ಹೊನ್ನಾವರ: ನಗರದಿಂದ 10ಕಿಮೀ ದೂರ ಮಂಕಿಯ ರಾಷ್ಟ್ರೀಯ ಹೆದ್ದಾರಿ ಬದಿಗಿರುವ ಶ್ರೀಕೃಷ್ಣಮ್ಯೂಸಿಕ್‌ನ ಪುಟ್ಟ ಅಂಗಡಿ ಯಕ್ಷಗಾನದ ಮೂರು ತಲೆಮಾರುಗಳ ಮೌಲ್ಯಯುತ ಆಟ, ತಾಳಮದ್ದಲೆ ಅರ್ಥಧಾರಿಕೆ ಮತ್ತು ಭಾಗವತಿಕೆಯ ವೈಶಿಷ್ಟ್ಯವನ್ನು ರಕ್ಷಿಸುವ ಮತ್ತು ಆಸಕ್ತರಿಗೆ, ಅಭ್ಯಾಸಿಗಳಿಗೆ ಅದನ್ನು ವಿತರಿಸುವ ಕೆಲಸ ಮಾಡುತ್ತಿದೆ.
ಇಲೆಕ್ಟ್ರಾನಿಕ್ ದೃಶ್ಯ, ಧ್ವನಿ ಉಪಕರಣಗಳಲ್ಲಿ ದಿನೇದಿನೇ ಹೊಸತು ಬಂದಾಗ ಈ ಕ್ಷೇತ್ರಕ್ಕೆ ಹಣತೊಡಗಿಸಿದವರಿಗೆ ಬಡ್ಡಿ ಸಿಗಲಿಲ್ಲ. ಸಿಡಿ, ಡಿವಿಡಿಗಳು ನಕಲಿ ಯುಗದಲ್ಲಿ ಮೂಲಪ್ರತಿ ಖರೀದಿಸುವವರು ಇಲ್ಲವಾದರು.
ಈಗ ಪೆನ್‌ಡ್ರೈವ್, ಯೂಟ್ಯೂಬ್ ಯುಗದಲ್ಲಿ ಫೇಸ್‌ಬುಕ್, ವಾಟ್ಸ್‌ಅಪ್ ಕಾಲದಲ್ಲಿ ತುಣುಕುಗಳು ಪ್ರಸಾರವಾಗುತ್ತಾ ಮೂಲ ಸ್ವಾರಸ್ಯವನ್ನು ಹದೆಗೆಡಿಸುತ್ತಿದ್ದರೂ ಕೃಷ್ಣಮ್ಯೂಸಿಕ್‌ನ ಮಾರುತಿ ನಾಯಕ ಸಹೋದರರು ಎಮ್.ಪಿ3ಗಳಲ್ಲಿ ಯಕ್ಷಗಾನ, ತಾಳಮದ್ದಲೆ ಪ್ರಸಂಗಗಳನ್ನು, ಯಕ್ಷಗಾನ ಹಾಡುಗಳ ಸಿಡಿಯನ್ನು ಪ್ರಕಟಿಸುತ್ತಿದ್ದಾರೆ. ಈಗಾಗಲೇ ಯಕ್ಷಗಾನದ ಸಿಡಿ, ಡಿವಿಡಿಗಳ ಮುಖಾಂತರ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ನೂರಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರ ಆಟವನ್ನು ದಾಖಲಿಸಿದ್ದಾರೆ. ಪದ್ಮಶ್ರೀ ಚಿಟ್ಟಾಣಿಯವರ 60ಕ್ಕೂ ಹೆಚ್ಚು ಪ್ರಸಂಗಗಳಿವೆ.
ಹಿಂದಿನ ತಲೆಮಾರಿನ ತಾಳಮದ್ದಲೆ ವೈಭವಕ್ಕೆ ಕಾರಣರಾದ ಶೇಣಿ ಗೋಪಾಲಕೃಷ್ಣ ಭಟ್, ಸಾಮಗ ಸಹೋದದರು, ಕುಂಬ್ಳೆ ಸುಂದರರಾವ್ ಇವರ ಅರ್ಥಧಾರಿಕೆಯನ್ನೊಳಗೊಂಡ, ಏಳೆಂಟು ಪ್ರಸಂಗಗಳನ್ನೊಳಗೊಂಡ ಎಂಪಿ3 ಸಿಡಿಯನ್ನು ಹೊರತಂದಿದ್ದಾರೆ. ಯಕ್ಷರಾತ್ರಿ, ಯಕ್ಷಸಮೂಹ, ಯಕ್ಷಉತ್ಸವ, ಯಕ್ಷಪಂಚಮಿ, ಯಕ್ಷಸಂಪದ ಮೊದಲಾದ ತಾಳಮದ್ದಲೆ ಎಂಪಿ3. ಪ್ರಚಲಿತ ಯಕ್ಷಗಾನ ಭಾಗವತಿಕೆಗೆ ಮೌಲ್ಯತಂದುಕೊಟ್ಟ ಕೊಳಗಿ ಜನಸಾಲೆ, ಧಾರೇಶ್ವರ ಇವರು ಹಾಡಿದ ಕೊಳಗಿ ಗಾನಲಹರಿ, ರಾಘವ ರಾಗಸಂಗಮ, ಧಾರೇಶ್ವರ ಗಾನಧಾರೆ, ಮೊದಲಾದ ಭಾಗವತರ ಎಂಪಿ3ಗಳಿದ್ದು ಪ್ರತಿಯೊಂದರಲ್ಲಿಯೂ 50-70ಹಾಡುಗಳಿವೆ. ಕೇವಲ 70ರೂ. ಮುಖಬೆಲೆಯ ಇವುಗಳು ಯಕ್ಷಗಾನ ಆಸಕ್ತರಿಗೆ, ಕಲಿಯುವವರಿಗೆ, ಅತ್ಯಂತ ಉಪಕಾರಿ.
ಭಕ್ತಿಗೀತೆ, ಹರಿಕಥೆಗಳ ಸಿಡಿಗಳಿಂದ ಆರಂಭಿಸಿ ಯಕ್ಷಗಾನದ ಅಸಂಖ್ಯ ದೃಶ್ಯ, ಗಾನ, ನೃತ್ಯವೈಭವ ದಾಖಲಿಸಿದ ಕೃಷ್ಣಮ್ಯೂಸಿಕ್ ಒಂದು ರೀತಿಯಿಂದ ಕಲೆಯನ್ನು ರಕ್ಷಿಸಿ, ಹಸ್ತಾಂತರಿಸುವ ಕೆಲಸ ಮಾಡುತ್ತಿದೆ. ಮಾರುತಿ ನಾಯಕರ ಈ ಪರಿಯ ಕಲಾಸೇವೆಯನ್ನು ಅಭಿನಂದಿಸಲು 9448934052.