Advertisement

ಅಂಬೇಡ್ಕ‌ರ್‌ ತತ್ವಾದರ್ಶ ಅನುಸರಿಸಿ

11:01 AM Jan 26, 2019 | |

ಯಲಬುರ್ಗಾ: ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಮಾರ್ಗಗಳನ್ನು ಅನುಸರಿಸಿದರೆ ನಾವುಗಳು ಎಲ್ಲ ಕ್ಷೇತ್ರಗಳಲ್ಲಿ ಇತರ ಸಮಾಜದವರಿಗಿಂತ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಡಿಎಸ್‌ಎಸ್‌ ಮುಖಂಡ ಪುಟ್ಟರಾಜ ಪೂಜಾರ ಹೇಳಿದರು.

Advertisement

ಅವರು ತಾಲೂಕಿನ ಉಚ್ಚಲಕುಂಟಾ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಮಾದಿಗ ಯುವ ಸೇನೆಯ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ದಲಿತರು ಹೋರಾಟದ ಮೂಲಕ ತಮ್ಮ ಹಕ್ಕು ಪಡೆದುಕೊಂಡು ಸಮಾಜದಲ್ಲಿ ಶಿಕ್ಷಣವಂತರಾಗಬೇಕು. ಸಮಾಜದ ಯುವಕರು ತಾಲೂಕಿನಲ್ಲಿ ಮಾದಿಗ ಸಮಾಜದ ಜಾಗೃತಿಗೆ ಸಂಘಟನೆ, ಹೋರಾಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ದೇಶಕ್ಕೆ ದಲಿತರು ನೀಡಿದ ಕೊಡುಗೆ ಅಪಾರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ದಲಿತರು ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡಿ ಪ್ರಬಲರಾಗಬೇಕು ಎಂದು ಹೇಳಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್ ಮಾತನಾಡಿ, ಡಾ| ಬಿ.ಆರ್‌. ಅಂಬೇಡ್ಕರ್‌ ಅ‌ವರು ಈ ದೇಶದ ಪ್ರತಿಯೊಬ್ಬರಿಗೂ ಸಮಾನತೆಯನ್ನು ಸಂವಿಧಾನದ ಮೂಲಕ ಕಲ್ಪಿಸಿದ್ದಾರೆ. ಶತ ಶತಮಾನಗಳಿಂದಲೂ ಶೋಷಿತರ ಮೇಲೆ ದೌರ್ಜನ್ಯ, ದಬ್ಟಾಳಿಕೆಯನ್ನು ಕೊನೆಗೊಳಿಸಿದ ಅಂಬೇಡ್ಕರ್‌ ಅವರ ಚಿಂತನೆ ಆದರ್ಶ ನಮಗೆ ಸ್ಫೂರ್ತಿಯಾಗಬೇಕು. ಇಡೀ ಜಿಲ್ಲೆಯಲ್ಲಿ ಮಾದಿಗರ ಸಂಘಟನೆಗೆ ಸಿದ್ದು ಮಣ್ಣಿನವರ್‌ ಶ್ರಮವಹಿಸುತ್ತಿದ್ದಾರೆ. ಇಂತಹವರಿಗೆ ಸಂಘಟನೆಯ ಜವಾಬ್ದಾರಿಗೆ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಹೇಳಿದರು.

ಜಿಲ್ಲಾ ಮಾದಿಗ ಯುವ ಸೇನೆ ಜಿಲ್ಲಾಧ್ಯಕ್ಷ ಸಿದ್ದು ಮಣ್ಣಿನವರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ದಲಿತರು ಜಾಗೃತಿಯಾಗಲು ಅನೇಕ ಉಪನ್ಯಾಸ ಮತ್ತು ಹೋರಾಟಗಳನ್ನು ನಡೆಸುತ್ತೇನೆ. ದಲಿತರಿಗೆ ನ್ಯಾಯಯುತವಾಗಿ ಸರ್ಕಾರಿ ಸೌಲಭ್ಯಗಳನ್ನು ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಂಬೇಡ್ಕರ್‌ ಅವರ ಹೋರಾಟದ ಹಾದಿಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದ್ದೇನೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಗಂಗಾವತಿಯ ಸಾಹಿತಿ ಡಾ| ಲಿಂಗಣ್ಣ ಜಂಗಮರಹಳ್ಳಿ ಉಪನ್ಯಾಸ ನೀಡಿದರು.

ಮೆರವಣಿಗೆ: ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಹಾಗೂ ಡಾ| ಬಾಬು ಜಗಜೀವನರಾವ್‌ ಅವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಶರಣ ಕಲಾ ಬಳಗದವರಾದ ರಮೇಶ ಗಬ್ಬೂರ್‌, ರಂಜನಿ ಆರತಿ, ಭೈರವಿ, ಜ್ಯೋತಿ, ಚಿದಾನಂದ ಅವರು ಕ್ರಾಂತಿ ಗೀತೆಗಳನ್ನು ಹಾಡಿದರು.

Advertisement

ಗ್ರಾಮ ಘಟಕದ ಅಧ್ಯಕ್ಷ ಹನಮಂತಪ್ಪ ಹುಬ್ಬಳ್ಳಿ, ಉಪಾಧ್ಯಕ್ಷ ದುರಗಪ್ಪ, ಕಾರ್ಯದರ್ಶಿ ಶರೀಫ್‌ ಶಿವಪುತ್ರಪ್ಪ, ಗ್ರಾಪಂ ಉಪಾಧ್ಯಕ್ಷ ಸುಭಾಷ್‌ ಜಿರ್ಲಿ, ಮುಖಂಡರಾದ ಪಿ. ರಮೇಶ, ಬಸವರಾಜ ಕಳ್ಳಿ, ನೀಲಪ್ಪ ಬೆಣಕಲ್‌, ನಿಂಗರಾಜ ಗುಳೆ, ಶಶಿಧರ ಗಡಾದ, ನಾಜರಾಜ ನಂದಾಪುರ್‌, ಶಿಕ್ಷಕ ಕೃಷ್ಣಾ ಪತ್ತಾರ್‌, ಮಾರುತಿ ವೈ., ಮೌನೇಶ, ಭೀಮೇಶ ಕೆಂಚಪ್ಪ, ಹನಮಂತ ಹಿರೇಮನಿ, ಶಿವಮೂರ್ತಿತೆಪ್ಪ ಕಡೆಮನಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next