Advertisement
ಮೂಡಬಿದಿರೆಯ ಯಕ್ಷನಿಧಿ ಸಂಸ್ಥೆ ತನ್ನ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 100ಕ್ಕೂ ಮಿಕ್ಕಿದ ಮಕ್ಕಳೇ ಪ್ರಸ್ತುತ ಪಡಿಸಿದ ಯಕ್ಷಗಾನ ಸತ್ವ ಪರೀಕ್ಷೆ – ಪುಷ್ಪವಿಲಾಸ – ಅಭಿಮನ್ಯು ಕಾಳಗ ಯಶಸ್ವಿಯಾಯಿತು. ಚುರುಕಿನ ಸಾಂಪ್ರದಾಯಿಕ ಹೆಜ್ಜೆ , ಹದವರಿತ ಮಾತು ಹಾಗೂ ಭಾವಾಭಿನಯದ ಮೂಲಕ ಮಕ್ಕಳು ಚೆನ್ನಾಗಿ ನಿರ್ವಹಿಸಿದರು.
Related Articles
Advertisement
ಕೃಷ್ಣನು ಸತ್ಯಭಾಮೆಗಾಗಿ ಸ್ವರ್ಗಲೋಕದಿಂದ ಪಾರಿಜಾತ ವೃಕ್ಷವನ್ನು ತರುವ ಕಥಾವಸ್ತುವೇ “ಪುಷ್ಪ ವಿಲಾಸ’ . ಕೃಷ್ಣನಾಗಿ ಪಂಚಮಿ ಮಾರೂರುರವರ ಪ್ರಸ್ತುತಿ ಅತ್ಯುತ್ತಮವಾಗಿತ್ತು . ನಾಟ್ಯ , ಆಂಗಿಕ ಚಲನೆ , ಮಾತುಗಾರಿಕೆಯಲ್ಲಿ ಸಮನ್ವಯತೆಯೊಂದಿಗೆ ನೀಡಿದ ಕೃಷ್ಣನ ಚಿತ್ರಣ ಆಕರ್ಷಿಸಿತು . ಸತ್ಯಭಾಮೆಯ ಹಠ , ಅಹಂಕಾರವನ್ನು ಚೈತ್ರಾ ಜಿ.ಬಂಗೇರ ಚಿತ್ರಿಸಿದರು.ನರಕಾಸುರನ ಪಾತ್ರದಲ್ಲಿ ರಂಜಿತ್ ಶೆಟ್ಟಿ ಪರಂಪರೆಯ ಬಣ್ಣದ ವೇಷದಲ್ಲಿ ಮಿಂಚಿದರು .
ಮೂರನೇ ಪ್ರಸಂಗ “ಅಭಿಮನ್ಯು ಕಾಳಗ’.ಕುಣಿತವೇ ಪ್ರಧಾನ ಆಗಿರುವ ಈ ಪ್ರಸಂಗ ಹವ್ಯಾಸಿಗಳಿಗೆ ಕಬ್ಬಿಣದ ಕಡಲೆಕಾಯಿಯೇ ಹೌದು. ಆದರೂ ಯಕ್ಷನಿಧಿಯ ವಿದ್ಯಾರ್ಥಿಗಳು ಈ ಪ್ರಸಂಗವನ್ನು ಅಂದವಾಗಿ ಪ್ರಸ್ತುತಗೊಳಿಸಿದರು . ಮುಖ್ಯ ಪಾತ್ರ ಅಭಿಮನ್ಯು ಮೂವರು ಕಲಾವಿದರಿಂದ ಪ್ರಸ್ತುತವಾಯಿತು .ಮೊದಲ ಅಭಿಮನ್ಯುವಾಗಿ ಜಿತೇಶ್ ಉತ್ತಮ ನಾಟ್ಯ , ದಿಗಿಣಗಳಿಂದ ಮಿಂಚಿದರು . ಪ್ರತೀ ಪದ್ಯಕ್ಕೂ 50ರ ಮೇಲೆ ದಿಗಿಣ ತೆಗೆದು ಕರತಾಡನ ಗಿಟ್ಟಿಸಿದರು . ಸುಭದ್ರೆಯೊಡನೆ ಸಂಭಾಷಣೆಯ ಅಭಿಮನ್ಯು ಆಗಿ ಕೇಂದ್ರದ ಗುರುಗಳಾದ ಶಿವಕುಮಾರರೇ ಕಾಣಿಸಿಕೊಂಡರು . ಸುಭದ್ರೆಯಾಗಿ ಪವನ್ ಕುಮಾರ್ ಪ್ರಸ್ತುತಿ ಭಾವನಾತ್ಮಕವಾಗಿ ಮೂಡಿಬಂತು .
ಕೊನೆಯ ಅಭಿಮನ್ಯು ಆಗಿ ಅಮೃತ್ ಪುತ್ತಿಗೆ ನಾಟ್ಯ , ಹಾವಭಾವ , ವೀರರಸಗಳಿಗೆ ನೀಡಿದ ಕುಣಿತಗಳಿಂದ ಮಿಂಚಿದರು . ಕೈ ಕಡಿದ ಸನ್ನಿವೇಶದಲ್ಲಿ ಕೈಯನ್ನು ಹಿಂದಕ್ಕೆ ಹಿಡಿದು 70ಕ್ಕೂ ಹೆಚ್ಚು ದಿಗಿಣ ತೆಗೆದು , ತಾನೂ ವೃತ್ತಿಪರರಿಗೆ ಕಡಿಮೆಯಲ್ಲ ಎಂದು ನಿರೂಪಿಸಿದರು . ದ್ರೋಣನಾಗಿ ಸಂದೀಪ್ ಪುತ್ತಿಗೆ , ಕೌರವನಾಗಿ ಪ್ರದೀಪ ಆಚಾರ್ಯರು, ದುಶ್ಯಾಸನನಾಗಿ ಪ್ರತೀಕ್ ಸಾಲಿಯಾನ್ ಉತ್ತಮವಾಗಿ ನಿರ್ವಹಿಸಿದರು.
ಭಾಗವತಿಕೆಯಲ್ಲಿ ಪುಣಿಚಿತ್ತಾಯ, ಶ್ರೀನಿವಾಸ ಬಳ್ಳಮಂಜ, ಶಿವಪ್ರಸಾದ್ ಎಡಪದವು, ಚೆಂಡೆ ಮದ್ದಲೆಯಲ್ಲಿ ನೇರೋಳು, ಪಡ್ರೆದ್ವಯರು, ಆನಂದ ಗುಡಿಗಾರ್ , ಸವಿನಯರ ನಿರ್ವಹಣೆ ಅತ್ಯುತ್ತಮವಾಗಿತ್ತು .
ಯಕ್ಷನಿಧಿಯ ವಿದ್ಯಾರ್ಥಿಗಳು ನೀಡುವ ಪ್ರಸ್ತುತಿ ವೃತ್ತಿಪರ ಕಲಾವಿದರ ಮಟ್ಟದಲ್ಲೇ ಇದೆ ಎಂಬುದು ಉಲ್ಲೇಖನೀಯ .
ಎಂ.ಶಾಂತರಾಮ ಕುಡ್ವ