Advertisement
ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಮೇಳಗಳಿಗೆ ಕೊರೊನಾ ಪೂರ್ವ ದಲ್ಲಿದ್ದಂತೆಯೇ ಇಡೀ ರಾತ್ರಿ ಪ್ರದರ್ಶ ನಕ್ಕೆ ಅನುಮತಿ ಕೋರಿ ಹೈಕೋರ್ಟ್‌ಗೆ ಕೃಷ್ಣ ಕುಮಾರ್ ಅವರು ಅರ್ಜಿ ಹಾಕಿ 15-11-2022ರ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ಕೋರಿದ್ದರು. ಇದಕ್ಕೆ ಸಮ್ಮತಿಸಿರುವ ಹೈಕೋರ್ಟ್, ಶಬ್ದ ಮಾಲಿನ್ಯ ನಿಯಮಾವಳಿ-2000 ಅನ್ನು ಉಲ್ಲಂಘಿಸಬಾರದು ಎಂದು ಷರತ್ತು ಹಾಕಿದೆ. ಅರ್ಜಿದಾರರು ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು, ಅವರು ಈ ಆದೇಶದಲ್ಲಿನ ಅಂಶಗಳನ್ನು ಆಧರಿಸಿ ಕ್ರಮ ಕೈಗೊಳ್ಳಬಹುದು ಎಂದಿದೆ.
ಹೈಕೋರ್ಟ್ ಸಮ್ಮತಿಸಿದ್ದರೂ ಕಾರ್ಯ ಯೋಗ್ಯವಲ್ಲ ಎಂಬ ಅಭಿಪ್ರಾಯವಿದೆ. ಕಾರಣ ಇಲ್ಲಿ ಮುಖ್ಯ ಸಮಸ್ಯೆ ಡೆಸಿಬಲ್(ಡಿಬಿ)ನದ್ದು. ಜನರು ಮಾತನಾಡುವಾಗಿನ ಧ್ವನಿಯೇ 50 ಡಿಬಿ ಇರುತ್ತದೆ. ಚೆಂಡೆಯ ಪೆಟ್ಟು 200 ಡಿಬಿ, ಧ್ವನಿವರ್ಧಕದ ಡಿಬಿ ಕನಿಷ್ಠ 450-500 ರಷ್ಟಿರುತ್ತದೆ. ನಾವು ಈ ವಿಷಯದಲ್ಲಿ ಹಿಂದೆಯೇ ಸೌಂಡ್ ಎಂಜಿನಿಯರ್‌ಗಳೊಂದಿಗೆ ಸಮಾಲೋಚಿಸಿದ್ದೇವೆ. ಆದರೆ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅನ್ವಯ ರಾತ್ರಿ 10ರಿಂದ ಬೆಳಗ್ಗೆ 6 ರ ವರೆಗೆ 50 ಡೆಸಿಬೆಲ್ ಮೀರುವಂತಿಲ್ಲ, ಹಾಗಾಗಿ ಇದು ಕಷ್ಟ ಎನ್ನುತ್ತಾರೆ ಕಟೀಲು ಮೇಳಕ್ಕೆ ಸಂಬಂಧಿಸಿದವರು. ಜಿಲ್ಲಾಧಿಕಾರಿಯವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ಮೇಳದ ಆಟಗಳು ಪರಂಪರೆ, ಸಂಪ್ರದಾಯ ದಂತೆ ನಡೆದುಕೊಂಡು ಬಂದಿರುವ ಸೇವೆ ಎನ್ನುವ ಅಂಶವನ್ನು ಗಮನದಲ್ಲಿರಿಸಿ ರಾತ್ರಿ 12.30ರ ವರೆಗೂ ಕಾಲಮಿತಿಯಲ್ಲಿ ವಿಶೇಷ ಪ್ರಕರಣವೆಂದು ಅನುಮತಿ ನೀಡಿದ್ದಾರೆ. ಈ ಮಧ್ಯೆ ಕಟೀಲು ಮೇಳವು ಕಳೆದ ವರ್ಷದಿಂದ ಕಾಲಮಿತಿ ಪ್ರದರ್ಶನ ಆರಂಭಿಸಿದ್ದು, ಈ ವರ್ಷದ ತಿರುಗಾಟಕ್ಕೂ ಚಾಲನೆ ನೀಡಿದೆ.
Related Articles
ಕರಾವಳಿಯ ಬಹುತೇಕ ಮೇಳಗಳು ಕಾಲಮಿತಿ ಪ್ರಯೋಗಕ್ಕೆ ಒಗ್ಗಿಕೊಂಡಿವೆ. ಕೆಲವೇ ಮೇಳಗಳು ಹಳ್ಳಿಗಳಲ್ಲಿ ರಾತ್ರಿ ಪೂರ್ತಿ ಪ್ರದರ್ಶನ ಪ್ರದರ್ಶಿಸುತ್ತಿವೆ. ಅಲ್ಲಿ ಸಮಸ್ಯೆಯಾಗಿಲ್ಲ. ಆದರೆ ಕಟೀಲು ಮೇಳದವರು ನಗರ, ಪಟ್ಟಣದ ವಸತಿ ಪ್ರದೇಶದಲ್ಲಿ ಹೆಚ್ಚಾಗಿ ಪ್ರದರ್ಶನ ನೀಡುತ್ತಾರೆ. ರಾತ್ರಿ ಯಾರಾದರೂ ಅಡ್ಡಿಪಡಿಸಿದರೆ ಅದು ಭಕ್ತರ ಸೇವೆಗೆ ಅಡ್ಡಿಯಾದಂತೆ ಎನ್ನುತ್ತಾರೆ ಕಟೀಲು ಮೇಳದವರು.
Advertisement