Advertisement

ಯಕ್ಷಮಂಗಳ ಪ್ರಚಾರೋಪನ್ಯಾಸ

04:23 PM Dec 23, 2017 | |

ಮುಡಿಪು: ಪರಂಪರೆಯೊಂದಿಗೆ ಹೊಸತನವನ್ನು ಯಕ್ಷಗಾನಕ್ಕೆ ಪರಿಚಯಿಸುವುದರೊಂದಿಗೆ, ಯಕ್ಷಗಾನದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿ ಮಾಡಿದವರಲ್ಲಿ ಹಿರಿಯ ಬಲಿಪ ನಾರಾಯಣ ಭಾಗವತರು ಪ್ರಮುಖರಾಗಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಹಿರಿಯ ಬಲಿಪರ ಕೊಡುಗೆ ಅಪಾರವಾದುದು ಎಂದು ಮಂಗಳೂರು ಸರಕಾರಿ ರಥಬೀದಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ| ನಾಗವೇಣಿ ಮಂಚಿ ಅವರು ಅಭಿಪ್ರಾಯ ಪಟ್ಟರು.

Advertisement

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಯಕ್ಷಮಂಗಳ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ‘ಹಿರಿಯ ಬಲಿಪ ನಾರಾಯಣ ಭಾಗವತ’ ವಿಷಯದ ಕುರಿತು ಮಾತನಾಡಿದರು.

ಸುಮಾರು 21 ಪ್ರಸಂಗ ಕೃತಿಗಳನ್ನು ಬರೆದಿರುವ ಇವರಿಗೆ ಸುಮಾರು 60ಕ್ಕಿಂತ ಹೆಚ್ಚು ಪ್ರಸಂಗಗಳು ಕಂಠ ಪಾಠವಾಗಿದ್ದವು. ಒಂದು ಮೈಲು ದೂರ ಅವರ ಸ್ವರ ಕೇಳುತ್ತಿತ್ತು. ಭಾಗವತಿಕೆಯಲ್ಲಿ ಅಂದು ಅವರು ಆರಂಭಿಸಿದ ಬಲಿಪ ಶೈಲಿ ಭಾಗವತಿಕೆಯನ್ನು ಅವರ ಕುಟುಂಬದವರು ಇಂದು ಕೂಡ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಬಲಿಪ ವಂಶಸ್ಥರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ| ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ಬಲಿಪ ನಾರಾಯಣ ಭಾಗವತರ ವಿಷಯದಲ್ಲಿ ನಾವು ಅಧ್ಯಯನ ನಡೆಸಿದಾಗ ಹಿಂದಿನ ಕಾಲದಲ್ಲಿದ್ದ ಯಕ್ಷಗಾನ ಹಾಗೂ ಕಲಾವಿದರ ಸ್ಥಿತಿಗತಿ ತಿಳಿಯಲು ಸಾಧ್ಯ. ಅಂದಿನ ಕಾಲದಲ್ಲಿ ಕಲಾವಿದರು ಬಡತನವಿದ್ದರೂ ಕಲೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು. 

ಪ್ರಾಧ್ಯಾಪಕ ಶರತ್‌ ಕುಮಾರ್‌, ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣಕಲ್ಚಾರ್‌, ಯಕ್ಷಗಾನ ಕೇಂದ್ರದ ಸತೀಶ್‌ ಕೊಣಾಜೆ, ಬಾಲಚಂದ್ರ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಧ್ಯಾಪಕ ಡಾ| ಚೇತನ್‌ ಸೋಮೇಶ್ವರ್‌ ಸ್ವಾಗತಿಸಿ, ವಿದ್ಯಾರ್ಥಿನಿ ಕಾವ್ಯಶ್ರೀ ವಂದಿಸಿ, ವಿದ್ಯಾರ್ಥಿನಿ ಜ್ಞಾನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

Advertisement

ನಿಷ್ಠುರತೆ ಎದುರಿಸಲು ಸಿದ್ಧರಿದ್ದರು
ಯಕ್ಷಗಾನವು ಪರಂಪರೆಯೊಂದಿಗೆ ಸಮರ್ಥವಾಗಿರಬೇಕು ಎಂಬುದು ಹಿರಿಯ ಬಲಿಪ ನಾರಾಯಣ ಭಾಗವತರ ಆಶಯವಾಗಿತ್ತು. ಇದಕ್ಕಾಗಿ ಅವರು ಯಾವುದೇ ನಿಷ್ಠುರತೆ ಎದುರಿಸಲು ಸಿದ್ಧರಿದ್ದರು. ಯಕ್ಷಗಾನ ಪದ್ಯಕ್ಕಿಂತ ಹೆಚ್ಚಾಗಿ ದೀರ್ಘ‌ವಾಗಿ ಅರ್ಥ ಹೇಳುವುದನ್ನು ಅವರು ವಿರೋಧಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಭಾಗವತರು ಸೇರಿ ಹಿಮ್ಮೇಳ ಕಲಾವಿದರು ಪ್ರದರ್ಶನ ಮುಗಿಯುವವರೆಗೆ ನಿಂತುಕೊಂಡೇ ಇರಬೇಕಿತ್ತು. ಆದರೆ ಬಲಿಪಜ್ಜ ಭಾಗವತರು ಇದರಲ್ಲಿ ಬದಲಾವಣೆ ತಂದು ಕುಳಿತು ಪದ್ಯ ಹೇಳುವ ಕ್ರಮ ಆರಂಭಿಸಿದರು. 
– ಡಾ| ನಾಗವೇಣಿ ಮಂಚಿ

Advertisement

Udayavani is now on Telegram. Click here to join our channel and stay updated with the latest news.

Next