Advertisement

ಯಕ್ಷಕಲಾ ಸಂಸ್ಕೃತಿ –ಗಾನದೀಕ್ಷಾ ಪ್ರದಾನ

10:18 PM Mar 28, 2019 | Team Udayavani |

ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿಯ ಸಂಚಾಲಕ ಎಂ.ದೇವಾನಂದ ಭಟ್ಟರ ಪುತ್ರಿ ಕು| ಶುಭಾಂಜನಾ ಪ್ರಸ್ತುತ ಭಾಗವತಿಕೆಯ ವಿದ್ಯಾರ್ಥಿನಿ. ಸಾರ್ವಜನಿಕ ವೇದಿಕೆಯಲ್ಲಿ ಅವರ ಮೊದಲ ಹಾಡುಗಾರಿಕೆ ಇತ್ತೀಚೆಗೆ ಬೆಳುವಾಯಿಯಲ್ಲಿ ನಡೆಯಿತು.

Advertisement

ಗಂಭೀರ ಸ್ವರಭಾರವನ್ನು ಹೊಂದಿದ ಬಾಲಕಿಯ ಪದ್ಯ ಸುಲಲಿತವಾಗಿ ಸಾಗಿತು. ಹಿರಿಯ ಕಲಾವಿದರ ಮಧ್ಯದಲ್ಲಿ ಕುಳಿತ ಶುಭಾಂಜನಾ ಅಳುಕದೆ ಮೊದಲ ರಂಗ ಪ್ರಯೋಗದಲ್ಲಿ ಗೆದ್ದಿದ್ದಾರೆ. ಕಾಲೇಜು ವ್ಯಾಸಂಗದ ಜೊತೆ ಅವರ ಸಂಗೀತದ ಒಲವಿನ ಪರಿಶ್ರಮ ಫ‌ಲಿಸಿತು. ಅಜ್ಜ ಮಿಜಾರು ಸುಬ್ರಾಯ ಭಟ್ಟರು ಮತ್ತು ತಂದೆ ದೇವಾನಂದ ಭಟ್ಟರು ಮೇಳ ತಿರುಗಾಟದ ಅನುಭವಿ ಕಲಾವಿದರು. ಸೋದರ ಮಾವ ಚಂದ್ರಕಾಂತ ಮೂಡುಬೆಳ್ಳೆ ಪ್ರಸ್ತುತ ಸಾಲಿಗ್ರಾಮ ಮೇಳದ ಭಾಗವತರು. ಹೀಗೆ ಕಲಾ ಪ್ರಭಾವಲಯದಲ್ಲಿ ಬಾಲ್ಯ ಕಳೆದವರು ಶುಭಾಂಜನಾಗೆ ಕಲಾಭಿರುಚಿ ಸಹಜವಾಗಿ ಮೈಗೂಡಿತು. ಯಕ್ಷರಂಗದಲ್ಲಿ ಅವರು ಬೆಳೆಯುವ ಲಕ್ಷಣ ಇಲ್ಲಿ ಅಭಿವ್ಯಕ್ತವಾಯಿತು. ಲೀಲಾವತಿ ಬೈಪಾಡಿತ್ತಾಯ ಮೇಳ ಸಂಚಾರದ ಭದ್ರವಾದ ಹಿನ್ನೆಲೆ ಹೊಂದಿದವರು. “ಭೀಷ್ಮ ವಿಜಯ’ ಪ್ರಸಂಗದ “ಪರಮ ಋಷಿ ಮಂಡಲದಿ…’ ಮತ್ತು ದಕ್ಷಯಾಗದ ಕೆಲವು ಪದ್ಯಗಳನ್ನು ಲೀಲಾಜಾಲವಾಗಿ ತಮ್ಮ ಹಳೆಯ ಶೈಲಿಯಲ್ಲಿ ನಿರೂಪಿಸಿದರು. ತೆಂಕುತಿಟ್ಟಿನ ಬಲಿಪ ಪರಂಪರೆಯ ಪ್ರತಿನಿಧಿ ಶಿವಶಂಕರ ಭಾಗವತರ ಪ್ರಬಲವಾದ ಧ್ವನಿಯ ಪದ್ಯಗಳು ಮತ್ತು ರವಿಚಂದ್ರ ಕನ್ನಡಿಕಟ್ಟೆಯವರ ವೈವಿಧ್ಯ ರಾಗರಂಜನೆಯಲ್ಲಿ ಮೇಳೈಸಿದ ಸಂಗೀತ ರಸಧಾರೆ ಹೃದ್ಯವೆನಿಸಿತು. ಚೆಂಡೆ-ಮದ್ದಳೆಯಲ್ಲಿ ಚೈತನ್ಯ ಪದ್ಯಾಣ ಮತ್ತು ಶ್ರೀಧರ ವಿಟ್ಲ ಉತ್ತಮ ಗುಣಮಟ್ಟದ ಸಾಥಿಯಾದರು. ಸಾಮಾನ್ಯವಾಗಿ ಪ್ರಚಲಿತವಿರುವ ಭರತನಾಟ್ಯ ಪ್ರಥಮ ರಂಗಪ್ರವೇಶದ ಸಮಾರಂಭದಂತೆ “ಗಾನದೀಕ್ಷಾ ಪ್ರದಾನ’ ನೆರವೇರಿತು. ಬಲಿಪ ನಾರಾಯಣ ಭಾಗವತರು ಉದ್ಘಾಟಿಸಿದರು. ಲೀಲಾವತಿ ಬೈಪಾಡಿತ್ತಾಯ ಯಕ್ಷಗಾನ ಹಾಡುಗಾರಿಕೆಯ ಪ್ರಥಮ ಸೊಲ್ಲು “ಗಜಮುಖದವಗೆ ಗಣಪಗೆ………’ ಶುಭಾಂಜನಾಳಿಗೆ ಉಪದೇಶಿಸಿದರು. ಕಲಾದೇವಿಯ ಪ್ರಸಾದದ ಜೊತೆ ಭಾಗವತರ ಜಾಗಟೆಯನ್ನು ವಿದ್ಯಾರ್ಥಿನಿಗೆ ವಿಧಿಯುಕ್ತವಾಗಿ ಹಸ್ತಾಂತರಿಸಲಾಯಿತು. ಪ್ರೊ.| ಎಮ್‌.ಎಲ್‌ ಸಾಮಗ ಮತ್ತು ಡಾ| ಎಮ್‌. ಪ್ರಭಾಕರ ಜೋಷಿ ನುಡಿಸೇಸೆ ನೀಡಿದರು.

ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ

Advertisement

Udayavani is now on Telegram. Click here to join our channel and stay updated with the latest news.

Next