ಕೇಂದ್ರದಲ್ಲಿ ಇಂತಹದೊಂದು ದುಸ್ಥಿತಿಯಲ್ಲಿ ಈ ಇಲಾಖೆ ಕಚೇರಿಗಳಿವೆ ಎಂಬುದೇ ಗೊತ್ತಿಲ್ಲ. ಮೇಲೆ ನೋಡಿದರೆ ಹೆಂಚುಗಳು ಉದುರಿವೆ. ಕೆಲವೊಂದು ಬೀಳುವ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಸೋರುತ್ತದೆ. ಉಳಿದ ಸಮಯದಲ್ಲಿ ಮಂಗಗಳು ಈ ಹೆಂಚಿನಿಂದ ಒಳಹೊಕ್ಕಿ ವಾಸಮಾಡುತ್ತದೆ. ಹಗಲಿನಲ್ಲಿ ಕಚೇರಿ ನೌಕರ ಸಿಬ್ಬಂದಿಗೆ ಮಂಗಗಳನ್ನು ಓಡಿಸುವ ಕಾಯಕವೂ ಇಲ್ಲಿ ತಪ್ಪಿದ್ದಲ್ಲ.
ಪಕಾಸುಗಳಿಗೆ ಗೆದ್ದಿಲು ಹತ್ತಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಕಟ್ಟಡದ ದುರಸ್ತಿಯೂ ಕಳೆದ ವರ್ಷವಾಗಿದೆ ಎನ್ನಲಾಗುತ್ತಿದೆ. ಎಲ್ಲಿ ನೋಡಿದಡಲ್ಲಿ ಕಚೇರಿ ಮೇಲ್ಛಾವಣಿಗೆ ತಗಡುಗಳು ಜೋತಾಡುತ್ತವೆ. ಮಳೆಗಾಲದಲ್ಲಿ ಸೋರದ ಸ್ಥಳಗಳಿರಲಿಕ್ಕಿಲ್ಲ. ನೌಕರರು ತಮ್ಮ ಕೆಲಸದ ಖುರ್ಚಿ ಟೇಬಲ್‌ಗಳನ್ನು ಮಳೆಗಾಲದಲ್ಲಿ ಹಿಡಿದುಕೊಂಡೇ ಓಡಾಡಬೇಕಾಗುತ್ತದೆ. ಕಟ್ಟಡದ ಮೇಲ್ಛಾವಣಿ ಗೆದ್ದಿಲುಗಳ ವಾಸಸ್ಥಾನವಾಗಿದೆ. ಈ ಸಂಗತಿಗಳ ಭಾಗ ಒಂದುಕಡೆಯಾದರೆ ಇಷ್ಟೆಲ್ಲ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ ಇದ್ದರೂ ಆವರಣದಲ್ಲಿ ಸ್ವತ್ಛತೆ ಮಾತ್ರ ಇಲ್ಲ. ಕಚೇರಿಗಳ ಅಧಿಕಾರಿಗಳ ಅಸಹಾಯಕತೆಯೋ ಆಲಸ್ಯವೋ ಗೊತ್ತಿಲ್ಲ. ಈ ತರಹ ಸ್ವಲ್ಪವೂ ಸ್ವತ್ಛತೆ ಬಗ್ಗೆ ಗಮನ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಸಿಡಿಪಿಒ ಕಚೇರಿಯಲ್ಲಿ ಮಹಿಳ ಸಿಬ್ಬಂದಿಗಳೆ ಜಾಸ್ತಿಯಾದರು ಇನ್ನೂ ಮೂರ್‍ನಾಲ್ಕು ಕಚೇರಿಗಳಿವೆ. ಅವೆಲ್ಲವೂ ತಮಗೇನೂ ಸಂಬಂಧಿಸಿದ್ದಲ್ಲ ಎಂಬ ರೀತಿಯಲ್ಲಿದ್ದಿರುವುದು ಪ್ರತ್ಯಕ್ಷ ಗೋಚರಿಸುತ್ತದೆ. ತುಕ್ಕು ಹಿಡಿದ ಶಿಶು ಅಭಿವೃದ್ಧಿ ಮಕ್ಕಳ ಕಲ್ಯಾಣ ಇಲಾಖೆ ನಾಮಫಲಕ ನೋಡಿದರೆ ಇಲಾಖೆ ಇಲ್ಲಿಲ್ಲವೇನೋ ಅನಿಸುತ್ತದೆ. ಒಳಪ್ರವೇಶಿಸಿದಾಗ ಅಧಿಕಾರಿಗಳು ತಾವಿದ್ದೇವೆ ಬನ್ನಿ ಎಂದು ನಮ್ಮನ್ನು ಸ್ವಾಗತಿಸಿದಾಗಲೇ ಕಚೇರಿ ಇಲ್ಲಿಯೇ ಇದೆ ಅಂತ ಅರಿವಾಗುತ್ತದೆ. ಇಲ್ಲಿಗೆ ಹೆಚ್ಚಿನದಾಗಿ ಅಂಗವಿಕಲರು, ಅಶಕ್ತರು ಬರುತ್ತಾರೆ.
ರ್‍ಯಾಂಪ್ಸ್ ಇದೆಯಾದರೂ ಇದನ್ನು ದುರ್ಬಿನೂ ಹಿಡಿದು ಹುಡುಕಬೇಕು. ಗಿಡಕಂಟಿಗಳು ತಬ್ಬಿಕೊಂಡಿದ್ದು ಒಂದೆಡೆಯಾದರೆ ತ್ಯಾಜ್ಯಗಳ ರಾಶಿ ಇದರ ಮೇಲೆ ಬಿದ್ದಿದೆ.ಪ್ರವೇಶ ದ್ವಾರದ ಬಳಿಯೇ ತಿಪ್ಪೆಗುಂಡಿಯಂತಾದ ಕಸದ ರಾಶಿ ರಾಶಿ ಬಿದ್ದಿದೆ. ಇಂತಹ ಇಲಾಖೆಗಳು ತಮ್ಮ ಕಾರ್ಯವನ್ನು ಎಷ್ಟರಮಟ್ಟಿಗೆ ನಿರ್ವಹಿಸಿವೆ ಎಂಬುದನ್ನು ಈ ಸಂಕೀರ್ಣದೊಳಗೆ ಹೊಕ್ಕವರಿಗೆ ಮಾತ್ರ ಅರಿವಾಗುತ್ತದೆ. ಮುಂದೆ ಸ್ವಂತ ಕಟ್ಟಡಕ್ಕೋ ಇನ್ನಾವುದೋ ಬಾಡಿಗೆ ಅಥವಾ ಬೇರೆ ಕಟ್ಟಡಕ್ಕೋ ಇಲ್ಲಿನ ಇಲಾಖೆಗಳು ಹೋಗಬಹುದಾದರೂ ಈಗ ಇಲ್ಲಿನ ಸ್ಥಿತಿಗತಿ ಇಲಾಖೆಯ ಕರ್ತವ್ಯದ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ. ಮುಂದಾದರು ಸಚಿವರು ತಹಶೀಲ್ದಾರರಂತಹ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬಹುದೇ ಎಂದು ಕಾದು ನೋಡಬೇಕು.
ನರಸಿಂಹ ಸಾತೊಡ್ಡಿ