Advertisement

Yakshagana; ಮರೆಯಲಾಗದ ಮಹಾನುಭಾವರು: ಗತ್ತು ಗೈರತ್ತಿನ ರಾಮ ಗಾಣಿಗರು

08:06 PM Aug 09, 2023 | ವಿಷ್ಣುದಾಸ್ ಪಾಟೀಲ್ |

ನಡು ಬಡಗು ಯಕ್ಷಗಾನ ರಂಗ ಕಂಡ ಆಗ್ರ ಪಂಕ್ತಿಯ ಕಲಾವಿದರ ಹೆಸರಿನ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವುದೇ ಹಾರಾಡಿ ರಾಮ ಗಾಣಿಗರ ಹೆಸರು. ಇಂದಿನ ರೂಪಾಂತರಗೊಂಡಿರುವ ಯಕ್ಷಗಾನ ರಂಗದ ಬಹುಪಾಲು ಕಲಾ ಪ್ರೇಮಿಗಳಿಗೆ ರಾಮ ಗಾಣಿಗರ ಹೆಸರು ಅಷ್ಟೊಂದು ಪರಿಚಿತವಲ್ಲದಿದ್ದರೂ ಸಾಧನೆಯ ಶಿಖರವಾಗಿ ಸ್ಥಾಪಿತ ಹೆಸರು ಅವರದ್ದಾಗಿದೆ. ಹಿರಿಯ ಯಕ್ಷಗಾನ ವಿಮರ್ಶಕರಲ್ಲಿ, ಹಿರಿಯ ಕಲಾ ಪ್ರೇಮಿಗಳಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ದೀವಟಿಗೆಯ ಮಂದ ಬೆಳಕಿನಲ್ಲಿ ರಾರಾಜಿಸಿದ ರಾಮಗಾಣಿಗರ ಪ್ರಬುದ್ಧ ವೇಷಗಳ ವೈಭವ ಮಾಸುವುದು ಸಾಧ್ಯವೇ ಇಲ್ಲ.

Advertisement

ರಾಮ ಗಾಣಿಗರ ವಿಜೃಂಭಣೆಯ ಕಲಾ ವೈಭವ ದ ಕಾಲದಲ್ಲಿ ಯಾವುದೇ ವಿಡಿಯೋ ದಾಖಲಾತಿಗಳು ಆಗಿಲ್ಲ ಎನ್ನುವುದು ವಿಷಾದನೀಯ. ಆ ಕಾಲದಲ್ಲಿ ಆರಾಧನಾ ಕಲೆಯಾಗಿದ್ದ ಯಕ್ಷಗಾನ ಕರಾವಳಿಗರ ಏಕೈಕ ಮನರಂಜನೆಯ ಮಹಾಭಾಗ್ಯವಾಗಿತ್ತು. ರಾಮ ಗಾಣಿಗರ ಬೆರಳೆಣಿಕೆಯ ಫೋಟೋಗಳು ಮಾತ್ರ ಲಭ್ಯವಿದೆ.

ಗತ್ತಿನಲ್ಲೇ ಪಾತ್ರಕ್ಕೆ ಜೀವ
ರಾಮ ಗಾಣಿಗರ ಪಾತ್ರ ವೈಭವಗಳನ್ನು ಕಂಡವರ ಪೈಕಿ ಹಲವರು (ಎಂತಾ ಮಾರಾಯ ನಿನ್ನ ಜಾಪು ಅಂದ್ರೆ ಹಾರಾಡಿ ರಾಮ ಗಾಣಿಗರ ಕಣಂಗೆ…) ಇದಕ್ಕೆ ಕಾರಣವಾಗಿದ್ದು ರಾಮಗಾಣಿಗರ ಗಂಭೀರ ನಡೆಯ ರಂಗ ವೈಭವ. ಪಾತ್ರಕ್ಕೆ ಜೀವ ತುಂಬುವ ಗತ್ತುಗಾರಿಕೆ,ಗೈರತ್ತು, ನಿಲ್ಲುವ ಭಂಗಿ,ಸಮತೂಕದ ಹೆಜ್ಜೆಗಾರಿಕೆ, ಹಾರಾಡಿ ಶೈಲಿಯೇ ವೈಶಿಷ್ಟ್ಯತೆಯೇ ಅದಾಗಿ ರಂಗದಲ್ಲಿ ಮೆರೆದಿತ್ತು. ಪಾತ್ರದಾರಿಯಲ್ಲದೆಯೂ ಹಗಲು ಹೊತ್ತಿನಲ್ಲಿಯೂ ಅವರಿಗೆ ಜನ ನೀಡುತ್ತಿದ್ದ ವಿಶೇಷ ಗೌರವ, ಆ ಕಾಲದಲ್ಲಿ ಅವರಿಗಿದ್ದ ಸ್ಟಾರ್ ವ್ಯಾಲ್ಯೂ ಈ ರೀತಿಯ ಅಭಿಪ್ರಾಯಕ್ಕೆ ಕಾರಣವಾಗಿತ್ತು ಅನ್ನುತ್ತಾರೆ ಅವರ ಅಭಿಮಾನಿಗಳು.

ಒಡನಾಟದ ನೆನಪು
ರಾಮ ಗಾಣಿಗರನ್ನು ಕಂಡ ಅನೇಕ ಹಿರಿಯ ಕಲಾಭಿಮಾನಿಗಳ ಪ್ರಕಾರ ಬಯಲಾಟದ ವೇದಿಕೆಯಲ್ಲಿ ಪಾತ್ರವಾಗಿಯೂ ನಿಜ ಜೀವನದಲ್ಲಿ ತನ್ನದೇ ಆದ ಗಂಭೀರ ವ್ಯಕ್ತಿತ್ವವನ್ನು ಹೊಂದಿದ್ದ ಕಲಾವಿದರಲ್ಲಿ ಒಬ್ಬರು. ರಾಮ ಗಾಣಿಗರ ಒಡನಾಡಿ ಶತಾಯುಷಿ ದಿವಂಗತ ಹಿರಿಯಡಕ ಗೋಪಾಲ ರಾಯರನ್ನು ಮಾತನಾಡಿಸಿದ ವೇಳೆ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡಿದ್ದರು. ಮದ್ದಳೆ ವಾದಕ ರಾಗಿ ವಿಶ್ವಮಾನ್ಯತೆ ಪಡೆದಿದ್ದ ರಾಯರು ಹೇಳಿದ ಸದಾ ನೆನಪಿನಲ್ಲುಳಿಯುವ ಮಾತು ಅಂದರೆ ” ರಾಮ ಗಾಣಿಗರಂತಹ ಬೇರೊಬ್ಬ ಕಲಾವಿದರನ್ನು ನಾನು ಕಾಣಲು ಸಾಧ್ಯವಾಗಲಿಲ್ಲ, ಅನೇಕ ಸುಪ್ರಸಿದ್ದ ಕಲಾವಿದರು ಇರಬಹುದು. ಆದರೆ ರಾಮ ಗಾಣಿಗರು ತನ್ನದೇ ಆದ ಛಾಪು ಮೂಡಿಸಿ ಮತ್ತೊಬ್ಬರಿಂದ ಅದನ್ನು ಮಾಡಲು ಅಸಾಧ್ಯ ಎನಿಸುವಂತೆ ಮಾಡಿದವರು. ಅದಕ್ಕೆ ಸಾಕ್ಷಿಯೇ ಕೇಂದ್ರ ಸರಕಾರ ಅವರಿಗೆ ಆ ಕಾಲದಲ್ಲೇ ಯಾವುದೇ ಅರ್ಜಿ ಇಲ್ಲದೆ ಕರೆದು ಪ್ರಶಸ್ತಿ ಕೊಟ್ಟಿರುವುದು” ಎಂದರು. (1964 ರಲ್ಲಿ ಸರ್ವಪಲ್ಲಿ ಡಾ.ರಾಧಾಕೃಷ್ಣನ್‌ ಅವರಿಂದ ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದರು)

ಈಗ ಯಕ್ಷಗಾನ ರಂಗದಲ್ಲಿ ಕ್ಷೇತ್ರ ಮಾಹಾತ್ಮೆಗಳು, ದೇವಿ ಮಾಹಾತ್ಮೆಗಳಂತಹ ಪ್ರಸಂಗಗಳು ವ್ಯಾಪಕವಾಗಿ ಪ್ರದರ್ಶನಗೊಳ್ಳುತ್ತಿದ್ದರೆ ರಾಮ ಗಾಣಿಗರ ಕಾಲದಲ್ಲಿ ಸೀಮಿತ ಸಂಖ್ಯೆಯ ಪೌರಾಣಿಕ ಪ್ರಸಂಗಗಳು ಮಾತ್ರ ಪ್ರದರ್ಶನಗೊಳ್ಳುತ್ತಿದ್ದವು. ಹಿರಿಯ ವಿಮರ್ಶಕರು, ಪ್ರೇಕ್ಷಕರು ರಾಮ ಗಾಣಿಗರು ಜೀವ ತುಂಬಿದ್ದ ಕೆಲ ಪಾತ್ರಗಳನ್ನು ಇಂದಿಗೂ ನೆನಪಿಸಿಕೊಳ್ಳುವುದನ್ನು ಕಾಣಬಹುದು. ಅದರಲ್ಲಿ ವಿಶೇಷವಾಗಿ ತನ್ನದೇ ಆದ ಪರಿಕಲ್ಪನೆಯಿಂದ ರಾಮ ಗಾಣಿಗರು ವಿಜೃಂಭಿಸಿದ ಪಾತ್ರ ಕರ್ಣಾರ್ಜುನ ಕಾಳಗದ ದುರಂತ ಕಥಾನಾಯಕ ಕರ್ಣ. ಭಕ್ತ ಪ್ರಹ್ಲಾದ ಚರಿತ್ರೆಯ ಅಬ್ಬರಿಸುವ ಹಿರಣ್ಯ ಕಶ್ಯಪು, ಜಾಂಬವತಿ ಕಲ್ಯಾಣದ ಜಾಂಬವ. ಈಗ ರಂಗದಿಂದ ಮರೆಯಾದ ಅಂಗಾರವರ್ಮ, ಚಿತ್ರಸೇನ ಹೀಗೆ ಇನ್ನೂ ಕೆಲ ಪಾತ್ರಗಳಿವೆ.

Advertisement

ಖ್ಯಾತಿ ಪಡೆದಿದ್ದ ನಾಟಕೀಯ ಆಹಾರ್ಯದ ಹಿರಣ್ಯ ಕಶ್ಯಪು…(ಮುಂದುವರಿಯುವುದು)

Advertisement

Udayavani is now on Telegram. Click here to join our channel and stay updated with the latest news.

Next