ಯಲಬುರ್ಗಾ: ಕೋವಿಡ್ ಮಹಾಮಾರಿಯ ವಿರುದ್ಧ ದೇಶ ಮತ್ತು ರಾಜ್ಯಗಳ ಆಡಳಿತ ಯಂತ್ರಗಳು ಸರ್ವಸನ್ನದ್ಧವಾಗಿ ಕಾರ್ಯಾಚರಣೆ ನಡೆಸುತ್ತಿರುವ ಈ ವೇಳೆಯಲ್ಲಿ ಜನತೆ ತಮ್ಮ ಶಕ್ತ್ಯಾನುಸಾರ ದೇಣಿಗೆಗಳನ್ನು ನೀಡುವ ಮೂಲಕ ಕೋವಿಡ್ ಪರಿಹಾರ ನಿಧಿಗೆ ತಮ್ಮ ಕೈಲಾದ ಕೊಡುಗೆಯನ್ನೇ ನೀಡುತ್ತಿದ್ದಾರೆ.
ಇದಕ್ಕೊಂದು ನಿದರ್ಶನವೆಂಬಂತೆ ಯಲಬುರ್ಗಾ ತಾಲೂಕಿನ ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಒಂದು ತಿಂಗಳ ವೇತನವಾದ 21 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಯಲಬುರ್ಗಾ ತಾಲೂಕು ಮಟ್ಟದ ಅಧಿಕಾರಿಗಳು ಮುಖ್ಯಂತ್ರಿಗಳ ಪರಿಹಾರ ನಿಧಿಗೆ ತಮ್ಮ ವೇತನದ ಭಾಗವನ್ನು ದೇಣಿಗೆಯಾಗಿ ನೀಡುವ ಮೂಲಕ ರಾಜ್ಯಕ್ಕೇ ಮಾದರಿಯಾಗುತ್ತಿದ್ದಾರೆ.
ಕೋವಿಡ್ ವೈರಸ್ ನಿಯಂತ್ರಣಕ್ಕೆ ನಾವೆಲ್ಲರೂ ನಮ್ಮ ಕೈಲಾದ ಸಹಾಯವನ್ನು ಮಾಡಬೇಕಿದೆ. ರಾಜ್ಯ ಎದುರಿಸುತ್ತಿರುವ ವಿವಿಧ ರೀತಿಯ ತೊಂದರೆಗಳ ನಿವಾರಣೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಈ ದೇಣಿಗೆಯನ್ನು ನೀಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನೌಕರರೂ ಸ್ಪಂದಿಸಬೇಕು.
– ಅಂದಪ್ಪ ಕುರಿ, ಉಪ ವಲಯ ಅರಣ್ಯಾಧಿಕಾರಿ