Advertisement

ನಾವಡರ ನೆನಪಿನಲ್ಲರಳಿದ ಯಕ್ಷ ಕುಸುಮಗಳು

06:20 PM Jun 13, 2019 | mahesh |

ಗಾನ ಕೋಗಿಲೆ ದಿ.ಗುಂಡ್ಮಿ ಕಾಳಿಂಗ ನಾವಡರು ಬಡಗುತಿಟ್ಟಿನ ಯಕ್ಷರಂಗದಲ್ಲಿ ಇತಿಹಾಸ ಸೃಷ್ಟಿಸಿದವರು. ಅವರು ರಸ್ತೆ ಅಪಘಾತಕ್ಕೆ ತುತ್ತಾಗಿ ವಿಧಿವಶರಾಗಿ 29 ವರ್ಷಗಳೆ ಉರುಳಿದವು. ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಮೇ 26 ರಂದು ಯಶಸ್ವೀ ಕಲಾವೃಂದವು ನಾವಡರ ಸಂಸ್ಮರಣೆಯನ್ನು ಸ್ಮರಣೀಯವೆನಿಸುವ ರೀತಿಯಲ್ಲಿ ಆಯೋಜಿಸಿತ್ತು. ನಾವಡರೇ ರಚಿಸಿದ ರೂಪಶ್ರೀ, ಕಾಂಚನಶ್ರೀ, ವಿಜಯಶ್ರೀ, ನಾಗಶ್ರೀಗಳೆಂಬ ನಾಲ್ಕು ಯಕ್ಷಗಾನ ಪ್ರಸಂಗಗಳ ಆಯ್ದಭಾಗವನ್ನು ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶಿಸಿದ್ದು ಗಮನಾರ್ಹ.

Advertisement

ಮೊದಲಿಗೆ ರೂಪಶ್ರೀ ಪ್ರಸಂಗದ ಸನ್ನಿವೇಶವನ್ನು ಮನಮುಟ್ಟುವಂತೆ ಮಾಡಿದ ಕಲಾವಿದರು ಅಭಿನಂದನೆಗೆ ಪಾತ್ರರಾದರು. ಕುಸುಮಾಖ್ಯ ಪುರದ ಅರಸನಾದ ನಿಜ ಸಹೋದರನನ್ನು ಕುತಂತ್ರದಿಂದ ಕೊಂದು ರಾಜ್ಯವಾಳುತ್ತಿರುವ ಬಾಹುಬಲನು, ವನ ವಿಹಾರಗೈಯುತ್ತಿರುವ ಮಣಿಪುರದರಸನ ಮಗಳು ರೂಪಶ್ರೀಯನ್ನು ಕಂಡು ಮೋಹಿಸುವ, ಆಗ್ರಹಿಸಿದಾಗ ಬಲಾತ್ಕರಿಸುವ ಸಂದರ್ಭದಲ್ಲಿ ಶಶಿಪುರದರಸನ ಮಗ ಪ್ರವೀರನು ಬಂದು ರಕ್ಷಿಸುವ ಕಥಾಭಾಗ ಇಲ್ಲಿಯದು. ಶೃಂಗಾರ ಮತ್ತು ವೀರ ರಸಗಳ ಅಭಿನಯಕ್ಕೆ ಸಾಕಷ್ಟು ಅವಕಾಶವಿರುವ ಭಾಗವಿದು. ಬಾಹುಬಲನಾಗಿ ಪ್ರಸನ್ನ ಶೆಟ್ಟಿಗಾರ್‌, ರೂಪಶ್ರೀಯಾಗಿ ಮಾಧವ ನಾಗೂರು, ಪ್ರವೀರನಾಗಿ ಉದಯ ಹೆಗಡೆ ಕಡಬಾಳ ಆಂಗಿಕ, ವಾಚಿಕಾಭಿನಯಗಳಿಂದ ರಂಗವನ್ನು ಶ್ರೀಮಂತಗೊಳಿಸಿದರು.

ಪೂರ್ವದ್ವೇಷವನ್ನು ಉಪಾಯದಿಂದ ಸಾಧಿಸಲು ರುಚಿರನ ಮಡದಿಯಾಗಿ ಬಂದಿರುವ ಶಾರಿಕೆ ಎಂಬ ಹೆಣ್ಣು ಕಾಂಚನಶ್ರೀ ಪ್ರಸಂಗದ ಮುಖ್ಯ ಭೂಮಿಕೆ. ರಾಮ ಲಕ್ಷಣರಂತಿದ್ದ ರುಚಿರ ಮತ್ತು ಸುಚಿರರಲ್ಲಿ ಒಡಕು ಉಂಟುಮಾಡಿ, ತಾನು ಹೆಣೆದ ಮೋಸದ ಜಾಲದೊಳಗೆ ತಾನೇ ಸಿಕ್ಕಿ ಸಾವಿಗೀಡಾಗುವ ದುರಂತ ಸನ್ನಿವೇಷದ ಶಾರಿಕೆಯಾಗಿ ಕಲಾವಿದ ಸುಬ್ರಮಣ್ಯ ಯಲಗುಪ್ಪ ಅವರ ಅಭಿನಯ ಮನೋಜ್ಞವಾಗಿತ್ತು. ಹಿತಮಿತವಾದ ಮಾತು ಕುಣಿತಗಳಿಂದ ರುಚಿರ – ಸುಚಿರರಾಗಿ ಥಂಡಿಮನೆ ಶ್ರೀಪಾದ ಭಟ್‌ ಮತ್ತು ಪ್ರಕಾಶ್‌ ಕಿರಾಡಿ ಮನಗೆದ್ದರು. ಶಾರ್ಬಿಲನೆಂಬ ಕಿರಾತನ ಪಾತ್ರವನ್ನು ದಿನೇಶ್‌ ಕನ್ನಾರು ಸಂಪನ್ನಗೊಳಿಸಿದರು.

ಕಿರಿಯ ಹೆಂಡತಿಯ ಮಾತಿಗೆ ಕಿವಿಗೊಟ್ಟು ಪ್ರಾಣನಾಯಕಿ ವಿಮಲೆಯನ್ನೇ ಕಾಡಿಗಟ್ಟಿದ ರಾಜ ಸ್ವರ್ಣಸೇನನು, ಮುಂದೊಂದು ದಿನ ಬೇಟೆಯ ನೆಪದಲ್ಲಿ ಕಾಡಿನಲ್ಲಿ ಅನಾಥನಾಗಿ ದಿಕ್ಕುದೆಸೆಯಿಲ್ಲದೆ ನೀರಿಗಾಗಿ ಹಂಬಲಿಸಿದಾಗ ತಾನು ಹೊರಗಟ್ಟಿದ ವಿಮಲೆಯಿಂದಲೇ ಬದುಕುಳಿಯುವ ಕರುಣಾರಸಾಭಿವ್ಯಕ್ತಿಯ ವಿಜಯಶ್ರೀ ಪ್ರಸಂಗದ ಕಥಾಭಾಗವು ಹಿರಿಯ ಕಲಾವಿದರೀರ್ವರಾದ ಆರೊYಡು ಮೋಹನದಾಸ ಶೆಣೈ ಹಾಗು ಹೊಸಂಗಡಿ ರಾಜೀವ ಶೆಟ್ಟಿಯವರಿಂದ ಸುಂದರವಾಗಿ ಮೂಡಿಬಂತು. ಈ ಈರ್ವರೂ ಈ ಹಿಂದೆ ಇದೇ ಪ್ರಸಂಗದಲ್ಲಿ ನಾವಡರ ಭಾಗವತಿಕೆಗೆ ಹೆಜ್ಜೆಯಿಟ್ಟವರು.

ಮುಂದಿನದ್ದು ನಾವಡರ ಟ್ರಂಪ್‌ ಕಾರ್ಡ್‌ ಎನಿಸಿದ ಪ್ರಸಂಗ ನಾಗಶ್ರೀಯ ಒಂದು ತುಣುಕು ಪ್ರದರ್ಶಿತವಾಯಿತು. ಆಶ್ರಯ ಕೇಳಿ ಬಂದ ಶುಭಾಗ, ದಾರಿಕೆ ಮತ್ತು ಕೈರವನ ಸನ್ನಿವೇಷದಲ್ಲಿ ನಾಗಶ್ರೀಯಾಗಿ ಚುರುಕಿನ ಹೆಜ್ಜೆ ಮತ್ತು ಚುಟುಕು ಮಾತುಗಳಿಂದ ಗಮನ ಸೆಳೆದವರು ವಿಜಯ ಗಾಣಿಗ ಬೀಜಮಕ್ಕಿಯವರು. ಶುಭಾಗನ ಪಾತ್ರದಲ್ಲಿ ದಿನೇಶ್‌ ಕನ್ನಾರು ಕತೆಗೆ ಪೂರಕರಾದರು.

Advertisement

ಶೃಂಗಾರ ಪ್ರಿಯ ಹೆಣ್ಣು ರೂಪಶ್ರೀ, ಸೇಡು, ಸಿಟ್ಟು ಸೆಡವುಗಳ ಶಾರಿಕೆ, ಕ್ಷಮಾಗುಣಸಂಪನ್ನೆಯಾದ ವಿಮಲೆ, ಕ್ಷಾತ್ರಿಯಾಣಿ ಗಂಡುಡುಗೆಯ ನಾಗಶ್ರೀ ಹೀಗೆ ನಾಲ್ಕು ವಿಭಿನ್ನ ವ್ಯಕ್ತಿತ್ವದ ಸ್ತ್ರೀ ಪಾತ್ರಗಳ ಅನಾವರಣದ ಕಲ್ಪನೆಯಲ್ಲಿ ನಾವಡರ ಪ್ರಸಂಗದ ಆಯ್ದ ಯಕ್ಷ ಕುಸುಮಗಳನ್ನು ಪೋಣಿಸಿ ಪ್ರದರ್ಶಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

ಭಾಗವತಿಕೆಯಲ್ಲಿ ರಾಮಕೃಷ್ಣ ಹಿಲ್ಲೂರು ಮತ್ತು ನಗರ ಸುಬ್ರಮಣ್ಯ ಆಚಾರ್‌, ಚಂಡೆ ಮದ್ದಳೆಯಲ್ಲಿ ಎನ್‌. ಜಿ. ಹೆಗಡೆ, ಮಂದರ್ತಿ ರಾಮಕೃಷ್ಣ ಹಾಗೂ ಶ್ರೀನಿವಾಸ ಪ್ರಭು ಸಹಕರಿಸಿದರು.

ಸುಜಯೀಂದ್ರ ಹಂದೆ ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next