ಯಲಬುರ್ಗಾ: ಮುಂಗಾರು ಮಳೆಯ ವೈಫಲ್ಯದಿಂದ ಕಂಗಾಲಾಗಿದ್ದ ರೈತ ಸಮೂಹಕ್ಕೆ ಹಿಂಗಾರು ಮಳೆಯೂ ಕೈಕೊಟ್ಟಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ಹಿಂಗಾರು ಬಿತ್ತನೆಯಿಂದ ದೂರ ಉಳಿದಿದ್ದು, ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದೆ.
ಕೆರೆ-ಕಟ್ಟೆಗಳು ಒಣಗಿವೆ, ಹಿಂಗಾರು ಬಿತ್ತನೆಗೆ ಕೃಷಿ ಇಲಾಖೆ ಸಂಗ್ರಹಿಸಿಟ್ಟ ಬೀಜ, ಗೊಬ್ಬರವನ್ನು ಖರೀದಿಸುವವರೇ ಇಲ್ಲದಂತಾಗಿದೆ. ಪ್ರತಿ ವರ್ಷ ಹಿಂಗಾರು ಬಿತ್ತನೆ ಸಮಯದಲ್ಲಿ ರಿಯಾಯ್ತಿ ದರದಲ್ಲಿ ಬೀಜ ಖರೀದಿಸಲು ರೈತರು ಮುಗಿ ಬೀಳುತ್ತಿದ್ದರು. ರೈತ ಸಂಪರ್ಕ ಕೇಂದ್ರಗಳಲ್ಲಿ ಮುಗಿಬಿದ್ದ ರೈತರನ್ನು ನಿಯಂತ್ರಿಸಲು ಪೊಲೀಸ್ ಬಂದೋಬಸ್ತ್ ಮಾಡಲಾಗುತಿತ್ತು. ಆದರೆ ಈ ಬಾರಿ ವರುಣನ ಸುಳಿವೇ ಇಲ್ಲದ ಕಾರಣ ರೈತ ಸಂಪರ್ಕ ಕೇಂದ್ರಗಳು ಬಿಕೋ ಎನ್ನುತ್ತಿವೆ.
ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ವಾಡಿಕೆಯಂತೆ ಹಿಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಆದರೆ ಮುಂಗಾರು ಮಳೆ ಬಾರದೇ ಕಂಗಾಲಾಗಿದ್ದ ರೈತರು ಹಿಂಗಾರಿನಲ್ಲಿ ಇತ್ತೀಚೆಗೆ ಸುರಿದ ಅಲ್ಪ ಮಳೆಗೆ ಬಿತ್ತನೆ ಧೈರ್ಯ ಮಾಡುತ್ತಿಲ್ಲ. ಭೂಮಿ ಹದಗೊಳಿಸಿ ಮಳೆಗಾಗಿ ಮುಗಿಲಿನತ್ತ ಚಿತ್ತ ನೆಟ್ಟಿದೆ ರೈತ ಸಮೂಹ. ತಾಲೂಕಿನಾದ್ಯಂತ ಶೇ. 10 ಮಾತ್ರ ಬಿತ್ತನೆಯಾಗಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಆಗಿರುವ ಮಳೆಯನ್ನು ನಂಬಿ ಯರೇಭಾಗದ ಕೆಲ ರೈತರು ಕಡಲೆ, ಜೋಳ ಬಿತ್ತನೆ ಮಾಡಿದ್ದಾರೆ. ಇನ್ನು ಎರಡ್ಮೂರು ದಿನಗಳಲ್ಲಿ ಮಳೆಯಾಗದಿದ್ದರೇ ಅವು ಕೂಡಾ ನಾಶವಾಗುತ್ತವೆ. ಕಪ್ಪು ಭೂಮಿ ಹೊಂದಿದ ರೈತರು ಹಿಂಗಾರು ಸಮಯದಲ್ಲಿ ಕಡಲೆ, ಜೋಳ ಬಿತ್ತಿದರೆ, ಕುಸುಬೆ, ಸೂರ್ಯಕಾಂತಿ ಯಂತಹ ಬೀಜಗಳನ್ನು ಕಡಿಮೆ ಪ್ರಮಾಣದಲ್ಲಿ ಬಿತ್ತನೆ ಮಾಡುತ್ತಾರೆ.
ತಾಲೂಕಿನಲ್ಲಿ ಕುಕನೂರು, ಮಂಗಳೂರು, ಹಿರೇವಂಕಲಕುಂಟಾ, ತಳಕಲ್ ಗ್ರಾಮಗಳಲ್ಲಿ ಒಟ್ಟು ನಾಲ್ಕು ರೈತ ಸಂಪರ್ಕ ಕೇಂದ್ರಗಳಿವೆ. ಕೃಷಿ ಇಲಾಖೆಯಲ್ಲಿ 7900 ಕ್ವಿಂಟಲ್ ಕಡಲೆ ಬೀಜ, 215 ಕ್ವಿಂಟಲ್ ಜೋಳ ಸಂಗ್ರಹವಿದೆ. ಸಾಕಷ್ಟು ಗೊಬ್ಬರವೂ ದಾಸ್ತಾನಿದೆ ಸಂಗ್ರಹವಿದೆ. ಆಗಸ್ಟ್ ತಿಂಗಳಲ್ಲಿ 272 ಮಿ.ಮೀ. ಮಳೆಯಾಗಿತ್ತು. ಇದರಿಂದ ಕೆಲ ರೈತರು ಬಿತ್ತನೆ ಮಾಡಿದರು. ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ 514 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈವರೆಗೂ ಒಂದೂ ಹನಿಯೂ ಮಳೆಯಾಗಿಲ್ಲ. ವಾಡಿಕೆಯ ಪ್ರಕಾರ ಹಿಂಗಾರು ಮಳೆಯಾಗಿಲ್ಲ. ನೀರಾವರಿ ಮತ್ತು ಒಣಬೇಸಾಯ ಪ್ರದೇಶ ಸೇರಿ ತಾಲೂಕಿನಲ್ಲಿ 65 ಸಾವಿರ ಹೆಕ್ಟೇರ್ ಬಿತ್ತನೆ ಕ್ಷೇತ್ರವಿದ್ದು, ಹಿಂಗಾರು ಹಂಗಾಮಿನಲ್ಲಿ ಶೇ. 10ರಷ್ಟು ಮಾತ್ರ ಬಿತ್ತನೆಯಾಗಿದ್ದು, ತೇವಾಂಶ ಕೊರತೆಯಿಂದ ಇದು ಕೂಡ ಒಣಗುತ್ತಿದೆ.
ತಾಲೂಕಿನಾದ್ಯಂತ ವರುಣನ ಆಗಮನಕ್ಕಾಗಿ ಸಪ್ತಭಜನೆ, ಕಪ್ಪೆಗಳ ಮದುವೆ, ಅನ್ನಸಂರ್ತಪಣೆಯಂತಹ ಧಾರ್ಮಿಕ ಕಾರ್ಯಗಳತ್ತ ಜನತೆ ಮೊರೆ ಹೋಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಲಿಲ್ಲ, ಸಾವಿರಾರೂ ರೂಪಾಯಿಗಳನ್ನು ಖರ್ಚು ಮಾಡಿ ಸಾಲ ಹೊತ್ತುಕೊಂಡಿದ್ದೇವೆ. ಹಿಂಗಾರು ಮಳೆ ವಿಶ್ವಾಸ ನಮಗಿಲ್ಲ. ಒಂದು ವೇಳೆ ಮಳೆಯಾದರೇ ಮಾತ್ರ ಬೀಜ, ಗೊಬ್ಬರ ಖರೀದಿಸುತ್ತೇವೆ.
ಅಂದಪ್ಪ ಕೋಳೂರ,
ಭೀಮಣ್ಣ ಕೋಮಲಾಪುರ, ರೈತರು.
ಮಳೆ ಬಾರದಿರುವುದರಿಂದ ರೈತರು ಬೀಜ, ಗೊಬ್ಬರ ಖರೀದಿಗೆ ಮುಂದಾಗುತ್ತಿಲ್ಲ. ಈ ಬಾರಿ ಬೀಜದ ಕೊರತೆ ಇಲ್ಲ. ಸಾಕಷ್ಟು ದಾಸ್ತಾನು ಇದೆ. ಹಿಂದಿನ ವರ್ಷದಲ್ಲಿ ರೈತರು ಖರೀದಿಸಿದ ಪ್ರಮಾಣ ಅನುಸರಿಸಿ ಹೆಚ್ಚಿನ ಪ್ರಮಾಣದಲ್ಲಿ ರಿಯಾಯ್ತಿ ದರದಲ್ಲಿ ವಿತರಿಸಲು ಎಲ್ಲ ಬಗೆಯ ಗುಣಮಟ್ಟದ ಬೀಜಗಳ ಸಂಗ್ರಹವಿದೆ.
ಹಾರೋನ್ ರಾಶೀದ್,
ಸಹಾಯಕ ಕೃಷಿ ನಿರ್ದೇಶಕ ಯಲಬುರ್ಗಾ
ಮಲ್ಲಪ್ಪ ಮಾಟರಂಗಿ