Advertisement

ಕೋಳ್ಯೂರುಗೆ ಯಕ್ಷಾಂಗಣ ಗೌರವ

05:59 PM Nov 21, 2019 | mahesh |

ಕೋಳ್ಯೂರು ರಾಮಚಂದ್ರ ರಾವ್‌ ಅವರಿಗೆ 87ರ ಇಳಿಪ್ರಾಯ.ಆದರೆ ಸ್ತ್ರೀಯರನ್ನೂ ನಾಚಿಸುವ ಅವರ ಧ್ವನಿ ಹಾಗೂ ಅಂಗಭಾಷೆ ಇಂದಿಗೂ “ಹದಿನಾರು ವತ್ಸರದ ಹೆಣ್ಣಾದ ಕೋಳ್ಯೂರ’ರನ್ನು ನೆನಪಿಸುತ್ತದೆ. ಇದೀಗ ಯಕ್ಷಾಂಗಣ ಗೌರವ ಪ್ರಶಸ್ತಿ ಅವರ ಕೀರ್ತಿ ಮುಕುಟಕ್ಕೆ ಮತ್ತೂಂದು ಗರಿಯಾಗಿ ಸೇರಿಕೊಳ್ಳಲಿದೆ.

Advertisement

ಕಟೀಲು, ಧರ್ಮಸ್ಥಳ, ಸುರತ್ಕಲ್‌, ಕೂಡ್ಲು, ಬಪ್ಪನಾಡು, ಕರ್ನಾಟಕ ಮೇಳಗಳಲ್ಲಿ ಸುಮಾರು 45 ವರ್ಷಗಳ ತಿರುಗಾಟ ನಡೆಸಿದ ಗರಿಮೆ ಅವರದು.ದೇವಿ, ದಮಯಂತಿ, ಗಿರಿಜೆ, ಚಂದ್ರಮತಿ, ಅಂಬೆ, ಸುಭದ್ರೆ, ಪ್ರಮೀಳೆ, ಚಿತ್ರಾಂಗದೆ.. ಇತ್ಯಾದಿ ಪೌರಾಣಿಕ ಪಾತ್ರಗಳಲ್ಲದೆ ಸಿರಿ, ದೇಯಿ, ಕಿನ್ನಿದಾರು, ಸೋಮಲಾದೇವಿ, ತನ್ನಿಮಾನಿಗ, ಬೊಮ್ಮಕ್ಕೆ, ಮುಂತಾದ ಸ್ತ್ರೀ ಪಾತ್ರಗಳಲ್ಲಿ ಅಪಾರ ಯಶಸ್ಸು ಗಳಿಸಿದ್ದಾರೆ. ದಕ್ಷಯಜ್ಞದ ದಾಕ್ಷಾಯಿಣಿಯಾಗಿ, ಅಕ್ಷಯಾಂಬರ ವಿಲಾಸದ ದ್ರೌಪದಿಯಾಗಿ ರಾಮಚಂದ್ರರಾಯರು ಜನಮಾನಸದಲ್ಲಿ ಅಚ್ಚಳಿಯದ ಮುದ್ರೆಯೊತ್ತಿದ್ದಾರೆ.

ಹಲವೆಡೆ ಯಕ್ಷಗಾನ ಗುರುಗಳಾಗಿ ನೂರಾರು ಶಿಷ್ಯರನ್ನು ಸಿದ್ಧಪಡಿಸಿರುವುದು ಕೋಳ್ಯೂರು ಅವರ ಹೆಚ್ಚುಗಾರಿಕೆ. ಪ್ರಾತ್ಯಕ್ಷಿಕೆ, ಕಮ್ಮಟ, ಕಾರ್ಯಾಗಾರಗಳ ಸಂಪನ್ಮೂಲ ವ್ಯಕ್ತಿಯಾಗಿ ಪರಂಪರೆಯ ಬಗ್ಗೆ ನಿಖರವಾಗಿ ಹೇಳಬಲ್ಲ ಅಧಿಕೃತ ವ್ಯಕ್ತಿಯಾಗಿ ತೆಂಕುತಿಟ್ಟು ಯಕ್ಷಗಾನದ ಅನುಪಮ ಸಾಧಕರಾಗಿ ಅವರದು ದೊಡ್ಡ ಹೆಸರು.

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮವಾಗಿ ನವೆಂಬರ್‌ 17ರಿಂದ 23ರ ವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ “ರವೀಂದ್ರ ಕಲಾಭವನದಲ್ಲಿ ಆಯೋಜಿಸಿರುವ ಏಳನೆಯ ನುಡಿಹಬ್ಬ ಸಂಧಾನ ಸಪ್ತಕ ತಾಳಮದ್ದಲೆ ಸಪ್ತಾಹ ಸಂದರ್ಭ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಎ. ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನವೆಂಬರ್‌ 23ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ರಾಮಚಂದ್ರರಾಯರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಭಾಸ್ಕರ ರೈ ಕುಕ್ಕುವಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next