Advertisement

ಗ್ರಾಪಂ ಅಭಿವೃದ್ಧಿಗೆ ಆದ್ಯತೆ ನೀಡಲಿ

11:22 AM Jan 25, 2019 | Team Udayavani |

ಯಲಬುರ್ಗಾ: ಗ್ರಾಮಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವ ಉದ್ದೇಶದಿಂದ ಗ್ರಾಪಂಗಳಿಗೆ ಸಂವಿಧಾನ ಬದ್ಧವಾದ ಅಧಿಕಾರವನ್ನು ನೀಡಲಾಗಿದೆ ಎಂದು ಅಕ್ಷರ ದಾಸೋಹ ತಾಲೂಕು ಅಧಿಕಾರಿ ಎಫ್‌.ಎಂ. ಕಳ್ಳಿ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ತಾಲೂಕಿನ ಗ್ರಾಪಂ ಸದಸ್ಯರಿಗೆ ಹಾಗೂ ಪಿಡಿಒಗಳಿಗೆ ಹಮ್ಮಿಕೊಂಡ ಹೈಕ ಅಭಿವೃದ್ಧಿ ಯೋಜನೆಯ ಕುರಿತು ಮಾಹಿತಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಾಂಧೀಜಿ ಅವರ ಕನಸಿನಂತೆ ರೂಪುಗೊಂಡಿರುವ ಗ್ರಾಪಂಗಳು ಗ್ರಾಮಗಳ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುತ್ತಿವೆ. ಇದಕ್ಕಾಗಿ ಬಲವಂತರಾಯ ಮೆಹ್ತಾ ಸಮಿತಿ ನೀಡಿರುವ ಹಲವಾರು ವಿಷಯಗಳನ್ನು ಜಾರಿಗೆ ತರಲಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೂ ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲು 73ನೇ ತಿದ್ದುಪಡಿ ಮೂಲಕ ಅವಕಾಶ ನೀಡಲಾಗಿದೆ. ಇದಕ್ಕಾಗಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ ಗ್ರಾಪಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸಾಮಾಜಿಕವಾಗಿ ಹಿಂದುಳಿದವರು ಸಹ ಅಧಿಕಾರ ಚಲಾಯಿಸಲು ಅವಕಾಶ ದೊರೆತಿದೆ. 14ನೇ ಹಣಕಾಸು ಯೋಜನೆಯಲ್ಲಿ ಗ್ರಾಪಂಗಳಿಗೆ ಹೆಚ್ಚಿನ ಆರ್ಥಿಕ ಸೌಲಭ್ಯ ದೊರೆತಿದೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ತರಬೇತಿಯಲ್ಲಿ ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ತಾಪಂ ವ್ಯವಸ್ಥಾಪಕ ಮಹೇಶಗೌಡ ಮಲ್ಲನಗೌಡ್ರ ಮಾತನಾಡಿ, ತರಬೇತಿಯಲ್ಲಿ ಗ್ರಾಪಂಗಳಿಗೆ ಸಂವಿಧಾನ ಬದ್ಧವಾಗಿ ದೊರೆತಿರುವ ಅಧಿಕಾರ, ಸಾಮಾನ್ಯ ಸಭೆಯ ನಡವಳಿಕೆ, ಸ್ಥಾಯಿ ಸಮಿತಿಗಳ ಕರ್ತವ್ಯ, ಸ್ವಂತ ಸಂಪನ್ಮೂಲಗಳ ಕ್ರೋಢೀಕರಣ, ರಾಜ್ಯ ಮತ್ತು ಕೇಂದ್ರ ಸರಕಾರದ 21 ಅಂಶಗಳು ಸೇರಿದಂತೆ ನಾನಾ ವಿಷಯಗಳನ್ನು ವಿವರವಾಗಿ ತಿಳಿಸಲಾಗುವುದು. ಹೈಕ ಪ್ರದೇಶಾಭಿವೃದ್ಧಿ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಯಾವ ರೀತಿ ಪಡೆಯಬೇಕು ಎಂಬುದನ್ನು ಸಮಗ್ರವಾಗಿ ತಿಳಿದುಕೊಳ್ಳಬೇಕು ಎಂದರು.

ಬಿಇಒ ಶರಣಪ್ಪ ವಟಗಲ್ಲ ಮಾತನಾಡಿ, ಹೈಕ ಅನುದಾನದಲ್ಲಿ ತಾಲೂಕಿನ ಶಾಲಾ ಕಟ್ಟಡಗಳು ನಿರ್ಮಾಣವಾಗುತ್ತಿವೆ. ತಾಲೂಕಿನ ಗ್ರಾಪಂಗಳ ಅಧ್ಯಕ್ಷರು ಹಾಗೂ ಪಿಡಿಒಗಳು ಗುಣಮಟ್ಟದ ಕಾಮಗಾರಿ ನಡೆಸಬೇಕು ಹಾಗೂ ಸರ್ಕಾರದಿಂದ ಶೈಕ್ಷಣಿಕ ಅಭಿವೃದ್ಧ್ದಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ತಾಲೂಕಿನಲ್ಲಿ ಸಕಾಲದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

Advertisement

ತಾಲೂಕು ಆರೋಗ್ಯ ಅಧಿಕಾರಿ ಡಾ| ಮಂಜುನಾಥ ಬ್ಯಾಳಹುಣಸಿ, ಪಿ.ವೈ. ಮ್ಯಾಗೇರಿ, ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ, ಸಂಪನ್ಮೂಲ ವ್ಯಕ್ತಿಗಳಾದ ಉಮೇಶ ನಾಯಕ, ಭೀಮಪ್ಪ ಹವಳಿ, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಇದ್ದರು.

ತರಬೇತಿ ಕಾರ್ಯಾಗಾರದ ಸಂದರ್ಭದಲ್ಲಿ ತಾಲೂಕಿನ ಕೆಲ ಗ್ರಾಪಂ ಪಿಡಿಒಗಳು ನಿದ್ರೆಗೆ ಜಾರಿದ್ದರು. ಕೆಲವರು ಫೋನ್‌ ಚಾಟಿಂಗ್‌ನಲ್ಲಿ ತಲ್ಲೀನರಾಗಿವುರು ಕಂಡು ಬಂತು. ತಾಪಂ ವ್ಯವಸ್ಥಾಪಕ ಮಹೇಶಗೌಡ ಮಲ್ಲನಗೌಡ್ರ ಪ್ರತಿಕ್ರಿಯಿಸಿ ತರಬೇತಿ ಸಭಾಂಗಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ನಿದ್ರೆಗೆ ಜಾರಿದ್ದ ಹಾಗೂ ಮೊಬೈಲ್‌ ಚಾಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ಪಿಡಿಒಗಳ ವಿರುದ್ಧ ಕ್ರಮಕ್ಕೆ ಸಿಸಿ ಕ್ಯಾಮೆರಾ ವಿಡಿಯೋ ಸಮೇತ ಮೇಲಾಧಿಕಾರಿಗೆ ವರದಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next