Advertisement

YakshaRanga: ಯಕ್ಷಗಾನ ಉಳಿವಿಗೆ ಹೊಸ ಕಲಾವಿದರು ಪಣ ತೊಡಬೇಕು

11:57 AM Sep 04, 2024 | Team Udayavani |

ಕಾಸರಗೋಡು ಜಿಲ್ಲೆಯ ಮಂಜೇಶ್ವರ ದಡ್ಡಂಗಡಿಯಲ್ಲಿ 1943ರ ಜ.10ರಂದು ಜನಿಸಿದ ಸುಬ್ಬಯ್ಯ ಶೆಟ್ಟರು ಮಂಗಳೂರಿನ ಬೋಳಾರದಲ್ಲಿ ಹೊಟೇಲ್‌ ನಡೆಸಿ ಬೋಳಾರ ಸುಬ್ಬಯ್ಯ ಶೆಟ್ಟರೆಂದೇ ಖ್ಯಾತರಾದರು. ತೆಂಕುತಿಟ್ಟು ಯಕ್ಷರಂಗದ “ಅಭಿನವ ಕೋಟಿ’ ಬಿರುದಾಂಕಿತ ದಿ| ಬೋಳಾರ ನಾರಾಯಣ ಶೆಟ್ಟರ ಮಾರ್ಗದರ್ಶನದಲ್ಲಿ ಮೇಳದ ತಿರುಗಾಟಕ್ಕೆ ತೊಡಗಿದ ಸುಬ್ಬಯ್ಯ ಶೆಟ್ಟರು ವಿವಿಧ ಮೇಳಗಳಲ್ಲಿ 54 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿದ್ದಾರೆ.

Advertisement

ತೆಂಕುತಿಟ್ಟಿನ ಪ್ರಸಿದ್ಧ ಇದಿರು ವೇಷಧಾರಿಯಾಗಿ ರುವ ಬೋಳಾರ ಸುಬ್ಬಯ್ಯ ಶೆಟ್ಟರು ಭೀಮ, ಕಂಸ, ಮಧು, ಶುಂಭ, ಇಂದ್ರಜಿತು, ರಾವಣ, ಅರ್ಜುನ, ಕಿರಾತ, ವೀರವರ್ಮ, ಪೂತನಿ, ಶೂರ್ಪನಖೀ, ಲಂಕಿಣಿ, ತಾಟಕಿ, ಹಿಡಿಂಬೆ ಮುಂತಾದ ಪೌರಾಣಿಕ ಪಾತ್ರಗಳಲ್ಲದೆ, ತುಳು ಪ್ರಸಂಗಗಳ ಪೆರುಮಯ್ಯ ಬಲ್ಲಾಳ, ಬುದ್ಯಂತ, ಚಂದುಗಿಡಿ, ದುಗ್ಗಣ ಕೊಂಡೆ, ಕಾಂತಣ್ಣ ಅತಿಕಾರಿ, ಬಿರ್ಮಣ್ಣ ಆಳ್ವ ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧರು. ಪ್ರಸ್ತುತ 84ರ ಇಳಿವಯಸ್ಸಿನಲ್ಲೂ ಕಳೆದ ವರ್ಷದ ವರೆಗೆ ಕಳವಾರು ಶ್ರೀ ಬೆಂಕಿನಾಥೇಶ್ವರ ಮೇಳದಲ್ಲಿ ತಿರುಗಾಟ ನಡೆಸಿದ್ದರು.

ಶೇಣಿ ಪ್ರಶಸ್ತಿ, ಸಾಮಗ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು, ವಿಶ್ವ ಬಂಟರ ಸಂಘದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಪ್ರಸ್ತುತ ಮಂಗಳೂರಿನ ಮರೋಳಿಯಲ್ಲಿ ವಾಸವಾಗಿದ್ದಾರೆ.

ನಿಮ್ಮ ಯಕ್ಷ ಜೀವನದ ಬಗ್ಗೆ….
ದಡ್ಡದಂಗಡಿ ಅಮ್ಮನ ತರವಾಡು ಮನೆ, ಅಪ್ಪನ ಊರು ತೌಡುಗೋಳಿಯ ಬಳಿ ನರಿಂಗಾಣ. ಮೊಂಟೆಪದವು ಮುಡಿಪು ಶಾಲೆಯಲ್ಲಿ ಆರನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆ. ಅಕ್ಕ ಮದುವೆಯಾಗಿ ಮಂಗಳೂರಿನ ಬೋಳಾರಕ್ಕೆ ಬಂದ ಬಳಿಕ ನಾನೂ ಸುಮಾರು 10ನೇ ವರ್ಷ ಪ್ರಾಯದವನಾಗಿದ್ದಾಗ ಮಂಗಳೂರಿಗೆ ಬಂದೆ. ಆರಂಭದಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದವ ಬಳಿಕ ಬೋಳಾರದಲ್ಲಿಯೇ ಸ್ವಂತ ಹೊಟೇಲ್‌ ಆರಂಭಿಸಿದೆ.

1970ರಲ್ಲಿ 30ನೇ ವರ್ಷದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು, ಬೋಳಾರ ಮಾರಿಯಮ್ಮ ಮಹಿಷಮರ್ಧಿನಿ ದೇವಸ್ಥಾನದ ಮೇಳದಲ್ಲಿ ಗೆಜ್ಜೆ ಕಟ್ಟಿ ಸುಮಾರು 5 ವರ್ಷ ಕಲಾವಿದನಾಗಿ ಕೆಲಸ ಮಾಡಿದೆ. ಬಳಿಕ ಸುಂಕದಕಟ್ಟೆ ಮೇಳದಲ್ಲಿ 5 ವರ್ಷ, ಕದ್ರಿ ಮೇಳದಲ್ಲಿ 8 ವರ್ಷ, ಮನೋಹರ್‌ ಕುಮಾರ್‌ ಅವರ ಕದ್ರಿ ಮೇಳದಲ್ಲಿ 8 ವರ್ಷ, ಕರ್ನಾಟಕ ಮೇಳದಲ್ಲಿ ಸುಮಾರು 15 ವರ್ಷ ಕೆಲಸ ಮಾಡಿದೆ. ಮಧೂರು ಮೇಳದಲ್ಲಿ 2 ವರ್ಷ, ಕುಂಟಾರು ಮೇಳದಲ್ಲಿ 2 ವರ್ಷ, ಪುತ್ತೂರು ಮೇಳದಲ್ಲಿ 1 ವರ್ಷ ಮತ್ತೆ ಸುಂಕದಕಟ್ಟೆ ಮೇಳದಲ್ಲಿ ವೇಷ ಮಾಡಿದೆ. ನಿವೃತ್ತಿಯಾಗಿ ಹೊರಬಂದವನನ್ನು ಬೆಂಕಿನಾಥೇಶ್ವರ ಮೇಳದವರು ಕರೆಸಿಕೊಂಡರು. ಸುಮಾರು 6 ವರ್ಷ ಅಲ್ಲಿಯೂ ಕಲಾವಿದನಾಗಿ ಕಲಾಸೇವೆ ನಡೆಸಿ, ಕಳೆದ ವರ್ಷದಿಂದ ಸಂಪೂರ್ಣ ವಿಶ್ರಾಂತ ಜೀವನ ನಡೆಸುತ್ತಿದ್ದೇನೆ.

Advertisement

ಯಕ್ಷ ಕಲಿಕೆ ಹೇಗೆ ಯಾವಾಗ ಆರಂಭವಾಯಿತು?
ಯಕ್ಷಗಾನದ ಅಭಿರುಚಿ ಚಿಕ್ಕವನಾಗಿದ್ದಾಗಿನಿಂದಲೂ ಇತ್ತು. ಬಡತನದ ಕಾರಣದಿಂದ ಅದರಲ್ಲಿ ತೊಡಗಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಬೋಳಾರದಲ್ಲಿ ಹೊಟೇಲ್‌ ಉದ್ಯಮ ನಡೆಸುತ್ತಿದ್ದಾಗ ಯಕ್ಷಗಾನದ ತುಡಿತ ಹೆಚ್ಚಾಯಿತು. ಯಕ್ಷಗಾನ ಕಲಿಯಲೇಬೇಕು ಎಂದು ಬೋಳಾರ ನಾರಾಯಣ ಶೆಟ್ರ ಗರಡಿಗೆ ಸೇರಿದೆ.

ಇದರಿಂದಾಗಿ ಕೋಳ್ಯೂರು ರಾಮಚಂದ್ರ ರಾಯರು, ರಾಮದಾಸ ಸಾಮಗರು, ಮಂಕುಡೆ ಸಂಜೀವ ಶೆಟ್ರಾ, ಕಟೀಲು ಶೀನಯ್ಯ, ಭೀಮ ಭಟ್ರಾ, ಬೇಕೂರು ಕೇಶವ, ಪುತ್ತೂರು ನಾರಾಯಣ ಹೆಗ್ಡೆ, ರಾಮಯ್ಯ ರೈ, ಕುಂಬ್ಳೆ ಸುಂದರ ರಾಯರು ಮೊದಲಾದವರರೊಂದಿಗೆ ಒಡನಾಟ ಹೊಂದುವ, ಪಾತ್ರಮಾಡುವ ಅವಕಾಶ ದೊರೆಯಿತು. ಯಕ್ಷಗಾನದಲ್ಲಿ ನಮ್ಮಂತಹ ಅವಿದ್ಯಾವಂತರೇ ಹೆಚ್ಚಾಗಿದ್ದ ಕಾಲದಲ್ಲಿ ಶೇಣಿ – ಸಾಮಗರಂತಹವರ ಪ್ರವೇಶ ಆದ ಬಳಿಕ ಯಕ್ಷಗಾನಕ್ಕೆ ಹೊಸ ಕಳೆ ಬಂತು. ಯಕ್ಷಗಾನದಲ್ಲಿ ಸುಧಾರಣೆಯಾಯಿತು.

ಆಗಿನ ದಿನಗಳು ಹೇಗಿತ್ತು?
ಹಿಂದೆ ಯಕ್ಷಗಾನದ ಜೀವನ ತುಂಬಾ ಕಷ್ಟಕರವಾಗಿತ್ತು. ಸ್ವಂತ ವಾಹನ ವ್ಯವಸ್ಥೆ ಇದ್ದವರು ಯಾರೂ ಇಲ್ಲ. ಮೇಳದ ಮೆಟಡೋರ್‌ ವಾಹನಗಳಲ್ಲಿ ಊರೂರು ತಿರುಗಾಡುತ್ತಿದ್ದೆವು. ವಾಹನ ಹೋಗಲು ಸಾಧ್ಯವಿಲ್ಲದ ಸ್ಥಳಗಳಿಗೆ ಪೆಟ್ಟಿಗೆಗಳನ್ನು ತಲೆಯಲ್ಲಿ ಹೊತ್ತುಕೊಂಡು ಹೋಗಿರುವುದೂ ಇದೆ. ಮನೆ ಬಿಟ್ಟರೆ ತಿಂಗಳುಗಟ್ಟಲೆ ಮೇಳದ ಜತೆಗೇ ಹೋಗುತ್ತಿದ್ದೆವು. ಮನೆಯವರೊಂದಿಗೆ ಸಂಪರ್ಕವೂ ಕಡಿತವಾಗು ತ್ತಿತ್ತು. ಮನೆಗೆ ಪತ್ರಗಳನ್ನು ಬರೆದು ಸಮಾಚಾರ ವಿಚಾರಿಸುತ್ತಿದ್ದುದೂ ಇದೆ.

ಪ್ರೇಕ್ಷಕ ವರ್ಗದ ಬಗ್ಗೆ ಏನು ಹೇಳುತ್ತೀರಿ?
ಈಗ ಅರ್ಥಗಾರಿಕೆಯನ್ನು ಕೇಳುವ ತಾಳ್ಮೆಯೂ ಜನರಲ್ಲಿ ಕಡಿಮೆಯಾಗಿದೆ. ಒಂದಷ್ಟು ಮಂದಿಗೆ ಇಡೀ ರಾತ್ರಿ ಯಕ್ಷಗಾನ ಬೇಕು. ಆದರೆ ಈ ಪ್ರಮಾಣ ಶೇ.25ರಷ್ಟು ಮಾತ್ರ. ಉಳಿದ ಶೇ.75ರಷ್ಟು ಮಂದಿ ಕಾಲಮಿತಿಯನ್ನು ಬೆಂಬಲಿಸುತ್ತಿದ್ದಾರೆ. ಹಿಂದೆ ಟೆಂಟ್‌ ಮೇಳದ ಯಕ್ಷಗಾನವೆಂದರೆ ರಾತ್ರಿ 8 ಗಂಟೆ ವೇಳೆಗೆ ಟೆಂಟ್‌ ಭರ್ತಿಯಾಗುತ್ತಿತ್ತು. ಅಂದಿನ ಕಾಲದಲ್ಲಿ ರಾತ್ರಿ ಯಕ್ಷಗಾನಕ್ಕೆ ಬಂದರೆ ವಾಪಸು ಹೋಗಲು ವ್ಯವಸ್ಥೆ ಇರಲಿಲ್ಲ. ಹಾಗಾಗಿ ಬೆಳಗ್ಗಿನ ವರೆಗೂ ನಿಲ್ಲುತ್ತಿದ್ದರು. ಇಂದು ರಾತ್ರಿ ಸಾಕೆನಿಸಿದಾಗ ಎದ್ದು ಹೋಗುತ್ತಾರೆ. ಬೆಳಗ್ಗಿನ ವರೆಗೆ ಕುಳಿತು ಯಕ್ಷಗಾನ ನೋಡುವ ವ್ಯವಧಾನವೂ ಇಲ್ಲ. ಆದರೂ ಕಾಲಮಿತಿಯಿಂದಾಗಿ ಪ್ರೇಕ್ಷಕ ವರ್ಗ ಸ್ವಲ್ಪ ಹೆಚ್ಚಾಗಿದೆ.

ರಂಗದ ಮೇಲಿನ ಕೆಲವು ಬದಲಾವಣೆ ಸಹ್ಯವೇ? ಅಪಸವ್ಯವೇ?
ಹಿಂದೆ ನಮ್ಮಂತಹ ಯುವ ಕಲಾವಿದರು ಹಿರಿಯ ಕಲಾವಿದರು, ಯಜಮಾನರ ಮಾತನ್ನು ಕೇಳಿ ಅದೇ ನಡೆಯಲ್ಲಿ ಸಾಗುತ್ತಿದ್ದೆವು. ದಿನೇಶ್‌ ಅಮ್ಮಣ್ಣಾಯ, ದಾಮೋದರ ಮಂಡೆಚ್ಚರು, ಪುರುಷೋತ್ತಮ ಪೂಂಜರು, ಪುತ್ತಿಗೆ ತಿಮ್ಮಪ್ಪ ರೈ ಮೊದಲಾದ ಭಾಗವತರು ಮುಮ್ಮೇಳ- ಹಿಮ್ಮೇಳದ ಸಾಂಗತ್ಯದೊಂದಿಗೆ ಚೌಕಿಯಲ್ಲಿ ಪ್ರಸಂಗವನ್ನು ಮುನ್ನಡೆಸುತ್ತಿದ್ದರು. ಚೆಂಡೆ – ಮದ್ದಳೆಯ ನಡೆಯಲ್ಲಿ ಕಲಾವಿದರು ನಾಟ್ಯ ಮಾಡುತ್ತಿದ್ದರು. ಇಂದು ರಂಗದಲ್ಲಿ ಭಾಗವತರ ಹಿಡಿತ ಕಡಿಮೆಯಾಗಿದೆ. ಕಲಾವಿದರ ನಾಟ್ಯವನ್ನು ಅನುಸರಿಸಿ ಚೆಂಡೆ -ಮದ್ದಳೆ ಧ್ವನಿ ಕೇಳಿಸುತ್ತಿದೆ.

ಯಕ್ಷಗಾನದ ಇಂದಿನ ಬೆಳವಣಿಗೆ ಬಗ್ಗೆ?
ಯಕ್ಷಗಾನದಲ್ಲಿ ಭಯ -ಭಕ್ತಿ ಎನ್ನುವುದು ಪ್ರಧಾನ. ಹಿರಿಯರಿಗೆ ಗೌರವ ಕೊಡುವುದು, ಅವರ ಪಾತ್ರಗಳಿಂದ ಕಲಿಯುವುದು ಸಾಮಾನ್ಯವಾಗಿತ್ತು. ಇದರಿಂದಾಗಿ ಕಲಾವಿದರ ಹೆಸರು ಅಚ್ಚಳಿಯದೆ ಉಳಿಯುತ್ತಿತ್ತು. ಗ್ರಾಮೀಣ ಪ್ರದೇಶದಲ್ಲಿದ್ದ ಯಕ್ಷ ಗಾನ ಇಂದು ಸೀಮೋಲ್ಲಂಘನೆ ಮಾಡಿ ಹೊರ ದೇಶ ಗಳಲ್ಲೂ ಜನ ಮೆಚ್ಚುಗೆ ಪಡೆಯುತ್ತಿದೆ. ಯಕ್ಷ ಗಾನದ ಈ ಬೆಳವಣಿಗೆ ಸಂತೋಷದ ಸಂಗತಿ.

ಯಕ್ಷ ಬದುಕು ನೆಮ್ಮದಿ ತಂದಿದೆಯೇ?
ಯಕ್ಷಗಾನದ ಮೂಲಪುರುಷ ಪಾರ್ತಿ ಸುಬ್ಬನವರು ಹಾಕಿಕೊಟ್ಟ ನಡೆಗೆ ಕುಂದು ಬಾರ ದಂತೆ ನಿವೃತ್ತನಾಗುವ ವರೆಗೂ ಕಲಾವಿದ ನಾಗಿ ಕೆಲಸ ಮಾಡಿದ್ದೇನೆ ಎನ್ನುವ ಹೆಮ್ಮೆ ಇದೆ. ಯಕ್ಷಗಾನ ದಿಂದಾಗಿಯೇ ಹೆಸರು ಕೂಡ ಯಕ್ಷಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವುದರೊಂದಿಗೆ “ಬೋಳಾರ ಸುಬ್ಬಯ್ಯ ಶೆಟ್ಟಿ’ ಅವರು ಯಾರು ಎಂದು ಜನರಿಗೆ ತಿಳಿಯುವಂತಾಗಿದೆ.

ಹೊಸ ಕಲಾವಿದರಿಗೆ ನೀವೇನು ಹೇಳುವಿರಿ?
ಇಂದು ಮಾತುಗಾರಿಕೆಯಲ್ಲಿ ರಾಜಕೀಯ ಮಿಶ್ರಿತ, ಅಸಂಬದ್ಧ ಹಾಸ್ಯಗಳು ಹೆಚ್ಚಾಗಿವೆ. ಇದು ಯಕ್ಷ ಪರಂಪರೆಗೆ ತಕ್ಕುದಲ್ಲ. ಹಿಂದೆ ಯಜಮಾನರ ಭಯವಿತ್ತು, ರಂಗಸ್ಥಳದಲ್ಲಿ ಒಂದು ಶಬ್ದ ತಪ್ಪಿ ಮಾತನಾಡಿದರೂ ಮರುದಿನ ಬೆಳಗ್ಗೆ ಯಜಮಾನದಿಂದ ವಿಚಾರಣೆ ನಡೆಯುತ್ತಿತ್ತು. ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಲಾವಿದರು ತೊಡಗಿಸಿಕೊಂಡರೆ ಕಲೆಗೂ, ಕಲಾವಿದರಿಗೂ ಯಶಸ್ಸು ಖಚಿತ. ಯಕ್ಷಗಾನ ಕಲೆಯನ್ನು ಉಳಿಸಲು ಹೊಸ ಕಲಾವಿದರು ಪಣತೊಡಬೇಕಾದ ಅಗತ್ಯವೂ ಇದೆ.

*ಭರತ್‌ ಶೆಟ್ಟಿಗಾರ್

Advertisement

Udayavani is now on Telegram. Click here to join our channel and stay updated with the latest news.

Next