ಯಕ್ಷಪ್ರಿಯ ಬಳಗ ಮೀರಾ-ಭಾಯಂದರ್ ಸಂಸ್ಥೆಯು ಯಕ್ಷಗಾನದಲ್ಲಿ ಅರಳುವ ಕುಸುಮಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ದೃಷ್ಟಿಯಿಂದ ಸ್ಥಾಪನೆಗೊಂಡಿದೆ. ಅನೇಕ ಬಾಲಪ್ರತಿಭೆಗಳು ಈ ಸಂಸ್ಥೆಯ ಮುಖಾಂತರ ತಮ್ಮ ಪ್ರತಿಭೆಗಳಿಗೆ ಕನ್ನಡಿ ಹಿಡಿಯುವ ಕಾಯಕದಲ್ಲಿ ಬಳಗದ ಕಲಾವಿದರು ತೊಡಗಿರುವುದು ವಿಶೇಷತೆಯಾಗಿದೆ. ಸಂಸ್ಥೆಯ ಮುಖಾಂತರ ಆಂಗ್ಲ ಮಾಧ್ಯಮದ ಮಕ್ಕಳು ಕನ್ನಡ ಕಲಿತು ಯಕ್ಷಗಾನದ ವೇಷಧಾರಿಗಳಾಗಿ ಮೆರೆದು ಸೈ ಎನಿಸಿಕೊಂಡ ಪ್ರತಿಭೆಗಳು ಸಾಕಷ್ಟು ಮಂದಿ ಇದ್ದಾರೆ. ಯಕ್ಷಗಾನ ಕಲಾವಿದ, ನಿರ್ದೇಶಕ ನಾಗೇಶ್ ಪೊಳಲಿ ಅವರ ದಕ್ಷ ನಿರ್ದೇಶನದಲ್ಲಿ ಯಕ್ಷಪ್ರಿಯ ಬಳಗ ಮೀರಾ-ಭಾಯಂದರ್‌ನಲ್ಲಿ ಅನೇಕ ಪೌರಾಣಿಕ ಪ್ರಸಂಗದೊಂದಿಗೆ ಮುಂಬಯಿ ಮಹಾನಗರದಲ್ಲಿ ತಾಳಮದ್ದಳೆ, ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಮೇ 1 ರಿಂದ ತವರೂರ ಪ್ರವಾಸದಲ್ಲಿರುವ ಈ ಮಂಡಳಿಯು ದಕ್ಷಿಣ ಕನ್ನಡದ ಕೆಲವು ನಿರ್ಧರಿತ ಸ್ಥಳಗಳಲ್ಲಿ ಪ್ರದರ್ಶನ ನೀಡಲಿದೆ. ಇದರ ಪೂರ್ವಭಾವಿಯಾಗಿ ವಿವಿಧ ಕಲಾ ಪ್ರಕಾರಗಳಿಗೆ ವಿಶಿಷ್ಟ ಸ್ಥಾನಮಾನ ನೀಡುವ ವಿದ್ಯಾದಾಯಿನಿ ಸಭಾ ಮುಂಬಯಿ ಇದರ ಸಹಯೋಗದೊಂದಿಗೆ ತಾಯ್ನಾಡಿನ ಪ್ರವಾಸಕ್ಕೆ ಅಣಿಯಾದ ಯಕ್ಷಪ್ರಿಯ ಬಳಗದ ಕಲಾ ಪ್ರತಿಭೆಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಭಾಯಂದರ್ ಪೂರ್ವದ ನವಘರ್ ರೋಡ್‌ನ ಗುರುದ್ವಾರ ಸಮೀಪದ ಲೋಕಮಾನ್ಯ ತಿಲಕ್ ಸಭಾಗೃಹದಲ್ಲಿ ಎ. 30ರಂದು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅತಿಥಿ-ಗಣ್ಯರು ಬಾಲ ಕಲಾವಿದರನ್ನು ಹಾಗೂ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರನ್ನು ಗೌರವಿಸಿ ಶುಭ ಹಾರೈಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬಳಗದ ಪ್ರತಿಭೆಗಳಿಂದ ಸುದರ್ಶನ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಮುಮ್ಮೇಳದಲ್ಲಿ ದೇವೇಂದ್ರನಾಗಿ ಪ್ರೀತೇಶ್ ಬಿ. ಕಟೀಲು, ವರುಣನಾಗಿ ಧೃತಿ ಸಿ. ಶೆಟ್ಟಿ, ವಾಯುವಾಗಿ ವೃದ್ಧಿ ಆರ್. ಶೆಟ್ಟಿ, ಕುಬೇರನಾಗಿ ಸಾನ್ವಿ ಎಂ. ಶೆಟ್ಟಿ, ಅಗ್ನಿಯಾಗಿ ಕಲಶ್ ಡಿ. ಶೆಟ್ಟಿ, ಕಾಲಾಸುರನಾಗಿ ಶ್ರೇಯಸ್ ಆರ್. ಶೆಟ್ಟಿ, ಮೂಕಾಸುರನಾಗಿ ಮನ್ವಿತ್ ಸಿ. ಶೆಟ್ಟಿ, ಶತ್ರು ಪ್ರಸೂದನಾಗಿ ನಿಖೀತ್ ಎ. ಸುವರ್ಣ, 2 ನೇ ಮೂಕಾಸುರನಾಗಿ ಅಕ್ಷಿತ್ ಎ. ಸುವರ್ಣ, ಸುದರ್ಶನನಾಗಿ ಕೀರ್ತಿ ಬಿ. ಕಟೀಲ್, ದೇವದೂತನಾಗಿ ರೋಹಿತ್ ಶೆಟ್ಟಿ, ಲಕ್ಷ್ಮೀಯಾಗಿ ಸುನೀತಾ ಎ. ಸುವರ್ಣ ಹಾಗೂ ಸುಂದರಿ ಆರ್. ಕೋಟ್ಯಾನ್ ಅವರು ಪಾಲ್ಗೊಂಡು ತಮ್ಮ ಪಾತ್ರಗಳಿಗೆ ಜೀವ ತುಂಬಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು. ಭಾಗವತರಾಗಿ ಕಿರಣ್ ಹೆಗ್ಡೆ, ಚೆಂಡೆಯಲ್ಲಿ ಜಗದೀಶ್ ಶೆಟ್ಟಿ ಏಳಿಂಜೆ, ಮದ್ದಳೆಯಲ್ಲಿ ನಾರಾಯಣ ಬಂಗೇರ, ಜನಾರ್ದನ ಹೆಗ್ಡೆ ಅವರು ಸಹಕರಿಸಿದರು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಮಕ್ಕಳನ್ನು ಹುರಿದುಂಬಿಸಿದರು.
ಒಟ್ಟಿನಲ್ಲಿ ಮಕ್ಕಳು ಇತ್ತೀಚೆಗಿನ ದಿನಗಳಲ್ಲಿ ಯಕ್ಷಗಾನದ ಅಭಿರುಚಿಯನ್ನು ಬೆಳೆಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ನಾಡಿನ ಸಂಸ್ಕೃತಿ, ಸಂಸ್ಕಾರಗಳ ಪ್ರತೀಕವಾಗಿರುವ ಯಕ್ಷಗಾನ ಕಲೆಯು ಮುಂದಿನ ಪೀಳಿಗೆಗೆ ಉಳಿದು-ಬೆಳೆಯಬೇಕು ಎನ್ನುವ ಅರ್ಥಪೂರ್ಣ ಕನಸನ್ನು ಹೊಂದಿರುವ ಬಳಗದ ಕಾರ್ಯ ಸ್ತುತ್ಯರ್ಹ. ಬಳಗದ ಪ್ರತಿಭೆಗಳು ತವರೂರಿನಲ್ಲೂ ತಮ್ಮ ಪ್ರತಿಭೆಯನ್ನು ಮೆರೆದು ಎಲ್ಲರ ಪ್ರಶಂಸೆಗೆ ಪಾತ್ರವಾಗಲಿ ಎಂಬುವುದು ನಮ್ಮ ಹಾರೈಕೆ.
ರಮೇಶ್ ಅಮೀನ್