ಯಲಬುರ್ಗಾ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಆರಂಭಿಕ ಹಂತವೇ ಚುನಾವಣಾ ಪ್ರಕ್ರಿಯೆಯಾಗಿದೆ. ಮತದಾರರು ಪ್ರತಿ ಚುನಾವಣೆ ಮತದಾನದಲ್ಲಿ ತೊಡಗಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಅರ್ಥ ಪೂರ್ಣವಾಗಲಿವೆ ಎಂದು ತಾಪಂ ಸಹಾಯಕ ನಿರ್ದೇಶಕ ಹನಮಂತಗೌಡ ಪೊಲೀಸ್ ಪಾಟೀಲ್ ಹೇಳಿದರು.
Advertisement
ತಾಲೂಕಿನ ಗೆದಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಜಾಗೃತಿ ಹಾಗೂ ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದಲ್ಲಿ ಅವರು ಮಾತನಾಡಿದರು.
ನರೇಗಾ ಕೂಲಿಕಾರರು ಮತ ಚಲಾಯಿಸುವ ಮೂಲಕ ತಮ್ಮಿಂದ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಮೇ ತಿಂಗಳಲ್ಲಿ ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. ಮತದಾನ ದಿನದಂದು ಸಮಯ ವ್ಯರ್ಥ ಮಾಡದೆ ಚುನಾವಣೆ ಆಯೋಗ ನಿಗದಿಪಡಿಸಿದ
ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತ ಚಲಾಯಿಸಬೇಕು. ಗೆದಗೇರಿ ಗ್ರಾಮ ಪಂಚಾಯತಿಯಲ್ಲಿ ಶೇಕಡಾ 100 ರಷ್ಟು ಮತದಾನ ಆಗಬೇಕು ಎಂದರು. ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನವು ಎರಡು ತಿಂಗಳ ನಿರಂತರವಾಗಿದ್ದು, ಅದರ ಸದುಪಯೋಗವನ್ನು ಎಲ್ಲ ಕೂಲಿಕಾರರು ಪಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ತಾಪಂ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಗ್ರಾಮ ಪಂಚಾಯತಿ ಪಿಡಿಒ ಮಹಾಂತೇಶ ಬಾಳಿಕಾಯಿ ಮಾತನಾಡಿದರು. ಗ್ರಾ.ಪಂ ಕಾರ್ಯದರ್ಶಿ ಚನ್ನಪ್ಪ, ಟಿಎಇ ಶ್ರೀದೇವಿ, ಬಿಎಫ್‌ಟಿ ದೇವಪ್ಪ ಬತ್ತಿ, ಕಾಯಕ ಮಿತ್ರರಾದ ಮಂಜುಳಾ ತಳವಾರ, ಕಾಯಕ ಬಂಧುಗಳು, ಕೂಲಿಕಾರರು ಹಾಜರಿದ್ದರು.