Advertisement

ಡಿ.5ಕ್ಕೆ ಯಲ್ಲಾಪುರ ಉಪಚುನಾವಣೆ

01:35 PM Nov 12, 2019 | Suhan S |

ಕಾರವಾರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಡಿ.5 ರಂದು ಮತದಾನ ನಡೆಯಲ್ಲಿದ್ದು, ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ಹರೀಶ್‌ಕುಮಾರ್‌ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಭಾರತ ಚುನಾವಣಾ ಆಯೋಗ ಘೋಷಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನ.18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದರು. ನ.19ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನ.21 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಡಿ.9 ರಂದು ಮತ ಎಣಿಕೆ ನಡೆಯಲಿದೆ. ಡಿ.11 ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲೂಕುಗಳು ಬರಲಿದ್ದು ಒಟ್ಟು 231 ಮತಗಟ್ಟೆಗಳು ಕ್ಷೇತ್ರದಲ್ಲಿವೆ. ಮತದಾರರ ಅಂತಿಮ ಪಟ್ಟಿ ಹಾಗೂ 4-4-2019ರ ಉಪ ಅಂತಿಮ ಪಟ್ಟಿ ಪ್ರಕಟಣೆಯಂತೆ ಯಲ್ಲಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 87,899 ಪುರುಷ, 84,647 ಮಹಿಳಾ ಮತದಾರರಿದ್ದಾರೆ. ಒಟ್ಟು 1,72,547 ಮತದಾರರಿದ್ದು, ಎಲ್ಲ ಮತದಾರರ ಭಾವಚಿತ್ರವುಳ್ಳ ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ ಹಾಗೂ ಶೇ.100 ರಷ್ಟು ಮತದಾರರ ಚೀಟಿ ವಿತರಿಸಲಾಗಿದೆ. ಅಲ್ಲದೆ ಮತದಾನಕ್ಕೆ ಚುನಾವಣಾ ಆಯೋಗ ನಿಗದಿಪಡಿಸಿದ ಪರ್ಯಾಯ ದಾಖಲೆಗಳನ್ನು ಪುರಸ್ಕರಿಸಲಾಗುವುದು ಎಂದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗವನ್ನು ಹೊಂದಿದೆ. ಕ್ಷೇತ್ರದಲ್ಲಿ 231 ಮತಗಟ್ಟೆಗಳಿಗೆ, ಗಾಳಿ ಬೆಳಿಕಿನ ವ್ಯವಸ್ಥೆ, ಕುಡಿಯುವ ನೀರು, ವಿಕಲಚೇತನ ಮತದಾರರ ಅನುಕೂಲಕ್ಕೆ ರ್‍ಯಾಂಪ್‌, ಶೌಚಾಲಯ ಸೇರಿದಂತೆ ಇತ್ಯಾದಿ ಕನಿಷ್ಠ ಮೂಲಸೌಲಭ್ಯ ಒದಗಿಸಲು ಕ್ರಮ ವಹಿಸಲಾಗಿದೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಯಲ್ಲಿರಲಿದ್ದು ಯಾವುದೇ ಚುನಾವಣೆ ಅಕ್ರಮಗಳು ನಡೆಯದಂತೆ ನಿಗಾವಹಿಸಲಾಗಿದೆ. ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದರು.

Advertisement

ಅಲ್ಲದೆ, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಚೆಕ್‌ಪೋಸ್ಟ್‌ಗಳ ಜಮಾವಣೆ, ಶಸ್ತ್ರಸಜ್ಜಿತ ಪೊಲೀಸ್‌ ಪಡೆ ನಿಯೋಜನೆ, ಚುನಾವಣಾಧಿಕಾರಿ ಕಚೇರಿ ಸುತ್ತ 200 ಮೀ. ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿ, ಮತದಾನದ ದಿನ ಹಾಗೂ ಮತ ಎಣಿಕೆ ದಿನದಂದು ಮದ್ಯ ಮಾರಾಟ ನಿಷೇಧ ಸೇರಿದಂತೆ ಮುಂತಾದ ಕ್ರಮ ಜರುಗಿಸಲಾಗಿದೆ. ಮತದಾರರ ಪಟ್ಟಿ ಪರಿಶೀಲನೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಜಿಲ್ಲೆಯ ಶೇ.98 ರಷ್ಟು ಮತದಾರರು ತಮ್ಮ ದಾಖಲೆಯೊಂದಿಗೆ ಪಟ್ಟಿ ಪರಿಶೀಲನೆ ಮಾಡಿದ ಬಗ್ಗೆ ಜಿಲ್ಲೆ ದಾಖಲೆ ಮಾಡಿ ಯಶಸ್ವಿಯಾಗಿದೆ. ಇದರಿಂದ ತಪ್ಪಿಲ್ಲದ ಮತದಾರರ ಪಟ್ಟಿ ಸಿದ್ಧವಾದಂತಾಗಿದೆ ಎಂದೂ ತಿಳಿಸಿದರು.

ಎಸ್ಪಿ ಶಿವಪ್ರಕಾಶ್‌ ದೇವರಾಜು ಮಾತನಾಡಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಜಿಲ್ಲಾದ್ಯಂತ 15 ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ಮತಕ್ಷೇತ್ರದ ಗಡಿ ಜಿಲ್ಲೆಗಳಾದ ಧಾರವಾಡ, ಹಾವೇರಿ, ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಗಟ್ಟಲು ಹಾಗೂ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಪೊಲೀಸ್‌ ಇಲಾಖೆ ಸನ್ನದ್ದವಾಗಿದೆ ಎಂದು ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ನಾಗರಾಜ್‌ ಸಿಂಗ್ರೇರ್‌, ಹೆಚ್ಚುವರಿ ಎಸ್ಪಿ ಡಾ| ಗೋಪಾಲ್‌ ಎಂ.ಬ್ಯಾಕೋಡ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next