ಯಳಂದೂರು: ಸರ್ಕಾರಿ ಶಾಲೆಯ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರವು ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ, ಬಾಳೆಹಣ್ಣು ಅಥವಾ ಚಿಕ್ಕಿಯನ್ನು ನೀಡಬೇಕೆಂದು ಆದೇಶ ನೀಡಿ ಹಲವು ದಿನಗಳು ಕಳೆದರೂ ಯಳಂದೂರು ತಾಲೂಕಿನಲ್ಲಿ ಮಾತ್ರ ಈ ಯೋಜನೆಯು ಇನ್ನೂ ಜಾರಿಯಾಗದೆ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಿದ್ದಾರೆ.!
ಯಳಂದೂರು ತಾಲೂಕಿನಲ್ಲಿ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಅನುದಾನಿತ ಸೇರಿದಂತೆ 73 ಶಾಲೆಗಳಲ್ಲಿನ ಒಟ್ಟು 5970 ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡುತ್ತಿದ್ದಾರೆ. ಈ ಯೋಜನೆಯನ್ನು ಸರ್ಕಾರವು ಜು.21 ರಿಂದಲೇ 6 ರಿಂದ 15ನೇ ವಯೋಮಾನದವರೆಗಿನ ವಿದ್ಯಾರ್ಥಿಗಳಿಗೆ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಪೋಷಕಾಂಶಗಳ ನ್ಯೂನತೆರುವುದರಿಂದ ರಾಷ್ಟೀಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮೀಕ್ಷೆಯ ವರದಿ (ಎನ್‌ಎಫ್ ಎಚ್‌ಎಸ್) 2019-20ರ ಅಧ್ಯಯನದಲ್ಲಿ ಕಂಡುಬಂದಿದ್ದು, ಇದರ ನಿವಾರಣೆಗಾಗಿ ಬಿಸಿಯೂಟದ ಜತೆಗೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಬೇಕೆಂದು ಆದೇಶ ನೀಡಿದ್ದಾರೆ, ಆದರೆ ಈ ಯೋಜನೆ ಜಾರಿಯಾಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಯೋಜನೆ ಜಾರಿಯಾಗಿಲ್ಲ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲೆಪೇಟೆ, ಹನೂರು, ಚಾಮರಾಜನಗರ, ತಾಲೂಕುಗಳಲ್ಲಿ ಈಗಾಗಲೇ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಸರ್ಕಾರ ಆದೇಶ ಮಾಡಿ ಹಲವು ದಿನಗಳು ಕಳೆದರೂ ಶಾಲೆಯ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ನೀಡುವುದರ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹದವರು ಯಾವುದೇ ಕ್ರಮವಹಿಸುತ್ತಿಲ್ಲ ಎಂಬುದು ಪೋಷಕರ ದೂರಾಗಿದೆ.
ಜಿಲ್ಲೆಯಲ್ಲಿ 63,904 ವಿದ್ಯಾರ್ಥಿಗಳಿಗೆ ವಿತರಣೆ: 2022 ಜು.21 ರಿಂದ 2023 ಫೆ.28 ವರೆಗಿನ ಅವಧಿಯಲ್ಲಿ ಶಾಲಾ ಹಂತದ ಒಟ್ಟು 23 ವಾರಗಗಳಿಗೆ, ಪ್ರತಿ ವಾರಕ್ಕೆ ಎರಡು ಮೊಟ್ಟೆ ಅಥವಾ ಬಾಳೆಹಣ್ಣು, ಶೇಂಗಾ ಚಿಕ್ಕಿಯನ್ನು ಪೂರಕ ಪೌಷ್ಟಿಕ ಆಹಾರದ ರೂಪದಲ್ಲಿ ಒಬ್ಬ ವಿದ್ಯಾರ್ಥಿಗೆ ವಾರ್ಷಿಕವಾಗಿ 46 ದಿನ ನೀಡಬೇಕೆಂಬ ಸರ್ಕಾರಿ ಆದೇಶವಿದೆ. ಜಿಲ್ಲೆಯಲ್ಲಿ 5 ತಾಲೂಕುಗಳಲ್ಲಿ 1 ರಿಂದ 8ನೇ ತರಗತಿವರೆಗಿನ ಒಟ್ಟು ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 63,904 ಇದೆ, ಆದರಲ್ಲಿ ಯಳಂದೂರು ತಾಲೂಕಿನ 5,970 ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತವಾಗಿದ್ದಾರೆ.
ಬಡವರ್ಗ ಮಕ್ಕಳಿಗೆ ಬಿಸಿಯೂಟದ ಜತೆಗೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಬೇಕೆಂದು ಕಳೆದ ಹಲವು ದಿನದಲ್ಲಿ ಸರ್ಕಾರವು ಆದೇಶ ನೀಡಿದ್ದರೂ, ಯಳಂದೂರು ತಾಲೂಕಿನಲ್ಲಿ ಈ ಯೋಜನೆ ಇನ್ನೂ ಜಾರಿಯಾಗಿಲ್ಲ ಇದರಿಂದ ಬಡ ವರ್ಗದ ಮಕ್ಕಳು ವಂಚಿತಗೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೆ ಗಮನಹರಿಸಬೇಕು.
● ಶಿವಕುಮಾರ್, ಪೋಷಕರು
ಚಾಮರಾಜನಗರ ಜಿಲ್ಲೆಯಲ್ಲಿ ಗುಂಡ್ಲೆಪೇಟೆ, ಚಾಮರಾಜನಗರ, ಕೊಳ್ಳೇಗಾಲ ತಾಲೂಕಿನಲ್ಲಿ 1 ರಿಂದ 8 ವರೆಗಿನ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜತೆಗೆ ಮೊಟ್ಟೆ ಅಥವಾ ಬಾಳೆ ಹಣ್ಣು ನೀಡಲಾಗುತ್ತಿದೆ. ಯಳಂದೂರು ತಾಲೂಕಿನಲ್ಲಿ ಇನ್ನೂ ನೀಡುತ್ತಿಲ್ಲದ ಬಗ್ಗೆ ಸಂಬಂಧಪಟ್ಟ ಅಕ್ಷರ ದಾಸೋಹದವರಿಗೆ ಪತ್ರವನ್ನು ಬರೆದು ತಕ್ಷಣದಲ್ಲೇ ಈ ಬಗ್ಗೆ ಕ್ರಮ ವಹಿಸಲಾಗುವುದು.
●
ಗುರುಲಿಂಗಯ್ಯ, ಬಿಸಿಯೂಟ
ಯೋಜನೆಯ ಅಧಿಕಾರಿ, ಚಾಮರಾಜನಗರ
● ಫೈರೋಜ್ ಖಾನ್