ಮಂಗಳೂರಿನಿಂದ 165 ಕಿ.ಮೀ. ದೂರದಲ್ಲಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಕ್ಷನೇ ಇಳಿದು ಬಂದಂತಾಗಿದೆ !
ತೆಂಕುತಿಟ್ಟು ಯಕ್ಷಗಾನ ವೇಷದ ಬೃಹತ್ ಭಿತ್ತಿ ಚಿತ್ರವೊಂದು ವಿಮಾನ ನಿಲ್ದಾಣದ ಗೋಡೆಯನ್ನು ಅಲಂಕರಿಸಿದೆ. ಅಂತಿಂಥ ಚಿತ್ರವಲ್ಲ, 9 ಮೀಟರ್ ಉದ್ದ ಮತ್ತು 6 ಮೀಟರ್ ಅಗಲದ ಬೃಹತ್ ಮ್ಯೂರಲ್. ಬಹುಶಃ ಯಕ್ಷಗಾನದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ… ಎಂದೆಲ್ಲ ಕ್ಲೀಶೆಯಾಗಿರುವ ಶೈಲಿಯಲ್ಲಿ ಇದನ್ನು ಬಣ್ಣಿಸಬಹುದು. ಅದನ್ನು ಬಿಟ್ಟು, ಈ ಮ್ಯೂರಲ್ ಕಲಾಕೃತಿ ಏಕೆ ಮಹಣ್ತೀದ್ದು ಎಂಬುದರ ಬಗ್ಗೆ ಗಮನ ಹರಿಸೋಣ.
ಒಂದನೆಯದಾಗಿ, ಇದು ಕೇರಳದ ನೆಲದಲ್ಲಿ ಸ್ಥಾಪನೆಯಾಗಿರುವಂಥ ಯಕ್ಷಗಾನದ ಕಲಾಕೃತಿ. ಹೇಳಿಕೇಳಿ ಕೇರಳ ನಾಡು ಕಥಕಳಿಗೆ ಹೆಸರುವಾಸಿ. ಕಥಕಳಿ ಮತ್ತು ಯಕ್ಷಗಾನ ಒಂದೇ ಮೂಲದಿಂದ ಹರಡಿದ ಕವಲುಗಳು. ಯಕ್ಷಗಾನ ಮೂಲವೊ, ಕಥಕಳಿ ಮೂಲವೊ- ಎಂದು ಶುಷ್ಕವಾಗಿ ಚರ್ಚಿಸುವುದಕ್ಕಿಂತ ಎರಡೂ ಕಲೆಗಳನ್ನು ಪರಸ್ಪರರು ಅಭಿಮಾನದಿಂದ ಕಾಣುವುದು ಮುಖ್ಯ. ಕೇರಳೀಯರು ಇತ್ತೀಚೆಗಿನ ದಿನಗಳಲ್ಲಿ ಯಕ್ಷಗಾನವನ್ನು ಪ್ರೋತ್ಸಾಹಿಸುತ್ತಿರುವುದನ್ನು ಗಮನಿಸಬೇಕು. ಕೇರಳದ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಯಕ್ಷಗಾನ ಕಲಿತು ಪ್ರದರ್ಶನಗಳನ್ನು ನೀಡುತ್ತಿದ್ದಾರೆ.
ಎರಡನೆಯದಾಗಿ, ಮೋಹಿನಿಯಾಟ್ಟಂ, ಕಥಕಳಿ, ಸತ್ರಿಯಾ, ಬಹೂ, ಕೂಚಿಪುಡಿ ಮುಂತಾದ ಹಲವು ಭಾರತೀಯ ಕಲೆಗಳಿಗೆ ಸಂಬಂಧಿಸಿದ ಕಲಾಕೃತಿಗಳು ಈ ವಿಮಾನ ನಿಲ್ದಾಣದಲ್ಲಿ ಪ್ರದರ್ಶನಗೊಂಡಿದ್ದರೂ ಯಕ್ಷಗಾನದ ಭಿತ್ತಿಚಿತ್ರ ಅತ್ಯಂತ ದೊಡ್ಡದಾಗಿರುವುದು ಉಲ್ಲೇಖನೀಯ.
ಮೂರನೆಯದಾಗಿ, ಇದು ತೆಂಕುತಿಟ್ಟು ಯಕ್ಷಗಾನದ ಸಾಂಪ್ರದಾಯಿಕ ವೇಷವಾಗಿರುವುದನ್ನು ಗಮನಿಸಬೇಕು. ಯಕ್ಷಗಾನದಲ್ಲಿ ಯಾವುದು ಸಾಂಪ್ರದಾಯಿಕ, ಯಾವುದು ನಾಟಕೀಯ ಎಂದು ಗುರುತಿಸುವ ದೃಷ್ಟಿ ಕ್ಷೀಣವಾಗುತ್ತಿದೆ. ಈ ದಿನಗಳಲ್ಲಿ ತೆಂಕುತಿಟ್ಟು ಯಕ್ಷಗಾನದ ಸುಂದರವಾದ ಪಾತ್ರಗಳು ನಾಟಕೀಯ ಮುಖವರ್ಣಿಕೆ, ಸುರುಳಿ ಮೀಸೆಯನ್ನು ಧರಿಸಿ ಕಿರೀಟವಿಲ್ಲದ ವೇಷಗಳಾಗಿ ಬದಲಾಗುತ್ತಿವೆ. ಬ್ಯಾನರ್‌ಗಳಲ್ಲಿ-ಕರಪತ್ರಗಳಲ್ಲಿ ಇಂಥ ವೇಷಗಳನ್ನೇ “ಮಾಡೆಲ್” ಆಗಿ ಬಳಸುತ್ತಾರೆ. ಆದರೆ, ಇವು ತೆಂಕುತಿಟ್ಟಿನ “ಅನನ್ಯತೆ’ಯನ್ನು ಬಿಂಬಿಸುವುದಿಲ್ಲ, ಅಂದವಾಗಿ ತೋರುವುದೂ ಇಲ್ಲ. ಹಾಗಾಗಿ, ಹೊರನಾಡಿನ ವೇದಿಕೆಯಿರಲಿ, ತೆಂಕುತಿಟ್ಟಿನ ಸ್ವಂತ ಪರಿಸರದಲ್ಲಿಯೇ ಬಡಗುತಿಟ್ಟಿನ ವೇಷಗಳ ಚಿತ್ರಗಳನ್ನು “ಮಾಡೆಲ್”ಗಳಾಗಿ ಬಳಸುವಂಥ ವಿಪರ್ಯಾಸದ ಸ್ಥಿತಿ ಕಂಡುಬಂದದ್ದಿದೆ ! ನಿರ್ಣಾಯಕ ಸ್ಥಾನದಲ್ಲಿರುವವರಿಗೆ ತೆಂಕು-ಬಡಗುಗಳ ವ್ಯತ್ಯಾಸವೂ ತಿಳಿದಿರುವುದಿಲ್ಲ !
ಆದರೆ, ಪ್ರಸ್ತುತ ಈ ಮ್ಯೂರಲ್ ಚಿತ್ರವು ಉಲ್ಲನ್ ಮೀಸೆಯನ್ನು ಧರಿಸಿದ ಸಾಂಪ್ರದಾಯಿಕ ಮುಖವರ್ಣಿಕೆ ಮತ್ತು ಪಂಚವರ್ಣ ಸಾಮರಸ್ಯದ ವೇಷಭೂಷಣಗಳೊಂದಿಗೆ ತೆಂಕುತಿಟ್ಟಿನ “ಅನನ್ಯತೆ’ಯ ಸಂಕೇತವಾಗಿರುವುದನ್ನು ಗಮನಿಸಬೇಕು.
ಈ ಕಲಾಕೃತಿಯನ್ನು ರಚಿಸಿದವರು ಪಯ್ಯನೂರಿನ ಫೋಕ್‌ಲೇಂಡ್‌ನೊಂದಿಗೆ ಗುರುತಿಸಿಕೊಂಡಿರುವ ವಿಶ್ವಪ್ರಸಿದ್ಧ ಮ್ಯೂರಲ್ ಕಲಾವಿದ ಕೆ. ಆರ್. ಬಾಬು ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ ಆ ಸಂಸ್ಥೆಯ ಪ್ರವರ್ತಕ ಡಾ. ವಿ. ಜಯರಾಜನ್. ಬಾಬು ಅವರೊಂದಿಗೆ ಆರು ಮಂದಿ ಕಲಾವಿದರು ಒಂದು ತಿಂಗಳ ಕಾಲ ಶ್ರಮಿಸಿ ಈ ಭಿತ್ತಿಚಿತ್ರವನ್ನು ಸಾಧ್ಯವಾಗಿಸಿದ್ದಾರೆ.
ಕೊಡಗಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ಒಂದು ಲೋಹಕಲಾಕೃತಿಯೂ ಇದೇ ವಿಮಾನನಿಲ್ದಾಣದಲ್ಲಿ ಇದ್ದು, ಇದನ್ನು ಮೈಸೂರು ಮೂಲದ ಕಲಾಸಂಸ್ಥೆಯೊಂದು ರಚಿಸಿದೆ.
ಕೆ. ಆರ್.