Advertisement
ಯಕ್ಷಗಾನವೊಂದರ ಪ್ರದರ್ಶನ ಬಳಿಕ ಅಭಿಮಾನಿಯೊಬ್ಬರು ಯುವ ಕಲಾವಿದನೊಬ್ಬನ ಪಾತ್ರವನ್ನು ನೋಡಿ ತಟ್ಟನೆ ಹಿರಿಯ ಕಲಾವಿದರ ಹೆಸರು ಹೇಳಿ …..ಅವರ ಹಾಗೆ ಆಗದಿದ್ದರೂ ಅಡ್ಡಿಲ್ಲ..ಮಾಡಿದ್ದಾನೆ… ಎನ್ನುವುದು ರೂಢಿ.
Related Articles
Advertisement
ನಳದಮಯಂತಿ ಪ್ರಸಂಗದಲ್ಲಿ ತೆಂಕು ತಿಟ್ಟಿನಲ್ಲಿ ಸವಾಲಿನ ಪಾತ್ರವಾದ ಬಾಹುಕ ಪಾತ್ರಕ್ಕೆ ಪೆರುವೋಡಿ ನಾರಾಯಣ ಭಟ್ಟರು ತನ್ನದೇ ಆದ ನ್ಯಾಯ ಒದಗಿಸಿ ಅಭಿಮಾನಿಗಳಲ್ಲಿ ತನ್ನದೇ ಆದ ಹೆಸರು ಉಳಿಸಿಕೊಂಡಿದ್ದಾರೆ. ಬಡಗಿನ ಹಿರಿಯ ಪ್ರೇಕ್ಷಕರು ಬಾಹುಕನ ಪಾತ್ರದಲ್ಲಿ ಹಾಸ್ಯಗಾರ ಕೋರ್ಗು ಅವರನ್ನು ನೆನಪಿಸಿಕೊಳ್ಳುತ್ತಾರೆ.
ಬಡಗುತಿಟ್ಟಿನಲ್ಲಿ ಇಂದು ಬಡವಾಗುತ್ತಿರುವ ಬಣ್ಣದ ವೇಷದ ವಿಚಾರಕ್ಕೆ ಬಂದರೆ ಎಲ್ಲರೂ ಸಕ್ಕಟ್ಟು ಲಕ್ಷ್ಮಿ ನಾರಾಯಣಯ್ಯ ಅವರನ್ನು ನೆನಪಿಸಿ ಕೊಳ್ಳುತ್ತಾರೆ. ಅವರ ಆಳ್ತನ, ಸ್ವರ ತ್ರಾಣ, ವೇಷಗಾರಿಕೆಯ ವೈಭವ, ದೈತ್ಯಾಕಾರ ಪ್ರೇಕ್ಷಕರಲ್ಲಿ ನಿಜವಾಗಿಯೂ ಭೀತಿ ಹುಟ್ಟಿಸುವಂತಾಗಿತ್ತು. ಇಂದು ಅಂತಹ ವೇಷಗಳು ಕಾಣ ಸಿಗುವುದಿಲ್ಲ ಎನ್ನುವುದು ಹಿರಿಯ ಕಲಾವಿದರದ್ದು, ಪ್ರೇಕ್ಷಕರ ಕೊರಗು..
ಯಕ್ಷಗಾನದಲ್ಲಿ ‘ನಡೆ’ ಅಂದರೆ ಪಾತ್ರಕ್ಕೆ ಇರುವ ದಾರಿ . ಹೀಗೆ ಸಾಗಬೇಕು ಎನ್ನುವ ಕ್ರಮ ಇದೆ. ಅಂದರೆ ಮಾತುಗಾರಿಕೆಯಲ್ಲೂ , ಅಭಿನಯದಲ್ಲೂ , ವೇಷಗಾರಿಕೆಯಲ್ಲೂ ಕೆಲ ವಿಶಿಷ್ಟತೆಗಳಿವೆ. ಇಲ್ಲಿ ಒಬ್ಬ ಮಾಡಿದಂತೆ ಇನ್ನೊಬ್ಬ ಮಾಡಬೇಕೆಂದೆನಿಲ್ಲ ಆದರೆ ಪಾತ್ರದ ಔಚಿತ್ಯ ಪ್ರಧಾನವಾಗುತ್ತದೆ. ಹೀಗಾಗಿ ಪದ್ಯಕ್ಕೆ ಕುಣಿಯುವಾಗಲೂ , ಅರ್ಥ ಹೇಳುವಾಗಲೂ ಹಿರಿಯ ಕಲಾವಿದರ ಮಾರ್ಗದರ್ಶನ ಪಡೆಯುವುದು ಅನಿವಾರ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಯುವ ಕಲಾವಿದರಲ್ಲಿ ಕಲಿಯುವ ಮತ್ತು ಹಿರಿಯರಲ್ಲಿ ಕೇಳುವ ಆಸಕ್ತಿ ಕಡಿಮೆಯಾಗುತ್ತಿರುವುದು, ತನ್ನದೇ ಆದ ಹೊಸ ಶೈಲಿ (ಯಕ್ಷಗಾನ ರಂಗಭೂಮಿಗೆ ಸರಿಹೊಂದದ) ಹುಟ್ಟು ಹಾಕಲು ಯತ್ನಿಸುತ್ತಿರುವುದು ಕಲೆ ಬೆಳೆದು ಬಂದ ಹಾದಿಯನ್ನು ಬಿಟ್ಟು ಅಡ್ಡ ದಾರಿ ಹಿಡಿದುದನ್ನು ಸೂಚಿಸುತ್ತಿದೆ ಎನ್ನಬಹುದು.
ಮುಂದುವರಿಯುವುದು…